ಬೆಂಗಳೂರು: “ಈ ಸಲ ಕಪ್ ನಮ್ದೆ” ಎಂಬ ಘೋಷಣೆ ಕೇವಲ ಮಾತಾಗಿ ಉಳಿದಿಲ್ಲ, ಅದು ಈಗ ವಾಸ್ತವವಾಗಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) 2026ರ ರೋಚಕ ಫೈನಲ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಐತಿಹಾಸಿಕ ಜಯ ಸಾಧಿಸಿದೆ. ಬರೋಬ್ಬರಿ 12 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಕಿಚ್ಚ ಸುದೀಪ್ ನೇತೃತ್ವದ ಪಡೆ ಮೂರನೇ ಬಾರಿಗೆ ಟ್ರೋಫಿಯನ್ನು ಎತ್ತಿ ಹಿಡಿದು, ಕರುನಾಡಿಗೆ ಕೀರ್ತಿ ತಂದಿದೆ.
ಕೊಯಮತ್ತೂರಿನ ಎಸ್.ಎನ್.ಆರ್ ಕಾಲೇಜ್ ಮೈದಾನದಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ, ಬಲಿಷ್ಠ ಬೆಂಗಾಲ್ ಟೈಗರ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಬುಲ್ಡೋಜರ್ಸ್ ಪಡೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಫೈನಲ್ ಕದನದ ಹೈಲೈಟ್ಸ್: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಾಲ್ ಟೈಗರ್ಸ್ ನೀಡಿದ್ದ 130 ರನ್‌ಗಳ ಸವಾಲನ್ನು ಬೆನ್ನಟ್ಟಿದ ಕರ್ನಾಟಕ ಬುಲ್ಡೋಜರ್ಸ್, ಸಂಘಟಿತ ಪ್ರದರ್ಶನ ನೀಡಿತು. ತಂಡದ ಸ್ಟಾರ್ ಆಟಗಾರ ರಾಜೀವ್ ಹನು ಕೇವಲ 35 ಎಸೆತಗಳಲ್ಲಿ 69 ರನ್ ಸಿಡಿಸುವ ಮೂಲಕ ಎದುರಾಳಿಗಳ ಲೆಕ್ಕಾಚಾರ ತಲೆಕೆಳಗಾಗಿಸಿದರು. ಇವರ ಅಮೋಘ ಆಟಕ್ಕೆ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ಒಲಿದು ಬಂತು. ಇನ್ನು ಬೌಲಿಂಗ್ ವಿಭಾಗದಲ್ಲಿ ಕರಾರುವಕ್ಕಾದ ದಾಳಿ ನಡೆಸಿದ ಪ್ರತಾಪ್, ‘ಅತ್ಯುತ್ತಮ ಬೌಲರ್’ ಗೌರವಕ್ಕೆ ಪಾತ್ರರಾದರು.
ಈ ಗೆಲುವಿನೊಂದಿಗೆ 2013 ಮತ್ತು 2014ರ ನಂತರ, 2026ರಲ್ಲಿ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಸಿಸಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿ ಬುಲ್ಡೋಜರ್ಸ್ ಗುರುತಿಸಿಕೊಂಡಿದೆ.
ಗೆಲುವು ಕೇವಲ ಆಟವಲ್ಲ, ಇದೊಂದು ಎಮೋಷನ್: ಕಿಚ್ಚ ಸುದೀಪ್ ಬೆಂಗಳೂರಿನಲ್ಲಿ ಟ್ರೋಫಿಯೊಂದಿಗೆ ಆಗಮಿಸಿದ ತಂಡದ ನಾಯಕ ಕಿಚ್ಚ ಸುದೀಪ್ ಭಾವುಕರಾಗಿ ಮಾತನಾಡಿದರು. “ನಮಗೆ ಇದು ಕೇವಲ ಒಂದು ಟೂರ್ನಮೆಂಟ್ ಅಲ್ಲ, ಇದೊಂದು ಭಾವನೆ. ಅದ್ಭುತ ಆಟಗಾರರ ತಂಡವನ್ನು ಮುನ್ನಡೆಸಿ, ದಶಕದ ನಂತರ ಕಪ್ ಅನ್ನು ಮನೆಗೆ ತರುತ್ತಿರುವುದು ಪದಗಳಲ್ಲಿ ವಿವರಿಸಲಾಗದ ಅನುಭವ. ಕಷ್ಟದ ದಿನಗಳಲ್ಲೂ ನಮ್ಮನ್ನು ಕೈಬಿಡದೆ ಬೆಂಬಲಿಸಿದ ಅಭಿಮಾನಿಗಳಿಗೆ ಈ ಗೆಲುವು ಅರ್ಪಣೆ,” ಎಂದು ಹರ್ಷ ವ್ಯಕ್ತಪಡಿಸಿದರು.
ತಂಡದ ಮಾಲೀಕ ಅಶೋಕ್ ಖೇಣಿ ಮಾತನಾಡಿ, “ನಾವು ಕೇವಲ ಗೆಲುವಿಗಾಗಿ ಆಡಲಿಲ್ಲ, ಇಡೀ ಚಂದನವನದ ಗೌರವಕ್ಕಾಗಿ ಆಡಿದೆವು. 12 ವರ್ಷಗಳ ನಂತರ ಟ್ರೋಫಿ ಮರಳಿರುವುದು ನಮಗೆಲ್ಲರಿಗೂ ಹೆಮ್ಮೆಯ ಕ್ಷಣ,” ಎಂದರು.
ಅಭಿಮಾನಿಗಳಿಗೂ ಸಿಗಲಿದೆ ಆಡುವ ಅವಕಾಶ! ಸಿಸಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅಭಿಮಾನಿಗಳಿಗಾಗಿ ‘ವೈಲ್ಡ್ ಕಾರ್ಡ್’ ಪ್ರವೇಶವನ್ನು ಘೋಷಿಸಲಾಗಿದೆ. ಕ್ರಿಕೆಟ್ ಆಸಕ್ತರು CCL.in ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡದ ಭಾಗವಾಗುವ ಸುವರ್ಣಾವಕಾಶವನ್ನು ಪಡೆಯಬಹುದು. ಆಯ್ಕೆಯಾದ ಅದೃಷ್ಟಶಾಲಿ ಅಭಿಮಾನಿಗಳು ಕಿಚ್ಚ ಸುದೀಪ್ ಅವರ ನಾಯಕತ್ವದಲ್ಲಿ ಮೈದಾನಕ್ಕಿಳಿದು ಆಡುವ ಅವಕಾಶವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.