ಚಿತ್ರದುರ್ಗ : ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ “69ನೇ ಕನ್ನಡ ರಾಜ್ಯೋತ್ಸವ” ವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಶ್ರೀಯುತ ಕೆ.ಎಂ.ಶಿವಸ್ವಾಮಿ, ವಿಜ್ಞಾನ ಶಿಕ್ಷಕರು, ಪತ್ರಿಕಾ ವರದಿಗಾರರು, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರು ಪ್ರಸ್ತುತ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿದ್ದು, ಹೆಸರಾಂತ ಸಂಶೋಧನಗಾರರಾದ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಕನ್ನಡ ಭಾಷೆಗಳ ರಾಣಿ ಇದು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು, ಭಾರತದಲ್ಲಿ ಇಲ್ಲಿಯವರೆಗೂ 15 ಭಾಷೆಗಳು ಶಾಸ್ತ್ರೀಯ ಸ್ಥಾನಮಾನವನ್ನು ಪಡೆದುಕೊಂಡಿವೆ. ಅದರಲ್ಲಿ ಕನ್ನಡ ಭಾಷೆಯೂ ಒಂದಾಗಿದೆ. ಕರ್ನಾಟಕ ಇತಿಹಾಸಕ್ಕೆ ಸಂಬಂಧಪಟ್ಟಂತೆ ಚಿತ್ರದುರ್ಗ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಈಗಿನ ಮೊಳಕಾಲ್ಮೂರು ತಾಲ್ಲೂಕಿನ ‘ಇಸಿಲ’ ಎಂಬ ಗ್ರಾಮವು ಐದು ಸಾವಿರ ವರ್ಷಗಳ ಹಿಂದೆಯೇ ಕನ್ನಡ ಭಾಷೆ ಮಾತನಾಡುವ ಜನರು ವಾಸವಾಗಿದ್ದರು ಎಂಬ ಕುರುಹು ದೊರೆತಿದೆ. ಅಷ್ಟೇ ಅಲ್ಲದೇ ಅಶೋಕನ ಹಲವಾರು ಶಾಸನಗಳು ಕರ್ನಾಟಕದಲ್ಲಿ ದೊರೆತಿರುವುದು ಹೆಮ್ಮೆಯ ವಿಷಯ. ಕನ್ನಡವನ್ನು ಬಳಸುವುದರ ಮೂಲಕ ಬೆಳೆಸುವ ಕೆಲಸ ನಮ್ಮದಾಗಲಿ ನವೆಂಬರ್ ಕನ್ನಡಿಗರಾಗದೆ, ನಂ 1 ಕನ್ನಡಿಗರಾಗಿ ನಮ್ಮ ನಾಡು ನುಡಿಯನ್ನು ಬೆಳೆಸುವಂತಹ ಕೆಲಸ ನಮ್ಮದಾಗಲಿ ಎಂದು ತಿಳಿಸಿದರು. ಅಲ್ಲದೇ 2023 -24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ 125 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಈ ದಿನ ಸನ್ಮಾನಿಸುತ್ತಿರುವುದು ಸಂತೋಷದಾಯಕ ವಿಷಯ ಎಂದು ತಿಳಿಸಿದರು.
ಶಾಲೆಯ ಮುಖ್ಯೋಪಾದ್ಯಾಯರಾದ ಎನ್.ಜಿ.ತಿಪ್ಪೇಸ್ವಾಮಿ ಅವರು ಪ್ರಸ್ತಾವಿಕ ನುಡಿಗಳನ್ನು ಹೇಳುತ್ತಾ ಜಿ.ಪಿ.ರಾಜರತ್ನಂ ಅವರ ರತ್ನನ್ ಪದಗಳನ್ನು ಹೇಳಿ, 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ 125 ಅಂಕಗಳಿಗೆ 125 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಮ್ಮ ಶಾಲೆಯ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ “ಕನ್ನಡ ಮಾಣಿಕ್ಯ” ಎಂಬ ಬಿರುದನ್ನು ನೀಡಿ ಗೌರವಿಸುವುದು ಹೆಮ್ಮೆಯ ವಿಷಯ. ಕಳೆದ ಬಾರಿ ಅಂಕ ಗಳಿಸಿದ ವಿದ್ಯಾರ್ಥಿಗಳಂತೆಯೇ ಮುಂದಿನ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಇವರಿಂದ ಪ್ರೇರಿತರಾಗಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ 125 ಅಂಕಗಳಿಗೆ 125 ಅಂಕಗಳನ್ನು ಪಡೆಯುವಂತಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಐ.ಸಿ.ಎಸ್.ಇ ಪ್ರಾಚಾರ್ಯರಾದ ಶ್ರೀ ಬಸವರಾಜಯ್ಯ ಪಿ ಅವರು ಮಾತನಾಡುತ್ತಾ ಕನ್ನಡ ಎನೆ ಕುಣಿದಾಡುವುದೇನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು ಎಂಬ ಕವಿಯ ವಾಣಿಯಂತೆ ಯಾರೇ ಕನ್ನಡ ಭಾಷೆಯಲ್ಲಿ ಮಾತನಾಡಿದರೂ ನಮ್ಮ ಗಮನ ಆ ಕಡೆ ಸೆಳೆಯುತ್ತದೆ. ಅದೂ ಮಾತೃ ಭಾಷೆಯ ಸೆಳೆತ, ಎಲ್ಲಾ ಭಾಷೆಯನ್ನು ಕಲಿಯೋಣ ಆದರೆ ಮಾತೃಭಾಷೆಯನ್ನು ಬಳಸೋಣ,ಬೆಳೆಸೋಣ, ನಾನು ಗಣಿತ ಶಿಕ್ಷಕನಾದರೂ ಕೂಡ ಕನ್ನಡ ನನಗೆ ಅಚ್ಚ್ಚುಮೆಚ್ಚಿನ ವಿಷಯ ಎಂದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಎಂ.ಪೃಥ್ವೀಶ ಅವರು ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿಯೂ ಕನ್ನಡಿಗರೂ ಕೀರ್ತಿ ಪತಾಕೆಯನ್ನು ಸಾಧಿಸುತ್ತಿರುವುದು ಕನ್ನಡಿಗರಾದ ನಮಗೆ ಹೆಮ್ಮೆಯ ವಿಷಯ. ಮಕ್ಕಳಾದಂತಹ ನೀವುಗಳು ಸಹ ಭವಿಷ್ಯದಲ್ಲಿ ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಸಾಧನೆಗೈಯುವಂತಾವರಾಗಿ ಎಂದು ತಿಳಿಸಿದರು. ತಾವು ಮಾಡುವಂತಹ ಸಾಧನೆಯಲ್ಲಿ ‘ಕನ್ನಡಿಗರು’ ಎಂಬ ಹೆಮ್ಮೆ ನಮ್ಮಲ್ಲಿ ಇರಲಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಬಿ. ವಿಜಯ್ ಕುಮಾರ್ ಅವರು ಮಾತನಾಡುತ್ತಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಶ್ರೀಯುತ ಕೆ.ಎಂ.ಶಿವಸ್ವಾಮಿರವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡ ಭಾಷೆಯ ಉಳಿವಿಗಾಗಿ ಹಲವಾರು ಉತ್ತಮ ಕಾರ್ಯಗಳ ಮೂಲಕ ಉತ್ತಮ ಸ್ನೇಹ ಜೀವಿಯಾಗಿ,ಕೈಗೊಂಡ ಕೆಲಸ,ಕಾರ್ಯಗಳು ಇವರ ಸಾಧನೆ ಹಾಗೂ ಇವರ ಪರಿಶ್ರಮವನ್ನು ತಿಳಿಸುತ್ತದೆ ಎಂದರು. ಇವರು ಕಾರ್ಯಕ್ರಮಕ್ಕೆ ಆಗಮಿಸಿ ನಮ್ಮ ಶಾಲೆಯ ಮಕ್ಕಳಿಗೆ, ಕನ್ನಡದಲ್ಲಿ 125ಕ್ಕೆ 125 ಅಂಕಗಳನ್ನು ಗಳಿಸಿ ಮುಂದಿನ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸ್ಫೂರ್ತಿಯನ್ನು ತುಂಬಿದ್ದಾರೆ ಎಂದರು. ಶಿಕ್ಷಕರ ಪ್ರಯತ್ನ, ಪೋಷಕರ ಸಹಕಾರ, ಮಕ್ಕಳ ಒಳ್ಳೆಯ ಫಲಿತಾಂಶ ಬರುವಲ್ಲಿ ಸಹಾಯವಾಗಲಿದೆ. ಅಲ್ಲದೇ ಕನ್ನಡದ ಉಳಿವಿಗೆ ನಿಮ್ಮ ಪಾತ್ರ ಅಮೂಲ್ಯವಾದದ್ದು ಎನ್ನುತ್ತಾ ನಿರಂತರವಾಗಿ ಕನ್ನಡ ಭಾಷೆಯ ಬೆಳವಣಿಗಾಗಿ ಶ್ರಮಿಸಿದ ಇವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಐ.ಸಿ.ಎಸ್.ಇ. ಉಪಪ್ರಾಚಾರ್ಯರಾದ ಅವಿನಾಶ್.ಬಿ ,ಬೋಧಕ/ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಪೋಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಶಾ ರೆಡ್ಡಿ ಮತ್ತು ಶಿಫಾ ಮರಿಯಂ ನಿರೂಪಿಸಿದರು. ಕುಮಾರಿ ತೃಷಾ ಜಿ ಆರ್ ಪ್ರಾರ್ಥಿಸಿದರು. ಕುಮಾರಿ ಗ್ರೀಷ್ಮಾ ಸ್ವಾಗತಿಸಿದರು, ಕುಮಾರಿ ಜಾಹ್ನವಿ ಬಿ.ಎಸ್ ವಂದಿಸಿದರು.