CET Result 2024: ಕರ್ನಾಟಕ ಸಿಇಟಿ ಫಲಿತಾಂಶ ಯಾವಾಗ? ಸ್ಪಷ್ಟನೆ ನೀಡಿದ ಕೆಇಎ

ಬೆಂಗಳೂರು, (ಮೇ 20): ಈಗಾಗಲೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಇದೀಗ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಬರೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ ) ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಇನ್ನು ಈ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪ್ರತಿಕ್ರಿಯಿಸಿದ್ದು, ದ್ವಿತೀಯ ಎರಡನೇ ಪರೀಕ್ಷೆ ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷೆಗಳ ಫಲಿತಾಂಶ ಘೋಷಣೆಯಾದ ನಂತರವೇ ಸಾಮಾನ್ಯ ಪ್ರವೇಶ ಪರೀಕ್ಷೆಯ (CET-24) ಫಲಿತಾಂಶವನ್ನು (Karnataka CET Result) ಪ್ರಕಟಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಇಂದು ಸೋಮವಾರ (ಮೇ 20) ಫಲಿತಾಂಶ ಪ್ರಕಟಿಸುತ್ತಾರೆ ಎಂದು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿತ್ತು. ಇದರ ಬೆನ್ನಲ್ಲೇ ರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಪ್ರತಿಕ್ರಿಯಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಸತ್ಯಕ್ಕೆ ದೂರವಾದುದು. ದ್ವಿತೀಯ ಎರಡನೇ ಪರೀಕ್ಷೆ ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷೆಗಳ ಫಲಿತಾಂಶ ಘೋಷಣೆಯಾದ ನಂತರವೇ ಸಿಇಟಿ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ಪರೀಕ್ಷೆಯನ್ನು ಏಪ್ರಿಲ್ 18, 19ರಂದು ನಡೆಸಿತ್ತು. ಇದರ ಫಲಿತಾಂಶವು ಲೋಕಸಭಾ ಚುನಾವಣೆಯ ರಿಸಲ್ಟ್‌ ಬಳಿಕವೇ ಘೋಷಣೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಸ್ಪಷ್ಟನೆ ನೀಡಿದ್ದು, ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಫಲಿತಾಂಶ ನಂತರವೇ ಸಿಇಟಿ ಫಲಿತಾಂಶವನ್ನು ಪ್ರಕಟ ಮಾಡಲಾಗುವುದು ಎಂದು ಹೇಳಿದ್ದಾರೆ.

ಜೆಕೆವಿಕೆಯ ಪ್ರಾಯೋಗಿಕ ಪರೀಕ್ಷೆ ಮೇ 25ರಂದು ನಡೆಯಲಿದ್ದು, ಫಲಿತಾಂಶ ಮೇ 30ರಂದು ಪ್ರಕಟವಾಗಲಿದೆ. ಇನ್ನು ದ್ವಿತೀಯ ಪಿಯು ಪರೀಕ್ಷೆ-2ರ ಫಲಿತಾಂಶ ಮೇ 30ರಂದು ಪ್ರಕಟವಾಗುವ ಸಾಧ್ಯತೆಗಳಿವೆ. ಇದಾದ ಬಳಿಕ ಸಿಇಟಿ ರಿಸಲ್ಟ್​ ಪ್ರಕಟವಾಗಲಿದೆ. ಈ ಬಾರಿ 3.49 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದರು. ಪ್ರತಿ ವರ್ಷ ಮೇ, ಜೂನ್‌ನಲ್ಲಿ ಪರೀಕ್ಷೆ ನಡೆದರೆ ಈ ಬಾರಿ ಏಪ್ರಿಲ್‌ನಲ್ಲೇ ಪರೀಕ್ಷೆ ನಡೆಸಲಾಗಿತ್ತು. ಆದರೆ, ಅಧಿಕಾರಿಗಳ ಎಡವಟ್ಟಿನಿಂದ ಫಲಿತಾಂಶ ವಿಳಂಬವಾಗಿದೆ ಎಂಬ ದೂರುಗಳೂ ಕೇಳಿ ಬರುತ್ತಿವೆ.

ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿಗೆ ಮೂರು ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಮೊದಲ ಎರಡು ಪರೀಕ್ಷೆಗಳ ಪೈಕಿ ಯಾವುದರಲ್ಲಿ ಹೆಚ್ಚು ಅಂಕ ಬಂದಿದೆಯೊ ಅವುಗಳನ್ನೇ ಸಿಇಟಿ ರ‍್ಯಾಂಕ್‌ಗೆ ಪರಿಗಣನೆ ಮಾಡಲಾಗುವುದು ಎಂದು ಹೇಳಲಾಗಿದೆ. ಹೀಗಾಗಿ ಎರಡನೇ ಪರೀಕ್ಷೆಯ ಫಲಿತಾಂಶಕ್ಕಾಗಿ ಕೆಇಎ ಕಾಯುವುದು ಅನಿವಾರ್ಯವಾಗಿದೆ.

Source : https://tv9kannada.com/education/cet-result-announce-after-second-puc-2nd-exam-result-says-kea-rbj-835344.html

Leave a Reply

Your email address will not be published. Required fields are marked *