Champions Trophy 2025: ಸೋತ ಆಫ್ರಿಕಾ; ಭಾರತ- ನ್ಯೂಜಿಲೆಂಡ್ ನಡುವೆ ಚಾಂಪಿಯನ್ಸ್ ಟ್ರೋಫಿ ಫೈನಲ್‌.

2025 ರ ಚಾಂಪಿಯನ್ಸ್ ಟ್ರೋಫಿಯ ಎರಡನೇ ಸೆಮಿಫೈನಲ್ ಪಂದ್ಯ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಿತು. ಎರಡೂ ತಂಡಗಳು ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 362 ರನ್​ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಮತ್ತೊಮ್ಮೆ ನಿರ್ಣಾಯಕ ಪಂದ್ಯದಲ್ಲಿ ಎಡವಿ ಸೋಲಿಗೆ ಕೊರಳೊಡ್ಡಿತು. ಇದೀಗ ಪಾಕಿಸ್ತಾನದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿರುವ ನ್ಯೂಜಿಲೆಂಡ್ ತಂಡ ಬರುವ ಭಾನುವಾರ ನಡೆಯಲ್ಲಿರುವ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ದುಬೈನಲ್ಲಿ ಎದುರಿಸಲಿದೆ.

ಆಫ್ರಿಕಾದ ಬ್ಯಾಟಿಂಗ್ ವೈಫಲ್ಯ

ಲಾಹೋರ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಕಿವೀಸ್ ತಂಡವು 50 ಓವರ್‌ಗಳಲ್ಲಿ 363 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಪರ ಬ್ಯಾಟಿಂಗ್ ವಿಭಾಗ ಸಂಪೂರ್ಣವಾಗಿ ವಿಫಲವಾಯಿತು. ಮೊದಲ ಓವರ್‌ನಿಂದಲೇ ಕಿವೀಸ್ ಬೌಲರ್‌ಗಳು ಬಿಗಿಯಾಗಿ ಬೌಲಿಂಗ್ ಮಾಡಿ, ರನ್ ಗಳಿಸಲು ಯಾವುದೇ ಅವಕಾಶವನ್ನು ನೀಡಲಿಲ್ಲ. ಈ ಒತ್ತಡದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪರೇಡ್ ಪ್ರಾರಂಭಿಸಿದರು. 5 ನೇ ಓವರ್‌ನಲ್ಲಿ ಆರಂಭಿಕ ರಯಾನ್ ರಿಕಲ್ಟನ್ ಮ್ಯಾಟ್ ಹೆನ್ರಿಗೆ ವಿಕೆಟ್ ನೀಡಿದರು.

ಬವುಮಾ- ಡುಸೆನ್ ಜೊತೆಯಾಟ

ಆದಾಗ್ಯೂ, ಇದರ ನಂತರ ನಾಯಕ ಟೆಂಬಾ ಬವುಮಾ ಮತ್ತು ರಾಸ್ಸಿ ವ್ಯಾನ್ ಡೆರ್ ಡುಸೆನ್ ನಡುವೆ 105 ರನ್‌ಗಳ ಪಾಲುದಾರಿಕೆ ಇತ್ತು. ಆದರೆ ನಿಧಾನಗತಿಯ ಆಟದಿಂದಾಗಿ ಒತ್ತಡ ಹೆಚ್ಚುತ್ತಲೇ ಇತ್ತು. ಅದರ ಪರಿಣಾಮ ಗೋಚರಿಸುತ್ತಿತ್ತು. 125 ರನ್ ಗಳಿಗೆ ಎರಡನೇ ವಿಕೆಟ್ ರೂಪದಲ್ಲಿ ಬವುಮಾ ಔಟಾದ ನಂತರ, ಯಾವುದೇ ಬ್ಯಾಟ್ಸ್ ಮನ್ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಆ ಬಳಿಕ ನಿಯಮಿತ ಅಂತರದಲ್ಲಿ ವಿಕೆಟ್​ಗಳು ಬೀಳುತ್ತಲೇ ಸಾಗಿದವು. ಇದರ ಪರಿಣಾಮವಾಗಿ ತಂಡವು 161 ರನ್‌ಗಳಿಗೆ ಮೂರನೇ ವಿಕೆಟ್ ಮತ್ತು 167 ರನ್‌ಗಳಿಗೆ ನಾಲ್ಕನೇ ವಿಕೆಟ್ ಕಳೆದುಕೊಂಡಿತು.

Image
Image
Image

ಮಿಲ್ಲರ್ ಶತಕ ವ್ಯರ್ಥ

ತಂಡದ ಅರ್ಧದಷ್ಟು ಭಾಗ 189 ರನ್‌ಗಳಿಗೆ ಪೆವಿಲಿಯನ್ ಸೇರಿಕೊಂಡಿತ್ತು. ಮುಂದಿನ 29 ರನ್ ಗಳಿಸುವಷ್ಟರಲ್ಲಿ ದಕ್ಷಿಣ ಆಫ್ರಿಕಾ ಇನ್ನೂ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಕೊನೆಯಲ್ಲಿ, ಡೇವಿಡ್ ಮಿಲ್ಲರ್ ಏಕಾಂಗಿಯಾಗಿ ಹೋರಾಡಿ 67 ಎಸೆತಗಳಲ್ಲಿ 100 ರನ್ ಗಳಿಸಿದರು. ಆದರೆ ಅವರ ಇನ್ನಿಂಗ್ಸ್ ಕೂಡ ತಂಡವನ್ನು ಗೆಲುವಿನ ದಡ ಮುಟ್ಟಿಸಲಿಲ್ಲ. ಅವರನ್ನು ಹೊರತುಪಡಿಸಿ, ಬವುಮಾ 71 ಎಸೆತಗಳಲ್ಲಿ 56 ರನ್, ವ್ಯಾನ್ ಡೆರ್ ಡುಸೆನ್ 66 ಎಸೆತಗಳಲ್ಲಿ 69 ರನ್ ಮತ್ತು ಐಡೆನ್ ಮಾರ್ಕ್ರಾಮ್ 29 ಎಸೆತಗಳಲ್ಲಿ 31 ರನ್ ಗಳಿಸಿದರು.

ರಚಿನ್- ವಿಲಿಯಮ್ಸನ್ ಶತಕ

ನ್ಯೂಜಿಲೆಂಡ್ ಗೆಲುವಿನಲ್ಲಿ ಅನೇಕ ಆಟಗಾರರು ಪ್ರಮುಖ ಪಾತ್ರ ವಹಿಸಿದರು. ಸೆಮಿಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪರ ರಚಿನ್ ರವೀಂದ್ರ ಮತ್ತು ಕೇನ್ ವಿಲಿಯಮ್ಸನ್ ಶತಕದ ಇನ್ನಿಂಗ್ಸ್ ಆಡಿದರು. ಇಬ್ಬರು ಎರಡನೇ ವಿಕೆಟ್‌ಗೆ 164 ರನ್‌ಗಳ ಜೊತೆಯಾಟವನ್ನಾಡಿದರು. ರಚಿನ್ 101 ಎಸೆತಗಳಲ್ಲಿ 13 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳ ಸಹಿತ 108 ರನ್ ಬಾರಿಸಿದರೆ, ವಿಲಿಯಮ್ಸನ್ 94 ಎಸೆತಗಳಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 102 ರನ್ ಗಳಿಸಿದರು. ಇಬ್ಬರೂ ಔಟಾದ ನಂತರ, ಡ್ಯಾರಿಲ್ ಮಿಚೆಲ್ 37 ಎಸೆತಗಳಲ್ಲಿ 49 ರನ್​ಗಳ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ಗ್ಲೆನ್ ಫಿಲಿಪ್ಸ್ 27 ಎಸೆತಗಳಲ್ಲಿ 49 ರನ್​ಗಳ ಬಿರುಗಾಳಿಯ ಇನ್ನಿಂಗ್ಸ್ ಆಡಿದರು.

Source : https://tv9kannada.com/sports/cricket-news/new-zealand-vs-south-africa-champions-trophy-semifinal-result-psr-987308.html

Leave a Reply

Your email address will not be published. Required fields are marked *