Champions Trophy 2025: ತವರಿನಲ್ಲೇ ಹೀನಾಯವಾಗಿ ಸೋತ ಪಾಕಿಸ್ತಾನ; ಕಿವೀಸ್​ಗೆ ಭರ್ಜರಿ ಜಯ

PAK vs NZ: ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಸೋತಿರುವ ಪಾಕಿಸ್ತಾನಕ್ಕೆ ಟೂರ್ನಿಯಿಂದ ಹೊರಬೀಳುವ ಆತಂಕ ಎದುರಾಗಿದೆ. ಏಕೆಂದರೆ ಪಾಕ್ ತಂಡದ ಮುಂದಿನ ಪಂದ್ಯ ಭಾರತದ ವಿರುದ್ಧವಾಗಿದೆ. ಆತಿಥೇಯ ತಂಡವು ಆ ಪಂದ್ಯವನ್ನೂ ಸೋತರೆ, ಅದು ಪಂದ್ಯಾವಳಿಯಿಂದ ಹೊರಗುಳಿಯಲಿದೆ. ಈ ಪಂದ್ಯದ ಸೋಲಿನೊಂದಿಗೆ, ಪಾಕಿಸ್ತಾನ ತಂಡದ ನೆಟ್ ರನ್ ರೇಟ್ ಕೂಡ ತುಂಬಾ ಕಳಪೆಯಾಗಿದೆ.

ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ನೀಡಿದ ನ್ಯೂಜಿಲೆಂಡ್ ತಂಡ ತನ್ನ ಮೊದಲ ಪಂದ್ಯದಲ್ಲೇ ಆತಿಥೇಯ ಪಾಕಿಸ್ತಾನವನ್ನು 60 ರನ್‌ಗಳಿಂದ ಸೋಲಿಸುವ ಮೂಲಕ ಗೆಲುವಿನ ಶುಭಾರಂಭ ಮಾಡಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಟಾಮ್ ಲ್ಯಾಥಮ್ ಮತ್ತು ವಿಲ್ ಯಂಗ್ ಅವರ ಶತಕಗಳ ನೆರವಿನಿಂದ 50 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 320 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಹಾಲಿ ಚಾಂಪಿಯನ್ ಪಾಕಿಸ್ತಾನ ಪೂರ್ಣ 50 ಓವರ್​ಗಳನ್ನು ಆಡಲು ಸಾಧ್ಯವಾಗದೆ 47.2 ಓವರ್‌ಗಳಲ್ಲಿ 260 ರನ್‌ಗಳಿಗೆ ಆಲೌಟ್ ಆಯಿತು. ಪಾಕಿಸ್ತಾನ ಪರ ಖುಸ್ದಿಲ್ ಶಾ ಮತ್ತು ಬಾಬರ್ ಆಝಂ ಅರ್ಧಶತಕ ಬಾರಿಸಿದರಾದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಇದೀಗ ಕಿವೀಸ್ ವಿರುದ್ಧ ಸೋತಿರುವ ಪಾಕಿಸ್ತಾನಕ್ಕೆ ಭಾರತದ ವಿರುದ್ಧದ ಪಂದ್ಯವೇ ನಿರ್ಣಾಯಕವಾಗಿದೆ. ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ಸೋತರೆ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳಲಿದೆ.

ಕಿವೀಸ್ ತಂಡದಿಂದ ಇಬ್ಬರ ಶತಕ

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ತಂಡ 9ನೇ ಓವರ್ ವೇಳೆಗೆ ಡೆವೊನ್ ಕಾನ್ವೇ ಮತ್ತು ಕೇನ್ ವಿಲಿಯಮ್ಸನ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿತು. ಇದಾದ ಸ್ವಲ್ಪ ಸಮಯದ ನಂತರ ಡ್ಯಾರಿಲ್ ಮಿಚೆಲ್ ಕೂಡ ವಿಕೆಟ್ ಒಪ್ಪಿಸಿದರು. ಹೀಗಾಗಿ ಸ್ಕೋರ್ 3 ವಿಕೆಟ್‌ಗಳಿಗೆ ಕೇವಲ 73 ರನ್‌ಗಳಾಗಿತ್ತು. ಇಲ್ಲಿಂದ ವಿಲ್ ಯಂಗ್ ಮತ್ತು ಟಾಮ್ ಲ್ಯಾಥಮ್ ಇನ್ನಿಂಗ್ಸ್ ಮೇಲೆ ಹಿಡಿತ ಸಾಧಿಸಿ ಪಾಕಿಸ್ತಾನಿ ಬೌಲರ್‌ಗಳನ್ನು ತರಾಟೆಗೆ ತೆಗೆದುಕೊಳ್ಳಲು ಪ್ರಾರಂಭಿಸಿದರು.

ಶೀಘ್ರದಲ್ಲೇ ವಿಲ್ ಯಂಗ್ ತಮ್ಮ ಏಕದಿನ ವೃತ್ತಿಜೀವನದ ಮೊದಲ ಶತಕವನ್ನು ದಾಖಲಿಸುವುದರೊದಿಗೆ ಲ್ಯಾಥಮ್ ಅವರೊಂದಿಗೆ 118 ರನ್‌ಗಳ ಪಾಲುದಾರಿಕೆಯನ್ನು ಮಾಡಿದರು. ಯಂಗ್ ಔಟಾದ ನಂತರ ಲ್ಯಾಥಮ್, ಗ್ಲೆನ್ ಫಿಲಿಪ್ಸ್ ಜೊತೆಗೂಡಿ 125 ರನ್‌ಗಳ ತ್ವರಿತ ಜೊತೆಯಾಟ ನಡೆಸಿ ತಂಡವನ್ನು 300 ರನ್‌ಗಳ ಗಡಿ ದಾಟಿಸಿದರು. ಈ ಸಮಯದಲ್ಲಿ, ಲ್ಯಾಥಮ್ ಕೇವಲ 95 ಎಸೆತಗಳಲ್ಲಿ ತಮ್ಮ ವೃತ್ತಿಜೀವನದ 8 ನೇ ಶತಕವನ್ನು ಪೂರೈಸಿದರೆ,ಫಿಲಿಪ್ಸ್ ಕೇವಲ 39 ಎಸೆತಗಳಲ್ಲಿ 61 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಲ್ಯಾಥಮ್ 104 ಎಸೆತಗಳಲ್ಲಿ 118 ರನ್ ಗಳಿಸಿ ಅಜೇಯರಾಗಿ ಮರಳಿದರು.

ಪಾಕ್ ತಂಡದ ಆಮೆಗತಿಯ ಬ್ಯಾಟಿಂಗ್

321 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಫಖರ್ ಜಮಾನ್ ಅವರ ಇಂಜುರಿ ದೊಡ್ಡ ಆಘಾತ ನೀಡಿತು.  ಆರಂಭದಲ್ಲಿ ಆಮೆಗತಿಯ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಮೊದಲ 10 ಓವರ್‌ಗಳಲ್ಲಿ ಕೇವಲ 22 ರನ್‌ಗಳನ್ನು ಗಳಿಸುವ ಮೂಲಕ ಆರಂಭದಲ್ಲೇ ಪಂದ್ಯವನ್ನು ಕೈಚೆಲ್ಲಿತು. ಈ ವೇಳೆಗೆ ತಾತ್ಕಾಲಿಕ ಆರಂಭಿಕ ಆಟಗಾರ ಸೌದ್ ಶಕೀಲ್ ಮತ್ತು ನಾಯಕ ಮೊಹಮ್ಮದ್ ರಿಜ್ವಾನ್ ಪೆವಿಲಿಯನ್‌ಗೆ ಮರಳಿದರು. ಆ ಬಳಿಕ ಪಾಕಿಸ್ತಾನ ಅಚ್ಚರಿಯ ನಿರ್ಧಾರ ತೆಗೆದುಕೊಂಡು ಗಾಯಗೊಂಡ ಫಖರ್ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸಿತು. ಆದರೆ ನಡೆಯಲು ಕಷ್ಟಪಡುತ್ತಿದ್ದ ಫಖರ್ ಕೆಲವು ಬೌಂಡರಿಗಳನ್ನು ಹೊಡೆದ ಬಳಿಕ ವಿಕೆಟ್ ಒಪ್ಪಿಸಿದರು. ಅವರ ನಂತರ ಬಂದ ಸಲ್ಮಾನ್ ಅಲಿ ಆಘಾ ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ಕೆಲವು ದೊಡ್ಡ ಹೊಡೆತಗಳನ್ನು ಹೊಡೆಯುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು ಆದರೆ ಅವರೂ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ.

ಬಾಬರ್ ನಿಧಾನಗತಿಯ ಬ್ಯಾಟಿಂಗ್

ಇದೆಲ್ಲದರ ನಡುವೆ, ಪಾಕಿಸ್ತಾನಕ್ಕೆ ದೊಡ್ಡ ಸಮಸ್ಯೆ ಎಂದರೆ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಆಝಂ. ಮಾಜಿ ನಾಯಕ ಆರಂಭಿಕರಾಗಿ ಬಂದರೂ ಆರಂಭದಿಂದ ಕೊನೆಯವರೆಗೂ ವೇಗವಾಗಿ ಬ್ಯಾಟಿಂಗ್ ಮಾಡಲು ಹೆಣಗಾಡುತ್ತಿರುವುದು ಕಂಡುಬಂದಿತು.  ಇಡೀ ಇನ್ನಿಂಗ್ಸ್​ನಲ್ಲಿ ಆಮೆಗತಿಯ ಬ್ಯಾಟಿಂಗ್ ಮಾಡಿದ ಬಾಬರ್, ಇತರ ಬ್ಯಾಟರ್​ಗಳು ಕೂಡ ಒತ್ತಡಕ್ಕೊಳಗಾಗುವಂತೆ ಮಾಡಿದರು. ಅಂತಿಮವಾಗಿ ಬಾಬರ್ ಅರ್ಧಶತಕ ಬಾರಿಸಿದರಾದರೂ ಬರೋಬ್ಬರಿ 90 ಎಸೆತಗಳಲ್ಲಿ 64 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಕೊನೆಯಲ್ಲಿ ಖುಷ್ದಿಲ್ ಷಾ ಕೇವಲ 49 ಎಸೆತಗಳಲ್ಲಿ 69 ರನ್ ಗಳಿಸುವ ಮೂಲಕ ಸೋಲಿನ ಅಂತರವನ್ನು ಕಡಿಮೆ ಮಾಡಿದರೂ, ಅವರಿಗೂ ಫಲಿತಾಂಶವನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್ ಪರ ಯುವ ವೇಗಿ ವಿಲ್ ಒ’ರೂರ್ಕ್ ಮತ್ತು ನಾಯಕ ಮಿಚೆಲ್ ಸ್ಯಾಂಟ್ನರ್ ತಲಾ 3 ವಿಕೆಟ್ ಪಡೆದರು.

Source: https://tv9kannada.com/sports/cricket-news/champions-trophy-2025-new-zealand-beat-pakistan-by-60-runs-psr-980687.html

Leave a Reply

Your email address will not be published. Required fields are marked *