Champions Trophy 2025: ಟೀಂ ಇಂಡಿಯಾ ಪಂದ್ಯಗಳ ಟಿಕೆಟ್ ಮಾರಾಟ ಆರಂಭ; ಆರಂಭಿಕ ಬೆಲೆ ಎಷ್ಟು? ಖರೀದಿಸುವುದು ಹೇಗೆ?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿ ಮುಗಿದಿದ್ದು, ಇದೀಗ ಏಕದಿನ ಸರಣಿ ಆರಂಭವಾಗಲಿದೆ. ಈ ಮೂರು ಪಂದ್ಯಗಳ ಸರಣಿಯು ಫೆಬ್ರವರಿ 6 ರಿಂದ ಪ್ರಾರಂಭವಾಗಲಿದೆ. ಆ ಬಳಿಕ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಅದರಲ್ಲೂ ಭಾರತ-ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ಕೋಟ್ಯಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಈ ಉಭಯ ತಂಡಗಳ ನಡುವಿನ ಹೈವೋಲ್ಟೇಜ್ ಕದನದ ಟಿಕೆಟ್​ಗಳ ಮಾರಾಟ ಆರಂಭವಾಗಿದೆ. ಈ ಪಂದ್ಯ ಮಾತ್ರವಲ್ಲದೆ ದುಬೈನಲ್ಲಿ ನಡೆಯಲಿರುವ ಟೀಂ ಇಂಡಿಯಾದ ಎಲ್ಲಾ ಪಂದ್ಯಗಳ ಟಿಕೆಟ್​ಗಳ ಮಾರಾಟ ಕೂಡ ಆರಂಭವಾಗಿದೆ.

ದುಬೈನಲ್ಲಿ ಭಾರತ-ಪಾಕ್ ಮುಖಾಮುಖಿ

ವಾಸ್ತವವಾಗಿ ಟೀಂ ಇಂಡಿಯಾ ಗುಂಪು ಹಂತದಲ್ಲಿ ತನ್ನ ಎಲ್ಲಾ ಮೂರು ಪಂದ್ಯಗಳನ್ನು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಇದರ ನಂತರ, ಫೆಬ್ರವರಿ 23 ರಂದು ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಲಿರುವ ಭಾರತ, ಆ ನಂತರ ಮಾರ್ಚ್ 2 ರಂದು ನ್ಯೂಜಿಲೆಂಡ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. ಒಂದು ವೇಳೆ ಟೀಂ ಇಂಡಿಯಾ ಸೆಮಿಫೈನಲ್ ತಲುಪಿ ನಂತರ ಫೈನಲ್ ತಲುಪಿದರೆ, ಈ ಪಂದ್ಯವನ್ನು ಸಹ ದುಬೈನಲ್ಲಿಯೇ ಆಡಲಿದೆ. ಇದೀಗ ಟೀಂ ಇಂಡಿಯಾದ ಗುಂಪು ಪಂದ್ಯಗಳಿಗೆ ಐಸಿಸಿ ಟಿಕೆಟ್ ಮಾರಾಟವನ್ನು ಪ್ರಾರಂಭಿಸಿದ್ದು, ಭಾರತೀಯ ಕಾಲಮಾನ ಸಂಜೆ 5:30 ಕ್ಕೆ ಟಿಕೆಟ್​ಗಳ ಮಾರಾಟ ಪ್ರಾರಂಭವಾಗಿದೆ.

ಆರಂಭಿಕ ಬೆಲೆ ಎಷ್ಟು, ಟಿಕೆಟ್ ಖರೀದಿಸುವುದು ಹೇಗೆ?

ಈಗ ಪ್ರಶ್ನೆಯೆಂದರೆ, ಟಿಕೆಟ್‌ಗಳ ಬೆಲೆ ಎಷ್ಟು ಮತ್ತು ಅವುಗಳನ್ನು ಹೇಗೆ ಖರೀದಿಸುವುದು? ಎಂಬುದು. ದುಬೈನಲ್ಲಿ ನಡೆಯಲಿರುವ ಎಲ್ಲಾ ಪಂದ್ಯಗಳ ಟಿಕೆಟ್ ದರವು 125 AED ಅಂದರೆ ಯುನೈಟೆಡ್ ಅರಬ್ ಎಮಿರೇಟ್ಸ್ ದಿರ್ಹಾಮ್‌ನಿಂದ ಪ್ರಾರಂಭವಾಗುತ್ತದೆ. ಭಾರತೀಯ ರೂಪಾಯಿಗಳಲ್ಲಿ ಇದರ ಬೆಲೆ 2900 ರೂ. ಆಗಲಿದೆ. ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮತ್ತು ನೇರವಾಗಿ ದುಬೈ ಸ್ಟೇಡಿಯಂನಲ್ಲಿರುವ ‘ಟಿಕೆಟ್ ಕಲೆಕ್ಷನ್ ಸೆಂಟರ್’ ನಿಂದ ಖರೀದಿಸಬಹುದು. ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಖರೀದಿಸಲು, ಈ ಲಿಂಕ್ ಅನ್ನು ಕ್ಲಿಕ್ ಮಾಡಿ (https://www.iccchampionstrophy.com/tickets), ಅಗತ್ಯವಿರುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಮತ್ತು ನಂತರ ನೀವು ಇಷ್ಟಪಡುವ ಬೆಲೆಗೆ ಟಿಕೆಟ್‌ಗಳನ್ನು ಖರೀದಿಸಬಹುದು.

ಫೆಬ್ರವರಿ 19 ರಿಂದ ಪಂದ್ಯಾವಳಿ ಪ್ರಾರಂಭ

ಫೆಬ್ರವರಿ 19 ರಿಂದ ಲಾಹೋರ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಟೂರ್ನಿಯಲ್ಲಿ 8 ತಂಡಗಳು ಭಾಗವಹಿಸುತ್ತಿದ್ದು, ಭಾರತ ಹೊರತುಪಡಿಸಿ ಉಳಿದ 6 ತಂಡಗಳು ಪಾಕಿಸ್ತಾನದಲ್ಲಿ ಪಂದ್ಯಗಳನ್ನು ಆಡಲಿವೆ. ಲಾಹೋರ್ ಹೊರತುಪಡಿಸಿ, ಪಾಕಿಸ್ತಾನದ ಕರಾಚಿ ಮತ್ತು ರಾವಲ್ಪಿಂಡಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಪಂದ್ಯಾವಳಿಯಲ್ಲಿ ಗುಂಪು ಹಂತದ ಪಂದ್ಯಗಳ ನಂತರ 2 ಸೆಮಿಫೈನಲ್‌ ಪಂದ್ಯಗಳು ನಡೆಯಲ್ಲಿದ್ದು, ನಂತರ ಫೈನಲ್ ಪಂದ್ಯ ಮಾರ್ಚ್ 9 ರಂದು ನಡೆಯಲ್ಲಿದೆ. ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ಒಂದು ಗುಂಪಿನಲ್ಲಿದ್ದರೆ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ಇನ್ನೊಂದು ಗುಂಪಿನಲ್ಲಿವೆ.

Source : https://tv9kannada.com/sports/cricket-news/champions-trophy-2025-india-match-tickets-dates-prices-and-how-to-buy-psr-973487.html

Leave a Reply

Your email address will not be published. Required fields are marked *