ಬೆಂಗಳೂರು, ಜನವರಿ 09:
ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನಲೆಯಲ್ಲಿ, ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳನ್ನು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರಶ್ನೆ ಪತ್ರಿಕೆ ಲೀಕ್ ಮಾಡುವುದಾಗಿ ಹೇಳಿ, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಮೂಲಕ ಸುಳ್ಳು ಪ್ರಚಾರ ನಡೆಸಿ, ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ.
100 ರೂಪಾಯಿಗೆ ಪ್ರಶ್ನೆ ಪತ್ರಿಕೆ ಎಂಬ ಮೋಸ
ಈಗಾಗಲೇ 10ನೇ ತರಗತಿ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾ ಪರೀಕ್ಷೆಗಳು ಆರಂಭವಾಗಿದ್ದು, ಮಾರ್ಚ್ ತಿಂಗಳಲ್ಲಿ ಮುಖ್ಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೆ. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡಿರುವ ಕಿಡಗೇಡಿಗಳು, “ಎಸ್‌ಎಸ್‌ಎಲ್‌ಸಿ ಹಾಗೂ ಪೂರ್ವಭಾವಿ ಪ್ರಶ್ನೆ ಪತ್ರಿಕೆ ಲೀಕ್” ಎಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಾರೆ.
100 ರೂಪಾಯಿ ಫೋನ್‌ಪೇ ಅಥವಾ ಆನ್‌ಲೈನ್ ಪಾವತಿ ಮಾಡಿದರೆ ಪ್ರಶ್ನೆ ಪತ್ರಿಕೆ ಕಳುಹಿಸುತ್ತೇವೆ ಎಂದು ವಿದ್ಯಾರ್ಥಿಗಳನ್ನು ನಂಬಿಸಿ ಹಣ ಪಡೆದುಕೊಳ್ಳಲಾಗುತ್ತಿದೆ. ಆದರೆ ಈ ರೀತಿಯಲ್ಲಿ ನೀಡಲಾಗುತ್ತಿರುವ ಪ್ರಶ್ನೆ ಪತ್ರಿಕೆಗಳು ಸಂಪೂರ್ಣ ನಕಲಿಯಾಗಿದ್ದು, ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯದ ಜೊತೆಗೆ ಹಣವನ್ನೂ ಕಳೆದುಕೊಳ್ಳುತ್ತಿದ್ದಾರೆ.
ವಿದ್ಯಾರ್ಥಿಗಳಲ್ಲಿ ಆತಂಕ, ತಜ್ಞರಿಂದ ಎಚ್ಚರಿಕೆ
ಈ ರೀತಿಯ ಸುಳ್ಳು ವದಂತಿಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಮಾತು ಕೇಳಿ ಆತುರದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ.
ಶಿಕ್ಷಣ ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಯಾವುದೇ ರೀತಿಯ ಲೀಕ್ ಸುದ್ದಿ ನಂಬಬಾರದು, ಅಧಿಕೃತ ಮೂಲಗಳಿಂದ ಬರುವ ಮಾಹಿತಿಯನ್ನಷ್ಟೇ ಅನುಸರಿಸಬೇಕು ಎಂದು ಮನವಿ ಮಾಡಿದ್ದಾರೆ.
ವಂಚಕರ ವಿರುದ್ಧ ದೂರು
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಖಾಸಗಿ ಶಿಕ್ಷಣ ಇಲಾಖೆ ಹಾಗೂ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಆಫ್ ಪ್ರೈಮರಿ ಅಂಡ್ ಸೆಕೆಂಡರಿ ಸ್ಕೂಲ್ಸ್ ಇನ್ ಕರ್ನಾಟಕ ಸಂಘಟನೆಗಳು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಕಿಡಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ.
ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ಸುಳ್ಳು ಪ್ರಚಾರಕ್ಕೆ ಬಲಿಯಾಗದೆ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಲಾಗಿದೆ.
Views: 28