ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ಚಿತ್ರದುರ್ಗ ಜೆಡಿಎಸ್ ಅಭ್ಯರ್ಥಿ ರಘುಆಚಾರ್ ನಾಮಪತ್ರ ಸಲ್ಲಿಕೆ

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಏ.19): ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್. ಅಭ್ಯರ್ಥಿ ರಘು ಆಚಾರ್ ಬುಧವಾರ ತಾಲ್ಲೂಕು ಕಚೇರಿಯಲ್ಲಿ ಉಮೇದುವಾರಿಕೆಯನ್ನು ಸಲ್ಲಿಸಿದರು.

ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಸುಡು ಬಿಸಿಲಿನಲ್ಲಿ ತಾಲ್ಲೂಕು ಕಚೇರಿವರೆಗೆ ಹೆಚ್.ಡಿ.ಕುಮಾರಸ್ವಾಮಿರವರ ಜೊತೆಯಲ್ಲಿ ಮೆರವಣಿಗೆ ಮೂಲಕ ಆಗಮಿಸಿ ರಘು ಆಚಾರ್ ನಾಮಪತ್ರ ಸಲ್ಲಿಸಿದರು.

ಬೆಳಗಿನಿಂದಲೇ ಗ್ರಾಮೀಣ ಭಾಗಗಳಿಂದ ಟ್ರಾಕ್ಟರ್, ಆಟೋ, ಟ್ರಾಕ್ಸ್‍ಗಳಲ್ಲಿ ಮಹಿಳೆ ಮಕ್ಕಳು ಪುರುಷರು ತಂಡೋಪ ತಂಡವಾಗಿ ಆಗಮಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡು ರಘು ಆಚಾರ್ ಪರ ಜೈಕಾರಗಳನ್ನು ಕೂಗಿದರು.

ತೆನೆ ಹೊತ್ತ ರೈತ ಮಹಿಳೆಯ ಚಿನ್ಹೆಯಿರುವ ಟೋಪಿಯನ್ನು ತಲೆ ಮೇಲೆ ಹಾಕಿಕೊಂಡು ಮಹಿಳೆಯರು ಬಿಸಿಲಿನಿಂದ ರಕ್ಷಿಸಿಕೊಂಡರೆ. ಟೋಪಿ ಇಲ್ಲದವರು ಸೀರೆಯ ಸೆರಗನ್ನು ತಲೆ ಮೇಲೆ ಹೊದ್ದುಕೊಂಡು ಮೆರವಣಿಗೆಯಲ್ಲಿ ಸಾಗಿದರು. ಯುವಕರು ಜೆಡಿಎಸ್ ಬಾವುಟಗಳನ್ನು ಮೆರವಣಿಗೆಯಲ್ಲಿ ತಿರುಗಿಸುತ್ತ ಸಾಗುತ್ತಿದ್ದರು.

ವೀರಗಾಸೆ, ಡೊಳ್ಳು, ಉರುಮೆ, ತಮಟೆ, ಚಂಡೆ ವಾದ್ಯ ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೀಯವಾಗಿದ್ದವು.
ಗಾಂಧಿ ವೃತ್ತದಲ್ಲಿ ನೂರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಮೆರವಣಿಗೆಯಲ್ಲಿ ತೆರೆದ ವಾಹನಕ್ಕೆ ಬಣ್ಣ ಬಣ್ಣದ ಹೂವು ಹಾಗೂ ಬಲೂನ್‍ಗಳಿಂದ ಅಲಂಕರಿಸಲಾಗಿತ್ತು. ತೆನೆ ಹೊತ್ತ ಕೆಲವು ಮಹಿಳೆಯರು ಮೆರವಣಿಗೆಯಲ್ಲಿ ಸಾಗಿ ಎಲ್ಲರ ಗಮನ ಸೆಳೆದರು.

ರಸ್ತೆಯ ಎರಡು ಬದಿಯಲ್ಲಿದ್ದ ಜನರತ್ತ ಕೈಬೀಸುತ್ತಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರು ಈ ಚುನಾವಣೆಯಲ್ಲಿ ರಘು ಆಚಾರ್ ರವರನ್ನು ಗೆಲ್ಲಿಸಿ ಆಶೀರ್ವದಿಸುವಂತೆ ವಿನಂತಿಸಿದರು.
ಬಿಸಿಲ ಬೇಗೆಗೆ ತತ್ತರಿಸುತ್ತಿದ್ದ ಜನತೆಗೆ ಮೆರವಣಿಗೆಯಲ್ಲಿ ಅಲ್ಲಲ್ಲಿ ನೀರಿನ ಬಾಟಲ್‍ಗಳನ್ನು ವಿತರಿಸಲಾಯಿತು.

ಜೆಡಿಎಸ್.ಜಿಲ್ಲಾಧ್ಯಕ್ಷ ಡಿ.ಯಶೋಧರ, ರಾಜ್ಯ ಉಪಾಧ್ಯಕ್ಷ ಬಿ.ಕಾಂತರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಯಣ್ಣ, ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಗೀತ ಶಾಂತಕುಮಾರ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಜೆಡಿಎಸ್.ಯುವ ಘಟಕದ ಜಿಲ್ಲಾಧ್ಯಕ್ಷ ಓ.ಪ್ರತಾಪ್‍ಜೋಗಿ, ಅಬ್ಬು ಸೇರಿದಂತೆ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

The post ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ಚಿತ್ರದುರ್ಗ ಜೆಡಿಎಸ್ ಅಭ್ಯರ್ಥಿ ರಘುಆಚಾರ್ ನಾಮಪತ್ರ ಸಲ್ಲಿಕೆ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/CsM5Gyo
via IFTTT

Leave a Reply

Your email address will not be published. Required fields are marked *