Chitradurga: ತ್ಯಾಜ್ಯ ವಸ್ತುಗಳಿಂದ ಕಲುಷಿತಗೊಂಡ ಕೆರೆ: ಮಲ್ಲಾಪುರ ಗ್ರಾಮಸ್ಥರು ಆಕ್ರೋಶ!

ಚಿತ್ರದುರ್ಗ (ಮೇ.26): ಇಷ್ಟು ದಿನ ಮಳೆ ಬರಲಿ ಎಂದು ಈ ಭಾಗದ ರೈತರು ಪ್ರಾರ್ಥನೆ ಮಾಡ್ತಿದ್ರು. ಆದ್ರೆ ಈಗ ಮಳೆಯಿಂದ ಅವಾಂತರ ಸೃಷ್ಠಿಯಾಗ್ತಿದ್ದು, ಅಧಿಕಾರಿಗಳು ಮಾತ್ರ ನಿರ್ಲಕ್ಯ ವಹಿಸಿ ಕಣ್ಮುಚ್ಚಿ ಕುಳಿತಿರೋದಕ್ಕೆ ಮಳೆರಾಯ ಬರಬೇಡಪ್ಪ ಎಂದು ಬೇಡಿಕೊಳ್ತಿದ್ದಾರೆ. ನೀರಿಗಿಂತ ಹೆಚ್ಚಾಗಿ ತ್ಯಾಜ್ಯ ವಸ್ತುಗಳೇ ತುಂಬಿರುವ ಕೆರೆ ದೃಶ್ಯಾವಳಿ. ಇದರ ಕಲುಷಿತ ವಾಸನೆಯಿಂದ ಬೇಸತ್ತು ನಿರ್ಲಕ್ಷ್ಯ ತೋರುವ ಅಧಿಕಾರಿಗಳ‌ ವಿರುದ್ದ ಆಕ್ರೋಶ ಹೊರಹಾಕ್ತಿರೋ ಈ ಗ್ರಾಮದ ಜನರು. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ‌ನಗರದ ಕೂದಲೆಳೆ ಅಂತರದಲ್ಲಿ ಇರುವ ಮಲ್ಲಾಪುರ ಗ್ರಾಮದ ಬಳಿ. 

ಸಣ್ಣ ಪುಟ್ಟ ಮಳೆ ಬಂದ್ರೆ ಸಾಕು ಚಿತ್ರದುರ್ಗ ನಗರದ ತ್ಯಾಜ್ಯವೆಲ್ಲಾ ಮಲ್ಲಾಪುರ ಕೆರೆ ಸೇರುತ್ತದೆ. ಇದ್ರಿಂದಾಗಿ ಕೆರೆ ಪಕ್ಕದಲ್ಲಿಯೇ ಇರುವ ಮಲ್ಲಾಪುರ ಗ್ರಾಮದ ಜನರು ಮಳೆ ಬಂದಾಗೆಲ್ಲಾ, ತ್ಯಾಜ್ಯ ವಸ್ತುಗಳಿಂದ ಕಲುಷಿತಗೊಂಡ ನೀರಿನ ವಾಸನೆಯಿಂದ ಬಳಲ್ತಿದ್ದಾರೆ. ಪ್ರತೀ ಬಾರಿಯೂ ಸಣ್ಣ ನೀರಾವರಿ ಹಾಗೂ ನಗರಸಭೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನೆ ಆಗಿಲ್ಲ. ಕಳೆದ ಎರಡು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ, ಕೆರೆ ತುಂಬಿ ಕೋಡಿ ಬಿದ್ದಿದ್ದು, ತ್ಯಾಜ್ಯ ವಸ್ತುಗಳೆಲ್ಲಾ ರಸ್ತೆ ಪಕ್ಕದಲ್ಲಿಯೇ ಹರಿದು ಹೋಗ್ತಿದೆ. 

ಇದರ ಪರಿಣಾಮವಾಗಿ ಗ್ರಾಮದಲ್ಲಿ ಇರುವ ಮಕ್ಕಳಿಗೆ ಅನಾರೋಗ್ಯ ಎದುರಾಗುವ ಭೀತಿ ಶುರುವಾಗಿದೆ. ಆದ್ದರಿಂದ ಕೂಡಲೇ ನಗರಸಭೆ ಅಧಿಕಾರಿಗಳು ಚಿತ್ರದುರ್ಗ ನಗರದ ತ್ಯಾಜ್ಯ ವಸ್ತು ಕೆರೆಗೆ ಹೋಗದಂತೆ ತಡೆಯಬೇಕಿದೆ. ಜೊತೆಗೆ ಕೆರೆ ಶುದ್ದೀಕರಣ ಮಾಡುವ ಮೂಲಕ ಈ ಗ್ರಾಮದ ಜನರ ಆರೋಗ್ಯ ಕಾಪಾಡಬೇಕಿದೆ ಎಂದು ಆಗ್ರಹಿಸಿದರು. ಇನ್ನೂ ಈ ಕೆರೆ ಕೋಡಿ ಬಿದ್ದ ನೀರು ಯಾವುದೇ ಜಮೀನು ಅಥವಾ ತೋಟಕ್ಕೆ ಉಪಯೋಗ ಆಗುವುದಿಲ್ಲ. ಗ್ರಾಮೀಣ ಭಾಗದ ಜನರು ಆರೋಗ್ಯವಾಗಿ ಇರಬೇಕು ಅವರಿಗೆ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ಕೊಡ್ತಾರೆ. 

ಆದ್ರೆ ಕೆಲ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆ ನೀರು ಸಂಪರ್ಕ ಕಲುಷಿತಗೊಂಡಿದ್ದು, ಮಲ್ಲಾಪುರ ಗ್ರಾಮದ ಜನರು ಅನಾರೋಗ್ಯಕ್ಕೆ ತುತ್ತಾಗುವ ಎಲ್ಲಾ ಲಕ್ಷಣಗಳು ಮುಂದಿವೆ. ಆದ್ದರಿಂದ ಆಕ್ರೋಶಗೊಂಡಿರೋ ಗ್ರಾಮದ ಜನರು, ಅಧಿಕಾರಿಗಳು ಎಚ್ಚೆತ್ತು ಕೆರೆ ಶುದ್ದೀಕರಣ ಗಳಿಸಲಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಬೇಜವಾಬ್ದಾರಿ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟರು. ಒಟ್ಟಾರೆಯಾಗಿ ಸಿಟಿ ಜನರ ಬಳಸಿ ಹಾಳು ಮಾಡಿ ಬಿಸಾಕಿದ ತ್ಯಾಜ್ಯ ವಸ್ತುಗಳು ಕೆರೆ ಸೇರ್ತಿರೋದೆ ದುರಂತದ ಸಂಗತಿ. ಇದನ್ನ ಕಂಡೂ ಕಾಣದೇ ಇರುವ ಅಧಿಕಾರಿಗಳ ನಿರ್ಲಕ್ಷ್ಯ ಮಾತ್ರ ಹೇಳತೀರದು. ಇನ್ಮೇಲಾದ್ರು ಅಧಿಕಾರಿಗಳು ಕೆರೆ ಶುದ್ದೀಕರಣಗೊಳಿಸಿ, ಈ ಗ್ರಾಮದ ಜನರ ಜೀವ ಉಳಿಸಬೇಕಿದೆ.

Source : https://kannada.asianetnews.com/karnataka-districts/chitradurga-lake-polluted-by-waste-materials-mallapura-villagers-are-outraged-gvd-se3jb3

 

Leave a Reply

Your email address will not be published. Required fields are marked *