ಚಿತ್ರದುರ್ಗ, ಆಗಸ್ಟ್, 26: ತೀವ್ರ ಕುತೂಹಲ ಕೆರಳಿಸಿದ್ದ ಚಿತ್ರದುರ್ಗ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಅಂತಿಮ ಹಂತ ತಲುಪಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮೇಲುಗೈ ಸಾಧಿಸಿದ್ದಾರೆ. ಹಾಗಾದರೆ ಯಾರಿಗೆ ಯಾವ್ಯಾವ ಸ್ಥಾನ ಯಾರಿಗೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಎರಡು ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ, ಅಧ್ಯಕ್ಷರಾಗಿ ಸುಮೀತಾ.ಬಿ.ಎನ್. ಹಾಗೂ ಉಪಾಧ್ಯಕ್ಷರಾಗಿ ಶ್ರೀದೇವಿ.ಜಿ.ಎಸ್ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಘೋಷಣೆ ಮಾಡಿದರು.
ಅಧ್ಯಕ್ಷ ಸ್ಥಾನಕ್ಕೆ ಸದಸ್ಯರಾದ ಸುನೀತಾ.ಬಿ.ಎಂ ಹಾಗೂ ತಾರಕೇಶ್ವರಿ ಎಸ್.ಸಿ, ಉಪಾಧ್ಯಕ್ಷ ಸ್ಥಾನಕ್ಕೆ ಸದಸ್ಯರಾದ ಶ್ರೀದೇವಿ.ಜಿ.ಎಸ್ ಹಾಗೂ ರೋಹಿಣಿ.ಬಿ.ಎಸ್ ನಾಮಪತ್ರ ಸಲ್ಲಿಸಿದ್ದರು. ಚಿತ್ರದುರ್ಗ ನಗರಸಭೆ 35 ಜನ ಚುನಾಯಿತ ಸದಸ್ಯ ಬಲ ಹೊಂದಿದ್ದು, ಇದರಲ್ಲಿ ಓರ್ವ ಸದಸ್ಯರು ಮೃತ ಪಟ್ಟಿದ್ದರಿಂದ ಚುನಾಯಿತ ನಗರ ಸಭೆ ಸದಸ್ಯರ ಬಲ 34ಕ್ಕೆ ಇಳಿದಿತ್ತು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ನಗರಸಭೆ ವ್ಯಾಪ್ತಿ ಪ್ರತಿನಿಧಿಸುವ ವಿಧಾನಸಭಾ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ (ಆಗಸ್ಟ್ 26) ನಡೆದ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಒಟ್ಟು 35 ಸದಸ್ಯರು ಮತ ಚಲಾಯಿಸಿದರು. ಈ ಪೈಕಿ ಸುನಿತಾ.ಬಿ.ಎನ್ ಹಾಗೂ ಶ್ರೀದೇವಿ.ಜಿ.ಎಸ್ ತಲಾ 22 ಮತಗಳನ್ನು ಪಡೆಯುವ ಮೂಲಕ ಅನುಕ್ರಮವಾಗಿ ನಗರಸಭೆ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಗಾದಿಗೆ ಏರಿದ್ದಾರೆ.
ಚುನಾವಣಾ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ, ನಗರದ ಅಭಿವೃದ್ಧಿಗಾಗಿ ಸದಸ್ಯರು ಸುಮೀತಾ.ಬಿ.ಎನ್ ಅವರನ್ನು ಅಧ್ಯಕ್ಷರಾಗಿ ಹಾಗೂ ಶ್ರೀದೇವಿ.ಜಿ.ಎಸ್ ಉಪಾಧ್ಯಕ್ಷರನ್ನಾಗಿ ಬಹುಮತದಿಂದ ಆಯ್ಕೆ ಮಾಡಿದ್ದಾರೆ. ಇವರ ಆಯ್ಕೆಗೆ ಸಹರಿಸಿದ ಎಲ್ಲಾ ಸದಸ್ಯರಿಗೆ ಧನ್ಯವಾದಗಳನ್ನು ತಿಳಿಸಿದರು.
ನೂತನ ಅಧ್ಯಕ್ಷೆ ಸುಮೀತಾ.ಬಿ.ಎನ್. ಮಾತನಾಡಿ, ನಗರದ ಸ್ವಚ್ಛತೆ ಹಾಗೂ ಅಭಿವೃದ್ಧಿಗೆ ಒತ್ತು ನೀಡಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು. ಇನ್ನು ಬಿಜೆಪಿ ಬಹುಮತ ಇದ್ದರೂ ಅಧ್ಯಕ್ಷ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದು, ತೀವ್ರ ಮುಖಭಂಗ ಅನುಭವಿಸಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆಯಾಗಿ ಚಿತ್ರದುರ್ಗ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ವಶಪಡಿಸಿಕೊಳ್ಳುವಲ್ಲಿ ಶಾಸಕ ಪಪ್ಪಿ ಮೇಲುಗೈ ಸಾಧಿಸಿದ್ದಾರೆ.