ಚಿತ್ರದುರ್ಗ|2500ಕ್ಕೂ ಹೆಚ್ಚು ಮರಗಳ ಕಡಿತಕ್ಕೆ ಆಕ್ರೋಶ: ಏಪ್ರಿಲ್ 6ರಂದು ಪರಿಸರವಾದಿಗಳ ಹೋರಾಟ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಏ.02 ಸರ್ಕಾರಿ ವಿಜ್ಞಾನ ಕಾಲೇಜು ಬಳಿ ಸುಮಾರು 2.24 ಎಕರೆ ಪ್ರದೇಶದಲ್ಲಿ ಮಹಿಳಾ ಕಾಲೇಜು ನಿರ್ಮಾಣ ಹಾಗೂ ತೋಟಗಾರಿಕೆ ಇಲಾಖೆಯಲ್ಲಿನ 6 ಎಕರೆ ಪ್ರದೇಶದಲ್ಲಿ ಮರಗಳನ್ನು ಕಡಿದು ಜಿಲ್ಲಾಧಿಕಾರಿಗಳ ಕಚೇರಿಯ ನಿರ್ಮಾಣಕ್ಕೆ ಚಿತ್ರದುರ್ಗ ನಗರದಲ್ಲಿ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗಿದ್ದು, ಈ ಎರಡು ಕಟ್ಟಡಗಳನ್ನು ಈ ಸ್ಥಳ ಬಿಟ್ಟು ಬೇರೆ ಕಡೆಗಳಲ್ಲಿ ನಿರ್ಮಾಣಮಾಡುವಂತೆ ಸರ್ಕಾರವನ್ನು ಆಗ್ರಹಿಸಿದೆ.

ಈ ಬಗ್ಗೆ ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯನ್ನು ನಡೆಸಿದ ರೈನ್ ಟ್ರಸ್ಟ್ ಅಧ್ಯಕ್ಷರು, ರೈತ ಹೋರಾಟಗಾರರಾದ ಕಸವನಹಳ್ಳಿ ರಮೇಶ್ ಮಾತನಾಡಿ, ಅಭಿವೃದ್ಧಿ ಎಂದರೆ ಬೆಳೆದಿರುವ ಮರಗಳನ್ನು ಕಡಿಯುವುದೇನು?! ಚಿತ್ರದುರ್ಗದಲ್ಲಿ ಹೆಸರಿಗಷ್ಟೆ ಇರುವ ಅರಣ್ಯ ಇಲಾಖೆ, ಅದೆಷ್ಟು ಮರಗಿಡಗಳನ್ನು ಬೆಳಸಿದ್ದಾರೊ ಗೊತ್ತಿಲ್ಲ ಆದರೆ ಬೆಳೆದಿರುವ ಮರಗಳನ್ನು, ಗಿಡಗಳನ್ನು ಕಡಿಯುವುದಕ್ಕೆ ಅನುಮತಿ ನೀಡಲು ನಿಶ್ಚಿಮರು! ನಮ್ಮ ಜಿಲ್ಲಾಡಳಿತ ಮನಸ್ಸಿಗೆ ಬಂದ ಆದೇಶಗಳನ್ನು ಗೀಚುವುದು, ಸರ್ಕಾರದಿಂದ ಬಂದಿರುವ ಹಣವನ್ನು ಖರ್ಚು ಮಾಡಬೇಕಷ್ಟೇ ಇಂತಹ ಬೇಜಾವಾಬ್ದಾರಿ ಅಧಿಕಾರಿಗಳು ಇರುವಾಗ ಚಿತ್ರದುರ್ಗದಲ್ಲಿ ಇನ್ನೂ ಉಳಿಸಿಕೊಂಡು ಬಂದಿರುವ ಸಸ್ಯಗಳನ್ನೂ ಕಡಿಯಲು ಮುಂದಾಗುತ್ತಾರೆ. ಚಿತ್ರದುರ್ಗ ಬರದ ನಾಡು, ಅತಿಯಾದ ಬಿಸಿಲು, ಕುಡಿಯುವ ನೀರಿಗೂ ಹಾಹಾಕಾರವಿರುವಾಗ ಮರಗಳನ್ನು ಕಡಿಯುತ್ತಾ ಹೋದರೆ ಏನಾಗಬಹುದು ಎಂದು ಪ್ರಶ್ನಿಸಿದರು.

ಪರಿಸರವಾದಿ ಡಾ.ಹೆಚ್.ಎಸ್.ಟಿ.ಸ್ವಾಮಿ ಮಾತನಾಡಿ, ನೂರಾರು ಸಂಘಟನೆಗಳು, ಸಂಘ-ಸಂಸ್ಥೆಗಳು ಇರುವಂತಹ ಜಿಲ್ಲೆಯಲ್ಲಿ ಮರಗಳನ್ನು ಕಡಿಯಲು ನಡೆಸಿರುವ ಹುನ್ನಾರ ಇದೆಂತಹ ಕ್ರೌರ್ಯ: ನಾವು ಈಗ ಎಚ್ಚೆತ್ತುಕೊಳ್ಳಬೇಕಾಗಿದೆ. ಅದ್ಯಾವ ಪುರುಷಾರ್ಥಕ್ಕೆ ಜಿಲ್ಲಾಧಿಕಾರಿಗಳ ಕಛೇರಿ ಎಲ್ಲೊ ಕಟ್ಟಿಸಿ, ಕಟ್ಟಿದ ಮೇಲೆ ಅದನ್ನು ಬಿಟ್ಟು ಈಗ ತೋಟಗಾರಿಕೆ ಇಲಾಖೆಯಲ್ಲಿ 2500ಕ್ಕೂ ಅಧಿಕ ಮರಗಳನ್ನು ಕಡಿದು ಜಿಲ್ಲಾಧಿಕಾರಿಗಳ ಕಛೇರಿ ಕಟ್ಟುತ್ತೇವೆಂದು ಹೊರಟಿರುವುದು, ವಿಜ್ಞಾನ ಕಾಲೇಜಿನ ಮುಂಭಾಗದ 200 ಕ್ಕೂ ಅಧಿಕ ಮರಗಳನ್ನು ಕಡಿದು ಮಹಿಳಾ ಕಾಲೇಜನ್ನು ಕಟ್ಟುತ್ತೇವೆಂದು ಹೊರಟಿರುವುದು, ಈಗಿರುವ ಮರಗಳನ್ನು ಉಳಿಸಿಕೊಳ್ಳದಿದ್ದರೆ ಚಿತ್ರದುರ್ಗಕ್ಕೆ ಉತ್ತಮ ಗಾಳಿ, ವಾತಾವರಣ ಸಾಧ್ಯವೇ? ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಜಿಲ್ಲಾ ತೋಟಗಾರಿಕೆ ಸಂಘದ ಖಂಜಾಚಿ ನಾಗರಾಜ್ ಬೇದ್ರೇ ಮಾತನಾಡಿ, ತೋಟಗಾರಿಕೆ ಇಲಾಖೆಯ 2500 ಕ್ಕೂ ಅಧಿಕ ಮರಗಳನ್ನು ಕಡಿದು ಅಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣ, ಹಾಗೂ ವಿಜ್ಞಾನ ಕಾಲೇಜಿನ ಮುಂಭಾಗದಲ್ಲಿನ 250 ಕ್ಕೂ ಅಧಿಕ ಮರಗಳನ್ನು ಕಡಿದು ಮಹಿಳಾ ಕಾಲೇಜಿ ನಿರ್ಮಾಣ ಮಾಡಲು ಮುಂದಾಗಿ ರುವ ಸರ್ಕಾರದ ಕ್ರಮವನ್ನು ಖಂಡಿಸಿ ಏ. 6 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಪ್ರತಿಭಟನೆಯಲ್ಲಿ ರೈನ್ ಟ್ರಸ್ಟ್ (ರಿ), ಚಿತ್ರದುರ್ಗ, ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ, ಅಖಿಲ ಕರ್ನಾಟಕ ವನ ಕೃಷಿ ಹಾಗೂ ಶ್ರೀಗಂಧ ಬೆಳೆಗಾರರ ಸಂಘ (ರಿ), ಚಿತ್ರದುರ್ಗ ಜಿಲ್ಲಾ ಹಾಪ್ ಕಾಮ್ಸ್‍ನ ಆಡಳಿತ ಮಂಡಳಿ, ಜಿಲ್ಲಾ ತೋಟಗಾರಿಕ ಸಂಘದ ಸದಸ್ಯರು, ಚಿತ್ರದುರ್ಗ, ಟಾರ್ಗೇಟ್ 10000 ಗ್ರೂಪ್. ಪೂಜಾ ಚಾರಿಟೆಬಲ್ ಟ್ರಸ್ಟ್ (ರಿ), ಹೊಳಲ್ಕೆರೆ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ, ಚಿತ್ರದುರ್ಗ ವಿಜ್ಞಾನ ಹಳೆ ವಿದ್ಯಾರ್ಥಿಗಳ ಸಂಘ, ಚಿತ್ರದುರ್ಗ, ರಿದ್ದಿ ಪೌಂಡೇಶನ್, ಪ್ರಾಣಿ ದಯಾ ಸಂಘ, ಹಿರಿಯ ನಾಗರೀಕರ ಸಂಘ, ಕನ್ನಡ ಪರ ಸಂಘಟನೆಗಳು, ದಲಿತ ಸಂಘಟನೆಗಳು, ಮಹಿಳಾ ಸಂಘಟನೆಗಳು, ರೈತ ಸಂಘದ ಮುಖಂಡರುಗಳು ಹಾಗೂ ಪರಿಸರವಾದಿಗಳು ಜನಪರ ವೇದಿಕೆಗಳ ಸಂಯಕ್ತಾಶ್ರಯದಲ್ಲಿ ನಡೆಯಲಿದೆ ಎಂದರು.

ಗೋಷ್ಟಿಯಲ್ಲಿ ರೈನ್ ಟ್ರಸ್ಟ್‍ನ ಕಾರ್ಯದರ್ಶಿ ಮಂಜುನಾಥ್ ಕಳ್ಳಿಹಟ್ಟಿ, ಕರುನಾಡ ವಿಜಯ ಸೇನೆಯ ಜಿಲ್ಲಾಧ್ಯಕ್ಷರಾದ ಕೆ.ಟಿ.ಶಿವಕುಮಾರ್, ನ್ಯಾಯವಾದಿ ಮಧುಕುಮಾರ್, ನಾಗಭೂಷಣ್, ಶ್ರೀಮತಿ ಪದ್ಮಾವತಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *