ಚಿತ್ರದುರ್ಗ|ಇಂದು ಮಧ್ಯಾಹ್ನ 12. 15ಕ್ಕೆ ಶೂನ್ಯ ನೆರಳು:ಎಚ್. ಎಸ್. ಟಿ.ಸ್ವಾಮಿ

ಚಿತ್ರದುರ್ಗದಲ್ಲಿ ಏಪ್ರಿಲ್ 28ರ ಮಧ್ಯಾಹ್ನ 12 .15ಕ್ಕೆ ಒಂದು ನಿಮಿಷಗಳ ಕಾಲ ಶೂನ್ಯ ನೆರಳನ್ನು ನೋಡಬಹುದಾಗಿದೆ.

ವರ್ಷದಲ್ಲಿ ಎರಡು ಬಾರಿ ಅಂದರೆ ಏಪ್ರಿಲ್ ಮತ್ತು ಆಗಸ್ಟ್ ತಿಂಗಳಲ್ಲಿ ಶೂನ್ಯ ನೆರಳು ನೋಡಬಹುದಾಗಿದೆ. ಸೂರ್ಯನು ಆಗಸದಲ್ಲಿ ಉತ್ತರ ದಿಕ್ಕಿನಲ್ಲಿ ಸಾಗುವಾಗ ನಮ್ಮ ನೆತ್ತಿಯ ನೇರದಲ್ಲಿ ಇರುವಾಗ ನಮ್ಮ ನೆರಳು ನಮಗೆ ಕಾಣಿಸುವುದಿಲ್ಲ. ಏಪ್ರಿಲ್ 21ರಿಂದಲೇ ರಾಜ್ಯದ ನಾನಾ ಕಡೆಗಳಲ್ಲಿ ಶೂನ್ಯ ನೆರಳಿನ ವಿದ್ಯಮಾನ ಜರುಗಲಿದೆ.

ಸೂರ್ಯನು ನಮ್ಮ ನೆತ್ತಿಯ ಮೇಲೆ ನಿಖರವಾಗಿ ಇರುವಾಗ ನೆರಳು ನೇರವಾಗಿ ನಮ್ಮ ಕೆಳಗಿರುತ್ತದೆ. ಅಂದರೆ ನಾವು ನಮ್ಮ ನೆರಳಿನ ಮೇಲೆ ನಿಲ್ಲುವದರಿಂದ ಈ ನೆರಳು ನಮಗೆ ಕಾಣಿಸುವುದಿಲ್ಲ. ಇದೇ ಶೂನ್ಯ ನೆರಳು, ಭೂಮಿಯು 23.5 ಡಿಗ್ರಿ ಉತ್ತರಕ್ಕೆ ಬಾಗಿರುವುದರಿಂದ ಸೂರ್ಯನು ಉತ್ತರದಿಂದ ದಕ್ಷಿಣಕ್ಕೆ ಚಲಿಸಿದಂತೆ ಕಾಣುತ್ತದೆ. ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವೆ ವಾಸಿಸುವ ಎಲ್ಲರಿಗೂ ವರ್ಷದ ಎರಡು ದಿನಗಳಲ್ಲಿ ಸೂರ್ಯ ತುಂಬಾ ಉತ್ತುಂಗದಲ್ಲಿ ಗೋಚರಿಸುತ್ತಾನೆ. ಈ ಖಗೋಳ ವಿದ್ಯಮಾನವನ್ನು ಯಾವುದೇ ಉಪಕರಣಗಳ ಸಹಾಯವಿಲ್ಲದೆ ಎಲ್ಲರೂ ನೋಡಬಹುದಾಗಿದೆ.

ಇದನ್ನು ಧ್ವಜ ಕಂಬ, ಉದ್ದನೆಯ ಗೂಟ, ಒನಕೆ ಅಥವಾ ಎಂಟರಿಂದ ಹತ್ತು ಜನ ಕೈಗಳನ್ನು ವೃತ್ತಾಕಾರವಾಗಿ ಹಿಡಿದು ಶೂನ್ಯ ನೆರಳನ್ನು ನೋಡಬಹುದಾಗಿದೆ ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್. ಎಸ್. ಟಿ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *