
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಮಾ. 05 : ಬದುಕು ಎಂದರೆ ಬರೀ ಘರ್ಷಣೆ ಅಲ್ಲ. ಅದು ಪ್ರೀತಿ ಬಂಧುತ್ವದ ಸಂಕೇತ. ಪ್ರತಿಯೊಬ್ಬರು ದ್ವೇಷ ಅಸೂಯೆಗಳನ್ನು ಬದಿಗಿಟ್ಟು ಸಮರಸ ಜೀವನ ನಡೆಸುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ
ಆಡಳಿತ ಮಂಡಳಿ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ ಹೇಳಿದರು.
ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವದ
ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶ್ರೀಮಠದ ಸಾಮೂಹಿಕ ಕಲ್ಯಾಣ ಮಹೋತ್ಸವ ಇದೊಂದು ಯಶಸ್ವಿ ಕಾರ್ಯಕ್ರಮ. ಇಲ್ಲಿ
ವಧು-ವರರನ್ನು ಜೋಡಿಸುವುದಲ್ಲ. ಮನಸ್ಸುಗಳನ್ನು ಕುಟುಂಬಗಳನ್ನು ಒಂದುಗೂಡಿಸುವ ಕಾರ್ಯ ನಡೆಯುತ್ತಿದೆ. ಇಂಥ ಸಾಮೂಹಿಕ
ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಿ ಆರ್ಥಿಕ ಹೊರೆಯನ್ನು ತಗ್ಗಿಸಬೇಕಿದೆ. ಶ್ರೀಮಠವು ಬಸವ ಚಿಂತನೆಗಳ ಮೂಲಕ
ಮುನ್ನಡೆಯುತ್ತಿದೆ. ನಮ್ಮ ಎಲ್ಲಾ ಶಾಖಾಮಠಗಳ ಸ್ವಾಮಿಗಳು ತಮ್ಮ ಮಠಗಳಲ್ಲಿ ಕಲ್ಯಾಣ ಮಹೋತ್ಸವವನ್ನು ನಡೆಸಬೇಕು.
ಮಠ-ಮಠಗಳು ಒಂದುಗೂಡಿ ಸಮಾಜದ ಸ್ವಾಸ್ಥ್ಯಕ್ಕಾಗಿ ಯೋಚಿಸಬೇಕಾಗಿದೆ. ಅನಗತ್ಯವಾಗಿ ಖರ್ಚು ಆಗುವುದನ್ನು ನಿಲ್ಲಿಸಬೇಕಿದೆ.
ಆ ಹಣವನ್ನು ಒಳ್ಳೆಯ ಕಾರ್ಯಯೋಜನೆಗಳಿಗೆ ಬಳಸಕೊಳ್ಳಬಹುದು. ಬಡವರ ಬದುಕಿಗೆ ಬೆಳಕಾಗಬೇಕು. ನೊಂದವರ ಜೀವನದಲ್ಲಿ
ಒಂದಿಷ್ಟು ಭರವಸೆ ಮೂಡಿಸಬೇಕು. ಅಂತಹವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಎಲ್ಲರನ್ನು ನಮ್ಮವರಂತೆ
ಕಾಣಬೇಕು. ಎಲ್ಲರನ್ನು ನಮ್ಮವರಂತೆ ಕಾಣಬೇಕು. ನಾವು ಬದುಕಬೇಕು, ಇತರರನ್ನು ಬದಕಲು ಬಿಡಬೇಕು ಎಂದು ಹೇಳಿದರು.
ಗುರುಮಠಕಲ್‌ನ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ಶ್ರೀಮಠಕ್ಕೆ ನಾಲ್ಕುನೂರು ವರ್ಷಗಳ
ಇತಿಹಾಸವಿದೆ. ಶ್ರೀಮಠವು ಕಳೆದ ೩೫ವರ್ಷಗಳಿಂದ ಸಾಮೂಹಿಕ ಕಲ್ಯಾಣ ಮಹೋತ್ಸವ ನೆರವೇರಿಸುತ್ತ ಬರುತ್ತಿದ್ದು, ಅದರ
ಸದುಪಯೋಗವನ್ನು ಈ ಭಾಗದ ಜನತೆ ಪಡೆಯುತ್ತಿರುವುದು ಶ್ರೀಮಠದ ಜನಪರ ಕಾಳಜಿಯುಳ್ಳ ಈ ಕಾರ್ಯಕ್ರಮವು
ಸಾರ್ಥಕತೆಯನ್ನು ಸಫಲತೆಯನ್ನು ಕಂಡಂತಾಗಿದೆ ಎಂದು ಪ್ರಾಸ್ತಾವಿಕವಾಗಿ ನುಡಿದರು.
ಜೆಡಿಯು ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಮಹಿಮಾ ಜೆ.ಪಟೇಲ್ ಮಾತನಾಡಿ, ನವ ವಧು-ವರರ ಜೀವನ ಮುಂದಿನ
ದಿನಗಳಲ್ಲಿ ಸುಖಮಯವಾಗಿರಲಿ. ಕಲ್ಯಾಣ ಎಂದರೆ ಎಲ್ಲರಿಗೂ ಒಳ್ಳೆಯದಾಗುವುದು. ಒಳ್ಳೆಯ ಭಾವನೆಗಳನ್ನು ನಮ್ಮೊಳಗೆ
ತುಂಬಿಕೊಳ್ಳುವುದು. ಶ್ರೀಮಠಕ್ಕೆ ದೊಡ್ಡ ಇತಿಹಾಸ ಇದೆ. ಈ ಮಠಕ್ಕೆ ಎಲ್ಲ ಜಾತಿಧರ್ಮದವರು ನಡೆದುಕೊಳ್ಳುತ್ತಿದ್ದಾರೆ. ಎಲ್ಲರೂ
ಇದನ್ನು ನಮ್ಮ ಮಠ ಎನ್ನುತ್ತಾರೆ. ನಮ್ಮ ಪೂರ್ವಜರು ಶ್ರೀಮಠಕ್ಕೆ ನಡೆದುಕೊಂಡು ಬಂದಿದ್ದಾರೆ. ಎಲ್ಲ ಮಠಗಳು ಒಟ್ಟಾಗಿ
ಸರ್ವೋದಯದ ಭಾವನೆ ಮೂಡಿಸಬೇಕೆಂದರು.
ಕಾರ್ಯಕ್ರಮದಲ್ಲಿ ೧೨ ಜೋಡಿಗಳ ವಿವಾಹ ನೆರವೇರಿತು.ಡಾ. ನಾಗರಾಜ ಮಾಲೂರು ಮಾತನಾಡಿದರು. ಶ್ರೀ ಜಗದ್ಗುರು
ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಎಸ್.ಎನ್. ಚಂದ್ರಶೇಖರ್ ವೇದಿಕೆಯಲ್ಲಿದ್ದರು. ಶ್ರೀ ಬಸವ
ಕಬೀರ ಸ್ವಾಮಿಗಳು, ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಕುಂಬಾರ ಗುಂಡಯ್ಯ ಸ್ವಾಮಿಗಳು, ಶ್ರೀ ಬಸವ ಮಹಾಂತ
ಸ್ವಾಮಿಗಳು, ಶ್ರೀ ಬಸವ ನಿರಂಜನ ಸ್ವಾಮಿಗಳು, ಶ್ರೀ ಚೆನ್ನಬಸವ ಸ್ವಾಮಿಗಳು, ಪೈಲ್ವಾನ್ ತಿಪ್ಪೇಸ್ವಾಮಿ ಮೊದಲಾದವರಿದ್ದರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಸ್ವಾಗತಿಸಿದರು. ಜಮುರಾ ಕಲಾವಿದರು ಪ್ರಾರ್ಥನೆ ಮಾಡಿದರು. ಗಂಜಿಗಟ್ಟೆ ಕೃಷ್ಣಮೂರ್ತಿ ವಚನ ಗಾಯನ ಮಾಡಿದರು. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.