ಆಯುಷ್ ಇಲಾಖೆಯಿಂದ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮ: ಉತ್ತಮ ಆರೋಗ್ಯಕ್ಕೆ ಉತ್ತಮ ಪರಿಸರ ಮುಖ್ಯ. _ ಡಾ|| ವಿಜಯಲಕ್ಷ್ಮಿ ಪಿ.(ಆಡಳಿತ ವೈದ್ಯಾಧಿಕಾರಿ ಜೆ ಎನ್ ಕೋಟೆ)

ಅವರು ಬುಧವಾರ ಸ್ವಚ್ಚತಾ ಹೀ ಸೇವಾ_2024 ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಚಿತ್ರದುರ್ಗ ತಾಲ್ಲೂಕು ಜೆ ಎನ್ ಕೋಟೆ ಗ್ರಾಮ ಪಂಚಾಯತಿ , ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ ಇವರುಗಳ  ಸಹಯೋಗದೊಂದಿಗೆ ಸರ್ಕಾರಿ ಆಯುಷ್ ಆಯುರ್ವೇದ ಆರೋಗ್ಯ ಮತ್ತು ಕ್ಷೇಮ ಮಂದಿರ ಜೆ ಎನ್ ಕೋಟೆ ವತಿಯಿಂದ ಸರ್ಕಾರಿ ಆಯುರ್ವೇದ ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಚತಾ ಕಾರ್ಯ ಹಾಗೂ ವೃಕ್ಷಾರೋಹಣ ಕಾರ್ಯಕ್ರಮಕ್ಕೆ ಸಸಿ ನೀಡುವುದರೊಂದಿಗೆ ಚಾಲನೆ ‌ನೀಡಿ ಮಾತನಾಡುತ್ತಾ ಪರಿಶುದ್ಧ ಗಾಳಿ, ನೀರು, ಆಹಾರವನ್ನು ನಾವು ಸದ್ಬಳಕೆ ಮಾಡಿಕೊಂಡು, ಆರೋಗ್ಯವಂತ ಜೀವನ ನಡೆಸಬೇಕಾದರೆ ತಮ್ಮ ಮನೆಯ ಸುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ನೈರ್ಮಲ್ಯ ಕದಡದಂತೆ ನೋಡಿಕೊಂಡು ಗಿಡಮರವನ್ನು ಬೆಳೆಸಿ ಪರಿಸರ ಶುದ್ಧತೆಯನ್ನು ಹೆಚ್ಚಿಸಬೇಕು. ಪ್ರತಿಯೊಬ್ಬರು ಪರಸರದ ಬಗ್ಗೆ ಪ್ರಜ್ಞಾವಂತಿಕೆ ಬೆಳೆಸಿಕೊಂಡರೆ ಮಾತ್ರ ನಶಿಸಿ ಹೋಗುತ್ತಿರುವ ಹಸಿರು ಪ್ರಕೃತಿಯನ್ನು ಮತ್ತೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜೆ ಎನ್ ಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಡಿ.ಮಲ್ಲೇಶ್ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಶುಚಿತ್ವ ಕಾಪಾಡಬೇಕಾದರೆ ಪ್ರತಿಯೊಂದು ಮನೆಯು ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಸ್ವಚ್ಛಭಾರತ್ ಯೋಜನೆ ಹಾಗೂ ನರೇಗಾ ಯೋಜನೆಯಡಿ ಪ್ರತಿ ಮನೆಗೆ ಶೌಚಾಲಯ ನಿರ್ಮಾಣಕ್ಕೆ ಗ್ರಾಮ ಪಂಚಾಯತಿ ಕ್ರಮ ಕೈಗೊಳ್ಳುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಗ್ರಾಮವನ್ನು ಸ್ವಚ್ಛತೆ ಮಾಡಿದಾಗ ಮಹಾತ್ಮ ಗಾಂಧಿಜೀ ಅವರು ಕಂಡ ಗ್ರಾಮ ಸ್ವರಾಜ್ ಕನಸು ಈಡೇರುತ್ತದೆ ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮದ ಮಹತ್ವವನ್ನು ಕುರಿತು ಮಾತನಾಡಿದ ಜೆ ಎನ್ ಕೋಟೆ ಗ್ರಾ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಪಿಡಿಒ) ಮಂಜುಳಾ ಕೆ.ಎಸ್. ಸ್ವಚ್ಛತಾ ಹಿ ಸೇವಾ ಅಭಿಯಾನ 2024 ಇಂದು “ಸ್ವಭಾವ ಸ್ವಚ್ಛತಾ – ಸಂಸ್ಕಾರ ಸ್ವಚ್ಛತಾ” ಎಂಬ ವಿಷಯದ ಅಡಿಯಲ್ಲಿ ಸ್ವಚ್ಛತೆ ಮತ್ತು ಪರಿಸರ ಸುಸ್ಥಿರತೆಗೆ ಹೆಚ್ಚಿನ ಒತ್ತು ನೀಡುವುದಕ್ಕಾಗಿ ಪ್ರಾರಂಭಿಸಿರುವ ಈ ಕಾರ್ಯಕ್ರಮದಲ್ಲಿ ಕೇವಲ ಸರ್ಕಾರಿ ಅಧಿಕಾರಿಗಳು ಮಾತ್ರ ಭಾಗವಹಿಸದೆ ಪ್ರತಿ ಗ್ರಾಮದ ಪ್ರತಿಯೊಬ್ಬ ನಾಗರೀಕರೂ ಭಾಹವಹಿಸಿ ಯಶಸ್ಸುಗೊಳಿಸಬೇಕು ಆಗ ಮಾತ್ರ ನಮ್ಮ ದೇಶವನ್ನು ಸ್ವಚ್ಛ ಭಾರತವನ್ನಾಗಿ ಮಾಡಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜೆ ಎನ್ ಕೋಟೆ ಆಯುಷ್ ಕೇಂದ್ರದ  ಯೋಗ ತರಬೇತುದಾರ ರವಿ ಕೆ.ಅಂಬೇಕರ್, ಪೂಜಾನಾಯಕ, ಗ್ರಾ.ಪಂ.ಸದಸ್ಯರಾದ ಪಾಲಯ್ಯ ಎಂ ಪಿ, ಶಿವಮೂರ್ತಿ, ಈರಮ್ಮ, ಗ್ರಾ.ಪಂಚಾಯತಿ ಹಾಗೂ ಆಯುಷ್ ಕೇಂದ್ರದ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.

Leave a Reply

Your email address will not be published. Required fields are marked *