ಮೊದಲೆರೆಡು ಪಂದ್ಯಗಳಲ್ಲಿ ಭಾರತ ತಂಡದ ಪ್ರಮುಖ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮತ್ತು ಜಸ್ ಪ್ರೀತ್ ಬುಮ್ರಾ ರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬಂದಿರಲಿಲ್ಲ. ಪ್ರಮುಖವಾಗಿ ಕೊಹ್ಲಿ ಮತ್ತು ರೋಹಿತ್ ಪ್ರದರ್ಶನ ತುಂಬಾ ಕಳಪೆಯಾಗಿತ್ತು.
ನವದೆಹಲಿ: ತವರಿನಲ್ಲೇ ನ್ಯೂಜಿಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತ ಕ್ರಿಕೆಟ್ ತಂಡ ಸೋತಿರುವುದು ಇಡೀ ಕ್ರಿಕೆಟ್ ವಲಯದ ಆಘಾತಕ್ಕೆ ಕಾರಣವಾಗಿರುವಂತೆಯೇ ಇತ್ತ, ತಂಡದ ಕಳಪೆ ಪ್ರದರ್ಶನದಿಂದ ಅಸಮಾಧಾನಗೊಂಡಿರುವ ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ತಂಡದ ಪ್ರಮುಖ ಆಟಗಾರರಿಗಿದ್ದ ವಿಶೇಷ ಸವಲತ್ತನ್ನು ಕಡಿತಗೊಳಿಸಿದ್ದಾರೆ.
ಕಿವೀಸ್ ವಿರುದ್ಧದ ಸರಣಿ ಸೋಲಿನ ಅರ್ಥವೇನೆಂದರೆ, ಭಾರತ ತಂಡವು 12 ವರ್ಷಗಳಲ್ಲಿ ಮೊದಲ ಬಾರಿಗೆ ತವರಿನಲ್ಲಿ ಸರಣಿ ಸೋಲು ಅನುಭವಿಸಿದೆ. ಈ ಹಿಂದೆ 2012 ರಲ್ಲಿ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಸರಣಿ ಸೋಲು ಅನುಭವಿಸಿತ್ತು. ಇದೀಗ ಮತ್ತೆ ನ್ಯೂಜಿಲೆಂಡ್ ವಿರುದ್ಧ ಸರಣಿ ಸೋಲಿನ ಬಳಿಕ ಮತ್ತದೇ ಅಪಮಾನಕ್ಕೆ ತುತ್ತಾಗಿದೆ.
ಗೌತಮ್ ಗಂಭೀರ್ ಕೋಚ್ ಆಗಿ ಆಯ್ಕೆಯಾದ ಬಳಿಕ ತಂಡಕ್ಕೆ ಮತ್ತೊಂದು ಹೀನಾಯ ಸರಣಿ ಸೋಲು ಎದುರಾಗಿದೆ. ಮೊದಲೆರೆಡು ಪಂದ್ಯಗಳಲ್ಲಿ ಭಾರತ ತಂಡದ ಪ್ರಮುಖ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮತ್ತು ಜಸ್ ಪ್ರೀತ್ ಬುಮ್ರಾ ರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬಂದಿರಲಿಲ್ಲ. ಪ್ರಮುಖವಾಗಿ ಕೊಹ್ಲಿ ಮತ್ತು ರೋಹಿತ್ ಪ್ರದರ್ಶನ ತುಂಬಾ ಕಳಪೆಯಾಗಿತ್ತು.
‘Privilege’ ಬಂದ್!
ಇನ್ನು ಈ ಸತತ ಸೋಲುಗಳಿಂದ ಮತ್ತು ತಂಡದ ಕಳಪೆ ಪ್ರದರ್ಶನದಿಂದ ಅಸಮಾಧಾನಗೊಂಡಿರುವ ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಹಿರಿಯ ಸ್ಟಾರ್ ಆಟಗಾರರಿಗೆ ನೀಡಿದ್ದ ವಿಶೇಷ ಸವಲತ್ತನ್ನು ಸ್ಥಗಿತಗೊಳಿಸಿದ್ದಾರೆ. ತಂಡದ ಸ್ಟಾರ್ ಆಟಗಾರರ ‘ಐಚ್ಛಿಕ ತರಬೇತಿ’ ಅವಧಿಯನ್ನು ರದ್ದುಗೊಳಿಸಲಾಗಿದೆ.
ಸಾಂಪ್ರದಾಯಿಕವಾಗಿ, ಒಂದು ತರಬೇತಿ ಅವಧಿಯನ್ನು ಆಟಗಾರರಿಗೆ ಐಚ್ಛಿಕವಾಗಿ ಇರಿಸಲಾಗಿರುತ್ತದೆ. ಟಾಪ್ ಬ್ಯಾಟರ್‌ಗಳು ಮತ್ತು ಸೀಮರ್‌ಗಳು ಆಗಾಗ್ಗೆ ಆ ಸೆಶನ್ ಗೆ ಗೈರಾಗಬಹುದು. ಕೇವಲ ಲಘು ತರಬೇತಿಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳಬಹುದಾಗಿದೆ. ಆದರೆ ಇದೀಗ ಈ ಐಚ್ಛಿಕ ತರಬೇತಿಯನ್ನು ರದ್ದು ಮಾಡಲಾಗಿದೆ.
ಅಕ್ಟೋಬರ್ 30 ಮತ್ತು 31 ರಂದು ಎರಡು ದಿನಗಳ ಅಭ್ಯಾಸಕ್ಕೆ ಹಾಜರಾಗುವಂತೆ ಆಟಗಾರರನ್ನು ಕೇಳಿದೆ. ಇದು ಕಡ್ಡಾಯವಾಗಿದ್ದು, ಯಾರೂ ಗೈರಾಗುವಂತಿಲ್ಲ ಎಂದು ಮೂಲಗಳು ತಿಳಿಸಿವೆ