Coconut Jaggery Barfi: ಸಿಹಿ ತಿನ್ನುವ ಬಯಕೆಯಾದರೆ ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಆರೋಗ್ಯಕರ ತೆಂಗಿಕಾಯಿ ಬರ್ಫಿ

ಮನೆಯಲ್ಲಿ ಮಕ್ಕಳು ಯಾವಾಗಲೂ ಸಿಹಿ ತಿನ್ನಲು ಬಯಸುತ್ತಾರೆ. ಹೆಚ್ಚಾಗಿ ಚಾಕೋಲೇಟ್ ಹಾಗೂ ಮಾರುಕಟ್ಟೆಯಲ್ಲಿ ಸಿಗುವಂತಹ ಇತರೆ ಸಿಹಿ ತಿನಿಸುಗಳನ್ನು ತಿನ್ನುತ್ತಾರೆ. ಇಂತಹ ಸಿಹಿ ಪದಾರ್ಥಗಳನ್ನು ತಿಂದಾಗ ಕೆಲವೊಮ್ಮೆ ಹೊಟ್ಟೆ ನೋವು ಕಾಣಿಸಿಕೊಳ್ಳುವಂತಹ ಸಾಧ್ಯತೆ ಇರುತ್ತದೆ. ಹೀಗಿರುವಾಗ ಮಕ್ಕಳ ಸಿಹಿ ತಿನಿಸುಗಳ ಬಯಕೆಯನ್ನು ಪೂರೈಸಲು ನೀವು ಬೆಲ್ಲ ಹಾಗೂ ತೆಂಗಿನಕಾಯಿ ತುರಿಯಿಂದ ಮಾಡಿದಂತಹ ಆರೋಗ್ಯಕರ ಬರ್ಫಿಯನ್ನು ತಯಾರಿಸಬಹುದು. ಈ ಸುಲಭ ಪಾಕವಿಧಾನದ ಮಾಹಿತಿ ಇಲ್ಲಿದೆ.

ಮನೆಯಲ್ಲಿ ಮಕ್ಕಳಾಗಿರಲಿ ಅಥವಾ ಹಿರಿಯರಾಗಿರಲಿ ಎಲ್ಲರೂ  ಸಿಹಿ ತಿಂಡಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಅಧಿಕ ಸಕ್ಕರೆಯನ್ನು ಬಳಸಿ ಮಾಡಿದಂತಹ ಸಿಹಿಗಳು ಆರೋಗ್ಯಕ್ಕೆ ಅಷ್ಟೇನು ಒಳ್ಳೆಯದಲ್ಲ. ಇದು ಮಕ್ಕಳಲ್ಲಿ ಹೊಟ್ಟೆನೋವು ಹಾಗೂ ಹಿರಿಯರಲ್ಲಿ ಮಧುಮೇಹದಂತಹ ಸಮಸ್ಯೆಯನ್ನು ಉಂಟುಮಾಡಬಹುದು. ಹೀಗಿರುವಾಗ ಮನೆ ಮಂದಿಯ ಸಿಹಿ ತಿನ್ನುವ ಬಯಕೆಯನ್ನು ಈಡೇರಿಸಲು ನೀವು ಬೆಲ್ಲ ಮತ್ತು ತೆಂಗಿನಕಾಯಿ ತುರಿಯಿಂದ ಮಾಡಿದಂತಹ ಆರೋಗ್ಯಕರ ಬರ್ಫಿಯನ್ನು ತಯಾರಿಸಬಹುದು. ಈ ಸಿಹಿಯನ್ನು ಬೆಲ್ಲದಿಂದ ತಯಾರಿಸಲಾಗುವುದರಿಂದ ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅಲ್ಲದೆ ಮನೆಯಲ್ಲಿ ಹಬ್ಬದ ಸಮಯದಲ್ಲಿಯೂ ಈ ಸಿಹಿಯನ್ನು ತಯಾರಿಸಿ, ಮನೆಯವರಿಗೆ ಹಾಗೂ ನೆಂಟರಿಗೆ ನೀಡಬಹುದು. ಸಿಹಿ ತಿಂಡಿಗಳ  ಆರೋಗ್ಯಕರ ಆವೃತ್ತಿಯಾಗಿರುವ ಈ ತೆಂಗಿನಕಾಯಿ ಬರ್ಫಿ ತಿನ್ನಲು ರುಚಿಕರವಾದ್ದು ಮಾತ್ರವಲ್ಲದೆ, ಇದನ್ನು ತುಂಬಾ ಸುಲಭವಾಗಿ ತಯಾರಿಸಬಹುದು. ಹಾಗಿದ್ದರೆ ರುಚಿಕರವಾದ ಬೆಲ್ಲದ ಬರ್ಫಿ ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.

ಬೆಲ್ಲ ಮತ್ತು ತೆಂಗಿನಕಾಯಿ ಬರ್ಫಿ ಮಾಡಲು ಬೇಕಾಗಿರುವ ಸಾಮಾಗ್ರಿಗಳು:

  • 100 ಗ್ರಾಂ ಬೆಲ್ಲ
  •  100 ಗ್ರಾಂ ತಾಜಾ ತೆಂಗಿನಕಾಯಿ ತುರಿ
  • 1 ಕಪ್ ಹಾಲಿನ ಪುಡಿ (ಐಚ್ಛಿಕ)
  • 1 ಕಪ್ ತಾಜಾ ಕೆನೆ (ಐಚ್ಛಿಕ)
  • ತುಪ್ಪ
  • ಒಣಹಣ್ಣುಗಳು
  • ಏಲಕ್ಕಿ ಪುಡಿ

ಬೆಲ್ಲ ಮತ್ತು ತೆಂಗಿನಕಾಯಿ ಬರ್ಫಿ ತಯಾರಿಸುವ ವಿಧಾನ:

ಮೊದಲು ಒಂದು ಪಾತ್ರೆಯಲ್ಲಿ ಹಾಲಿನ ಪುಡಿ ಮತ್ತು ತಾಜಾ ಕೆನೆಯನ್ನು ಸೇರಿಸಿ, ಈ ಮಿಶ್ರಣ ಗಂಟುಕಟ್ಟಿಕೊಳ್ಳದ ಹಾಗೆ ಚೆನ್ನಾಗಿ ಬೆರೆಸಿ ಪಕ್ಕಕ್ಕೆ ಇಡಿ. ಈಗ ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಹಾಕಿ ಅದು ಕಾದ ಬಳಿಕ ಅದಕ್ಕೆ ತೆಂಗಿನಕಾಯಿ ತುರಿ ಹಾಕಿ ಕಡಿಮೆ ಉರಿಯಲ್ಲಿ ಅದನ್ನು ಹುರಿದುಕೊಳ್ಳಿ. ತೆಂಗಿನಕಾಯಿ ತುರಿಯನ್ನು ಹುರಿದ ಬಳಿಕ ಅದಕ್ಕೆ ತುರಿದ ಅಥವಾ ಪುಡಿ ಮಾಡಿದ ಬೆಲ್ಲವನ್ನು ಸೇರಿಸಿ, ತಳ ಹಿಡಿಯದ ಹಾಗೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈಗ ಅದಕ್ಕೆ ತಾಜಾ ಕ್ರೀಮ್ ಮತ್ತು ಹಾಲಿನ ಪುಡಿಯ ಮಿಶ್ರಣವನ್ನು ಸೇರಿಸಿ. (ಇದು ಐಚ್ಛಿಕ. ನಿಮಗೆ ಹಾಲು ಇಷ್ಟವಿಲ್ಲದಿದ್ದರೆ, ಬರ್ಫಿಗೆ ಹಾಲು ಮತ್ತು ಕೆನೆಯ ಮಿಶ್ರಣವನ್ನು ಸೇರಿಸಬೇಕೆಂದಿಲ್ಲ)

ಈ ಮಿಶ್ರಣವನ್ನು ಚೆನ್ನಾಗಿ ಬೆರೆಸಿಕೊಳ್ಳಿ. ಈಗ ಅದಕ್ಕೆ ಇನ್ನೊಂದು ಬಾರಿ ಸ್ವಲ್ಪ ತುಪ್ಪ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಬರ್ಫಿಯ ತೇವಾಂಶ ಆವಿಯಾಗುವವರೆಗೆ ಬೆರೆಸಿಕೊಳ್ಳಿ. ಬರ್ಫಿ ಮಿಶ್ರಣ ತಯಾರಾದ ಬಳಿಕ ಗ್ಯಾಸ್ ಆಫ್ ಮಾಡಿ ಒಂದು ಬಟ್ಟಲಿಗೆ ತುಪ್ಪವನ್ನು ಹರಡಿ, ಅದರ ಮೇಲೆ ಸಿದ್ಧವಾದ ಬರ್ಫಿ ಮಿಶ್ರಣವನ್ನು ಹಾಕಿ ಹರಡಿಕೊಳ್ಳಿ, ಹಾಗೂ ಅದರ ಮೇಲೆ ನಿಮ್ಮ ನೆಚ್ಚಿನ ಒಣಹಣ್ಣನ್ನು ಇಟ್ಟು ಅಲಂಕರಿಸಿ. ಅದು ತಣ್ಣಗಾದ ಬಳಿಕ ನಿಮಗೆ ಬೇಕಾಗಿರುವ ಆಕಾರದಲ್ಲಿ ಬರ್ಫಿಯನ್ನು ತುಂಡರಿಸಿ ಮನೆಯವರಿಗೆ ಬಡಿಸಿ.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://tv9kannada.com/lifestyle/if-you-are-craving-something-sweets-make-healthy-coconut-barfi-easily-at-home-lifestyle-news-mda-676796.html

Leave a Reply

Your email address will not be published. Required fields are marked *