ಬಿಗ್​ ಬಾಸ್​ ಕನ್ನಡ 11: ಹೊಸ ಆ್ಯಂಕರ್​ ಬಗ್ಗೆ ಸುಳಿವು ನೀಡಿದ ‘ಕಲರ್ಸ್​ ಕನ್ನಡ’.

ಇನ್ನೇನು ಕೆಲವೇ ದಿನಗಳಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶುರುವಾಗಲಿದೆ. ಈ ಬಾರಿ ಯಾವೆಲ್ಲ ಸ್ಪರ್ಧಿಗಳು ಬರುತ್ತಾರೆ ಎಂಬುದಕ್ಕಿಂತಲೂ ಆ್ಯಂಕರ್​ ಯಾರು ಎಂಬ ಪ್ರಶ್ನೆಯೇ ಎಲ್ಲರ ತಲೆಯಲ್ಲೂ ಕೊರೆಯುತ್ತಿದೆ. ಆ ಪ್ರಶ್ನೆಯನ್ನು ಇನ್ನಷ್ಟು ದೊಡ್ಡದು ಮಾಡುವ ರೀತಿಯಲ್ಲಿ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದೆ. ‘ಕಲರ್ಸ್​ ಕನ್ನಡ’ ವಾಹಿನಿಯ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಈ ಪ್ರೋಮೋ ವೈರಲ್​ ಆಗಿದೆ. ಪ್ರೋಮೋದಲ್ಲಿ ಕಿಚ್ಚ ಸುದೀಪ್​ ಕಾಣಿಸಿಕೊಂಡಿಲ್ಲ. ಅವರಿಗೆ ಸಂಬಂಧಿಸಿದ ಹ್ಯಾಶ್​ ಟ್ಯಾಗ್​ ಕೂಡ ಇಲ್ಲ! ಹಾಗಾಗಿ ವೀಕ್ಷಕರಲ್ಲಿ ಕೌತುಕ ಜಾಸ್ತಿ ಆಗಿದೆ.

ಕಿಚ್ಚ ಸುದೀಪ್​ ಅವರು ಕಳೆದ 10 ಸೀಸನ್​ಗಳಿಗೆ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಬಿಗ್ ಬಾಸ್​ ಎಂದರೆ ಸುದೀಪ್​, ಸುದೀಪ್​ ಎಂದರೆ ಬಿಗ್ ಬಾಸ್​ ಎಂಬ ರೀತಿ ಭಾವನೆ ಎಲ್ಲರಲ್ಲೂ ಇದೆ. ಆದರೆ ಈ ಬಾರಿ ಅವರು ಇರುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಬಲವಾಗಿ ಕಾಡುತ್ತಿದೆ. ಹೊಸ ಸೀಸನ್​ಗೆ ನಿರೂಪಕರ ಬದಲಾವಣೆ ಆಗಲಿದೆ ಎಂಬ ಗಾಸಿಪ್​ ಸಾಕಷ್ಟು ದಿನಗಳಿಂದ ಕೇಳಿಬರುತ್ತಿದೆ.

ಹೊಸ ಪ್ರೋಮೋದಲ್ಲಿ ಏನಿದೆ?

‘ಇದು ಬಿಗ್​ ಬಾಸ್​.. ನಮಸ್ಕಾರ ಕರ್ನಾಟಕ, ಹೇಗಿದ್ದೀರ? 10 ವರ್ಷದಿಂದ ನೋಡ್ತಾನೇ ಇದ್ದೀರ. ಇದು ದೊಡ್ಡದಾಗ್ತಾನೇ ಇದೆ. ಈ ಬಾರಿ ಇನ್ನೂ ದೊಡ್ಡದು ಕಾದಿದೆ. ಯಾಕೆಂದರೆ ಇದು ಹೊಸ ದಶಕ, ಹೊಸ ಆಟ, ಹೊಸ ಅಧ್ಯಾಯ’ ಎಂಬ ಬಿಗ್​ ಬಾಸ್​ ಧ್ವನಿ ಕೇಳಿಸಿದೆ. ‘ಹಾಗಾದ್ರೆ ಆ್ಯಂಕರ್​ ಕೂಡ ಹೊಸುಬ್ರ?’ ಎಂಬ ಪ್ರಶ್ನೆಯನ್ನೂ ಕೇಳಲಾಗಿದೆ. ಆ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

ಈ ಪ್ರೋಮೋಗೆ ಅನೇಕರು ಕಮೆಂಟ್​ ಮಾಡಿದ್ದಾರೆ. ‘ಆ್ಯಂಕರ್​ ಚೇಂಜ್​ ಮಾಡಬೇಡಿ’ ಎಂದು ಕಿಚ್ಚ ಸುದೀಪ್​ ಫ್ಯಾನ್ಸ್​ ಮನವಿ ಮಾಡಿದ್ದಾರೆ. ಸುದೀಪ್​ ಅಲ್ಲದೇ ಬೇರೆ ಯಾರನ್ನೂ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ‘ರಿಷಬ್​ ಶೆಟ್ಟಿ ಅವರು ನಿರೂಪಣೆ ಮಾಡ್ತಾರೆ’ ಎಂದು ಕೆಲವರು ಊಹಿಸಿದ್ದಾರೆ. ರಿಷಬ್ ಶೆಟ್ಟಿ ಅವರನ್ನು ಟ್ಯಾಗ್​ ಮಾಡಿ ಈ ಬಗ್ಗೆ ಪ್ರಶ್ನೆ ಮಾಡಲಾಗಿದೆ.

Source : https://tv9kannada.com/entertainment/television/kichcha-sudeep-or-rishab-shetty-who-will-host-bigg-boss-kannada-season-11-entertainment-news-in-kannada-mdn-900012.html

 

Leave a Reply

Your email address will not be published. Required fields are marked *