ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ, ಡಿ.21:ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಜಾರಿ ವಿಚಾರದಲ್ಲಿ ಯಾರೂ ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಮಾಜಿ ಸಚಿವ H. Anjaneya ತಿಳಿಸಿದರು. ಆದರೆ, ಒಂದು ವೇಳೆ ಮಾದಿಗರ ಹಕ್ಕುಗಳಿಗೆ ಚ್ಯುತಿ ಉಂಟಾದರೆ ಅಥವಾ ಒಳಮೀಸಲಾತಿ ಜಾರಿಗೆ ಅಡ್ಡಿಯಾಗಿದರೆ, ಎಲ್ಲರೂ ಬೀದಿಗೆ ಬಂದು ಹೋರಾಟ ನಡೆಸಬೇಕೆಂದು ಅವರು ಸ್ಪಷ್ಟ ಕರೆ ನೀಡಿದರು.
ನಗರದ ಲೀಡ್ಕರ್ ಭವನದಲ್ಲಿ ಭಾನುವಾರ ಜಿಲ್ಲಾ ಮಾದಿಗ ನೌಕರರ ಸಾಂಸ್ಕೃತಿಕ ಸಂಘ ಹಮ್ಮಿಕೊಂಡಿದ್ದ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ವಲಯದ ಮುಖ್ಯ ಇಂಜಿನಿಯರ್ ಕೆ.ಜಿ. ಜಗದೀಶ್ ಹಾಗೂ ನಿವೃತ್ತ ಶಿಕ್ಷಕ ವೀರಣ್ಣ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾದಿಗರಿಗೆ ಒಳಮೀಸಲಾತಿ ಸಿಗಬೇಕು ಎಂಬ ಹೋರಾಟ ಸುಮಾರು 25 ವರ್ಷಗಳ ಕಾಲ ನಡೆದಿದ್ದು, ಈ ಹೋರಾಟಕ್ಕೆ ಎಲ್ಲ ನಾಯಕರು ಕೈಜೋಡಿಸಿದ್ದಾರೆಯೆಂದರು.
ಈಗ ಒಳಮೀಸಲಾತಿ ಜಾರಿಯಾಗಿದ್ದು, ಕೆಲವು ತಾಂತ್ರಿಕ ದೋಷಗಳಷ್ಟೇ ಉಳಿದಿವೆ. ಅವನ್ನೂ ಸರ್ಕಾರ ಸರಿಪಡಿಸಲಿದೆ ಎಂದು ಭರವಸೆ ನೀಡಿದರು.ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಯಾವುದೇ ಅನುಮಾನ ಅಥವಾ ಆತಂಕ ಬೇಡ ಎಂದು ತಿಳಿಸಿದ ಅವರು, ಈ ವಿಚಾರದಲ್ಲಿ ಮುಖ್ಯಮಂತ್ರಿ Siddaramaiah ಅವರಿಗೆ ಪೂರ್ಣ ಬದ್ದತೆ ಇದೆ ಎಂದರು. ಸಾಮಾಜಿಕ ನ್ಯಾಯದ ಪರವಾಗಿ ಸದಾ ನಿಂತಿರುವ ಸಿದ್ದರಾಮಯ್ಯ ಅವರ ವಿರುದ್ಧ ಕೆಲವರು ಅನಗತ್ಯವಾಗಿ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಒಂದು ವೇಳೆ ಈ ವಿಷಯದಲ್ಲಿ ಅಡ್ಡಿ ಅಥವಾ ಆತಂಕ ಸೃಷ್ಟಿಯಾದರೆ, ಎಲ್ಲಾ ಮಾದಿಗರ ಜೊತೆಗೆ ಸರ್ಕಾರಿ ನೌಕರರೂ ಸಹ ಬೀದಿಗೆ ಬಂದು ಹೋರಾಟ ನಡೆಸೋಣ ಎಂದು ಹೇಳಿದರು.
ಜಿಲ್ಲೆಯಲ್ಲಿ ಸುಮಾರು ಮೂರು ದಶಕಗಳ ಕಾಲ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿರುವ ಕೆ.ಜಿ. ಜಗದೀಶ್ ಅವರು ಸತತವಾಗಿ ನಾಲ್ಕು ಬಾರಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದನ್ನು ಸ್ಮರಿಸಿದ ಹೆಚ್. ಆಂಜನೇಯ, ಅವರು ಎಲ್ಲಾ ಜಾತಿ–ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಶ್ಲಾಘಿಸಿದರು. ಅವರಲ್ಲಿ ರಾಜಕೀಯದತ್ತ ಒಲವು ಕಂಡುಬರುತ್ತಿದ್ದು, ಆಗ್ನೇಯ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದರೆ ಖಂಡಿತ ಬೆಂಬಲ ನೀಡುವುದಾಗಿ ಘೋಷಿಸಿದರು.
ಮಾಜಿ ಸಂಸದ B. N. Chandrappa ಮಾತನಾಡಿ, ಜನಸಂಖ್ಯೆಯಲ್ಲಿ ಮಾದಿಗ ಸಮಾಜ ಹೆಚ್ಚು ಇದ್ದರೂ ಹಲವು ಸೌಲಭ್ಯಗಳಿಂದ ವಂಚಿತವಾಗಿರುವುದು ನೋವಿನ ಸಂಗತಿ ಎಂದರು. ಒಳಮೀಸಲಾತಿ ವಿಚಾರದಲ್ಲಿ ಮಾದಿಗ ಜನಾಂಗದ ಹಿರಿಯರಾದ ಕೆ.ಹೆಚ್. ಮುನಿಯಪ್ಪ ಹಾಗೂ ಹೆಚ್. ಆಂಜನೇಯ ಅವರ ನೇತೃತ್ವದಲ್ಲಿ ಇಡೀ ರಾಜ್ಯದಲ್ಲಿ ಭಾರಿ ಹೋರಾಟ ನಡೆದಿದ್ದು, ಇದರ ಫಲವಾಗಿ ಸಮುದಾಯಕ್ಕೆ ದೊಡ್ಡ ಲಾಭವಾಗಿದ್ದು ನ್ಯಾಯವೂ ದೊರೆತಿದೆ ಎಂದು ಅಭಿಪ್ರಾಯಪಟ್ಟರು.
ಹಳ್ಳಿಯಿಂದ ಬಂದ ಕೆ.ಜಿ. ಜಗದೀಶ್ ಅವರು ಹಂತ ಹಂತವಾಗಿ ವಿವಿಧ ಇಲಾಖೆಗಳಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ, ಉನ್ನತ ಹುದ್ದೆಯಾದ ಮುಖ್ಯ ಇಂಜಿನಿಯರ್ ಸ್ಥಾನವನ್ನು ಅಲಂಕರಿಸಿ ನಿವೃತ್ತಿಯಾಗಿದ್ದಾರೆ ಎಂದು ಅವರು ಹೇಳಿದರು. ಅವರ ಮುಂದಿನ ರಾಜಕೀಯ ಜೀವನ ಯಶಸ್ವಿಯಾಗಲಿ ಎಂದು ಹಾರೈಸಿದರು.
ಕರ್ನಾಟಕ ಪರೀಕ್ಷಾ ಮಂಡಳಿಯ ನಿವೃತ್ತ ಜಂಟಿ ನಿರ್ದೇಶಕ ಎಂ. ರೇವಣಸಿದ್ದಪ್ಪ ಮಾತನಾಡಿ, ಚಾರಿತ್ರಿಕ ಹಿನ್ನೆಲೆಯ ಈ ಜಿಲ್ಲೆಯಲ್ಲಿ ಕೆ.ಜಿ. ಜಗದೀಶ್ ಅವರು ನಿಜಕ್ಕೂ ಶ್ಲಾಘನೀಯ ಸೇವೆ ಸಲ್ಲಿಸಿದ್ದಾರೆ. ಜನಸಾಮಾನ್ಯರು ಹಾಗೂ ಸರ್ಕಾರಿ ನೌಕರರ ಮನಸ್ಸನ್ನೂ ಗೆದ್ದಿರುವ ಅವರು ಒಬ್ಬ ಜನನಾಯಕ ಎಂದು ಬಣ್ಣಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಮುಖ್ಯ ಇಂಜಿನಿಯರ್ ಕೆ.ಜಿ. ಜಗದೀಶ್, ನಾನು ಇದೇ ಜಿಲ್ಲೆಯಲ್ಲಿ ಹುಟ್ಟಿ ಬೆಳೆದವನು.
ಸುಮಾರು 25 ವರ್ಷಗಳ ಕಾಲ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಈ ಅವಧಿಯಲ್ಲಿ ಎಲ್ಲಾ ಜಾತಿ–ಧರ್ಮದ ನೌಕರರನ್ನು ಒಟ್ಟಿಗೆ ಕರೆದೊಯ್ದು ಸರ್ಕಾರಿ ನೌಕರರ ಸಂಘದಲ್ಲಿ ಗುರುತರವಾದ ಕೆಲಸಗಳನ್ನು ಮಾಡಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಜಿಲ್ಲಾ ಮಾದಿಗ ನೌಕರರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿವೃತ್ತ ಜಿಲ್ಲಾ ಅಧಿಕಾರಿ ಡಿ.ಟಿ. ಜಗನ್ನಾಥ್, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ನಾರಾಯಣಸ್ವಾಮಿ, ಸರ್ಕಾರಿ ನೌಕರರ ಸಂಘದ ಖಜಾಂಚಿ ಎ. ಮಲ್ಲಿಕಾರ್ಜುನ್, ಡಿವೈಎಸ್ಪಿ ಶಾಂತವೀರಯ್ಯ, ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿ ನಾಗರಾಜ್, ಮಾದಿಗ ನೌಕರರ ಸಾಂಸ್ಕೃತಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ತಿಪ್ಪೇಸ್ವಾಮಿ, ಖಜಾಂಚಿ ರುದ್ರಮುನಿ, ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾಧ್ಯಕ್ಷೆ ಬಿ.ಟಿ. ಲೋಲಾಕ್ಷಮ್ಮ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
Views: 757