ಕ್ರಿಕೆಟ್​, ಹಾಕಿ ಸೇರಿ 7 ಗೇಮ್​​ಗಳಿಗೆ ಕೊಕ್​! ಭಾರತಕ್ಕೆ ಶಾಕ್ ಕೊಟ್ಟ ಕಾಮನ್​ವೆಲ್ತ್​ ಗೇಮ್ಸ್​ ಫೆಡರೇಷನ್.

Commonwealth Games: ಭಾರತ ಕ್ರೀಡಾ (Indian Sports) ತಂಡಕ್ಕೆ ಅನಿರೀಕ್ಷಿತ ಆಘಾತ ಎದುರಾಗಿದೆ. 2026 ರ ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಿಂದ (Commonwealth Games) ಹಾಕಿ, ಕುಸ್ತಿ, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಕ್ರಿಕೆಟ್, ಸ್ಕ್ವಾಷ್, ಶೂಟಿಂಗ್, ನೆಟ್‌ಬಾಲ್ ಮತ್ತು ರೋಡ್ ರೇಸಿಂಗ್ ಕ್ರೀಡೆಗಳನ್ನ ತೆಗೆದುಹಾಕಲಾಗುವುದು ಎಂದು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್ ಘೋಷಿಸಿದೆ. ಈ ಮೇಲಿನ ಬಹುತೇಕ ಆಟಗಳಲ್ಲಿ ಭಾರತ ಹೆಚ್ಚಿನ ಪದಕ ಗೆಲ್ಲಲು ಸಮರ್ಥವಾಗಿತ್ತು. ಇದೀಗ ಕಾಮನ್​ವೆಲ್ತ್​ ಗೇಮ್ಸ್ ಫೆಡರೇಷನ್​ ನಿರ್ಧಾರದಿಂದ ಭಾರತಕ್ಕೆ ಬೇಸರವನ್ನುಂಟು ಮಾಡಿದೆ.

ಎರಡು ವರ್ಷಗಳ ಹಿಂದೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಕ್ರಿಕೆಟ್ ಸೇರಿ ಕೆಲವು  ಕ್ರೀಡೆಗಳನ್ನು ಸೇರಿಸಲಾಗಿತ್ತು. ಒಟ್ಟು 19 ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಸ್ಪರ್ಧಿಸಿದ್ದರು. ಆದರೆ ಈ ಬಾರಿ ವೆಚ್ಚ ತಗ್ಗಿಸುವ ಉದ್ದೇಶದಿಂದ ಕಾಮನ್ ವೆಲ್ತ್ ಗೇಮ್ಸ್ ಫೆಡರೇಷನ್ 9 ಕ್ರೀಡೆಗಳನ್ನು ತೊಲಗಿಸಲು ನಿರ್ಧರಿಸಿದೆ. ಈ ಬಾರಿ ಎಲ್ಲಾ 10 ಕ್ರೀಡೆಗಳಲ್ಲಿ ಕಾಮನ್ ವೆಲ್ತ್ ಸ್ಪರ್ಧೆಗಳು ನಡೆಯಲಿವೆ. ಕಾಮನ್ ವೆಲ್ತ್ ರಾಷ್ಟ್ರಗಳ ನಡುವಿನ ಒಲಿಂಪಿಕ್ಸ್ ನಂತೆ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕಾಮನ್ ವೆಲ್ತ್ ಕ್ರೀಡಾಕೂಟ ಈ ಬಾರಿ ಸ್ಕಾಟ್ಲೆಂಡ್ ನಲ್ಲಿ ಗ್ಲಾಸ್ಗೋದಲ್ಲಿ ನಡೆಯಲಿದೆ. ಮುಂದಿನ ವರ್ಷ ಜುಲೈ 23 ರಿಂದ ಆಗಸ್ಟ್ 2 ರವರೆಗೆ ಈ ಪಂದ್ಯಾವಳಿ ನಡೆಯಲಿದೆ.

58 ವರ್ಷಗಳ ನಂತರ ಬ್ಯಾಡ್ಮಿಂಟನ್​ಗೆ ನೋ ಚಾನ್ಸ್!

1966ರ ನಂತರ ಬ್ಯಾಡ್ಮಿಂಟನ್​ ಕಾಮನ್‌ವೆಲ್ತ್‌ ಕ್ರೀಡಾಕೂಟದ ಭಾಗವಾಗದೇ ಇರುವುದು ಇದೇ ಮೊದಲು. ಸ್ಕ್ವಾಷ್ ಮತ್ತು ಹಾಕಿ 1998 ರಿಂದ ಕಾಮನ್‌ವೆಲ್ತ್ ಗೇಮ್ಸ್‌ನ ಭಾಗವಾಗಿದೆ. ಆದರೆ 2002 ರಿಂದ ಪಂದ್ಯಾವಳಿಯ ಪ್ರತಿ ಆವೃತ್ತಿಯಲ್ಲಿ ಟೇಬಲ್ ಟೆನ್ನಿಸ್ ಕಾಣಿಸಿಕೊಂಡಿತ್ತು. ಈ ಗೇಮ್ಸ್​ನಲ್ಲಿ ರಾಕೆಟ್ ಬಳಸಿ ಆಡುವ ಯಾವುದೇ ಗೇಮ್ಸ್ ಇರುವುದಿಲ್ಲ.

ಯಾವ್ಯಾವ ಆಟಗಳಿಗೆ ಅವಕಾಶ

ಈವೆಂಟ್‌ನಲ್ಲಿ ಅಥ್ಲೆಟಿಕ್ಸ್ ಮತ್ತು ಪ್ಯಾರಾ-ಅಥ್ಲೆಟಿಕ್ಸ್, ಬಾಕ್ಸಿಂಗ್, ಬೌಲ್‌ಗಳು ಮತ್ತು ಪ್ಯಾರಾ-ಬೌಲ್‌ಗಳು, ಈಜು ಮತ್ತು ಪ್ಯಾರಾ-ಈಜು, ಕಲಾತ್ಮಕ ಜಿಮ್ನಾಸ್ಟಿಕ್ಸ್, ಟ್ರ್ಯಾಕ್ ಸೈಕ್ಲಿಂಗ್ ಮತ್ತು ಪ್ಯಾರಾ-ಟ್ರ್ಯಾಕ್ ಸೈಕ್ಲಿಂಗ್, ನೆಟ್‌ಬಾಲ್, ವೇಟ್‌ಲಿಫ್ಟಿಂಗ್ ಮತ್ತು ಪ್ಯಾರಾ-ಪವರ್‌ಲಿಫ್ಟಿಂಗ್ ಸೇರಿವೆ ಎಂದು 2026 ರ ಕಾಮನ್‌ವೆಲ್ತ್ ಕ್ರೀಡಾಕೂಟದ ಸಂಘಟಕರು ಬಹಿರಂಗಪಡಿಸಿದ್ದಾರೆ. ಜೂಡೋ, ಮತ್ತು 3×3 ಬ್ಯಾಸ್ಕೆಟ್‌ಬಾಲ್ ಮತ್ತು 3×3 ಗಾಲಿಕುರ್ಚಿ ಬ್ಯಾಸ್ಕೆಟ್‌ಬಾಲ್ ಸ್ಪರ್ಧೆಗಳು ನಡೆಯಲಿವೆ. ಸುಮಾರು 74 ಕಾಮನ್‌ವೆಲ್ತ್ ರಾಷ್ಟ್ರಗಳ ಸುಮಾರು 3000 ಅಥ್ಲೀಟ್‌ಗಳು ಗ್ಲಾಸ್ಗೋ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಭಾರತದ ಪದಕದ ಸಂಖ್ಯೆಗೆ ಹೊಡೆತ

ಈ ನಿರ್ಧಾರ ಭಾರತಕ್ಕೆ ಅನಿರೀಕ್ಷಿತ ಆಘಾತ ತಂದಿದೆ. ಏಕೆಂದರೆ ಭಾರತಕ್ಕೆ ಪದಕಗಳನ್ನು ತಂದುಕೊಡುವ ಕ್ರೀಡೆಗಳು ಹಾಕಿ, ಬ್ಯಾಡ್ಮಿಂಟನ್, ಕುಸ್ತಿ, ಕ್ರಿಕೆಟ್ ಮತ್ತು ಶೂಟಿಂಗ್ ಈಗ ಆ ಕ್ರೀಡೆಗಳನ್ನು ತೆಗೆದುಹಾಕುವುದರಿಂದ ಭಾರತದ ಪದಕಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆಯಿದೆ. 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಒಟ್ಟು 61 ಪದಕಗಳೊಂದಿಗೆ ನಾಲ್ಕನೇ ಸ್ಥಾನ ಗಳಿಸಿತ್ತು. ಇದರಲ್ಲಿ 16 ಬೆಳ್ಳಿ ಹಾಗೂ 23 ಕಂಚಿನೊಂದಿಗೆ 22 ಚಿನ್ನ ಸೇರಿದ್ದವು. ಕಳೆದ ಆವೃತ್ತಿಯಲ್ಲಿ ಕುಸ್ತಿಯಲ್ಲಿ 12 ಮತ್ತು ವೇಟ್‌ಲಿಫ್ಟಿಂಗ್‌ನಲ್ಲಿ 10 ಪದಕಗಳು ಅತ್ಯಧಿಕ ಸಂಖ್ಯೆಯ ಪದಕಗಳಾಗಿವೆ.

ಆಯೋಜನೆ ಹಕ್ಕು ಬಿಟ್ಟುಕೊಟ್ಟಿದ್ದ ವಿಕ್ಟೋರಿಯಾ

ಮೂಲತಃ ಕಾಮನ್‌ವೆಲ್ತ್ ಗೇಮ್ಸ್ 2026 ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ನಡೆಯಬೇಕಿತ್ತು. ಆದರೆ ವೆಚ್ಚಗಳು ಹೆಚ್ಚಾದಂತೆ ವಿಕ್ಟೋರಿಯಾ ಹೋಸ್ಟಿಂಗ್ ಹಕ್ಕುಗಳನ್ನು ಬಿಟ್ಟುಕೊಟ್ಟಿತು. ಅವರಿಗೆ ಶಿಕ್ಷಣ ಮತ್ತು ಔಷಧ ಮುಖ್ಯವಾಗಿದ್ದು, ಕ್ರೀಡೆಗೆ ಇಷ್ಟೊಂದು ಖರ್ಚು ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಅದರೊಂದಿಗೆ ಸ್ಕಾಟ್ಲೆಂಡ್ ಪಂದ್ಯಾವಳಿಯನ್ನು ಆಯೋಜಿಸಲು ಮುಂದೆ ಬಂದಿತು. ಇದೀಗ ವೆಚ್ಚವನ್ನು ಕಡಿತಗೊಳಿಸಲು 9 ಕ್ರೀಡೆಗಳನ್ನು ಕಡಿತಗೊಳಿಸಲಾಗಿದೆ.

Source : https://kannada.news18.com/news/sports/cricket-hockey-among-9-sports-dropped-from-commonwealth-games-2026-mbr-1899219.html

Leave a Reply

Your email address will not be published. Required fields are marked *