ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 9581

ಚಿತ್ರದುರ್ಗ ಆ. ೨೦ : ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ವ್ಯಕ್ತಿಗಳ ವಿರುದ್ದ ಹಾಗೂ ಪೂರ್ವಯೋಜಿತ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರುಗಳು ವಿರುದ್ಧ ಇಂದು ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಯ ಪೊಲೀಸ್ ಮಹಾ ನಿರ್ದೇಶಕರಿಗೆ ಭಾರತೀಯ ಜನತಾ ಪಾರ್ಟಿ-ಕರ್ನಾಟಕ ದೂರು ನೀಡಲಾಯಿತು.ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ಖಾಸಗಿ ವ್ಯಕ್ತಿಗಳು ಮಾಡಿರುವ ಆರೋಪಗಳ ಬಗ್ಗೆ ತನಿಖೆಗೆ ಅನುಮತಿ ನೀಡಿದ ಕೂಡಲೇ ರಾಜ್ಯಪಾಲರ ವಿರುದ್ಧ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರುಗಳು ಹಾಗೂ ಬೆಂಬಲಿಗರು ಅತ್ಯಂತ ಅವಹೇಳನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದರಲ್ಲೂ ಅವರನ್ನು ವೈಯುಕ್ತಿಕವಾಗಿ ತೇಜೋವಧೆ ಮಾಡುತ್ತಿರುವುದು ಅತ್ಯಂತ ಖಂಡನೀಯ.
ಮೊದಲಿನಿಂದಲೂ ಸಾಂವಿಧಾನಿಕ ಹುದ್ದೆಗಳಲ್ಲಿರುವವರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಂಡ ಕಾಂಗ್ರೆಸ್ ನಾಯಕರು ಈಗಲೂ ಅದೇ ಚಾಳಿಯನ್ನು ಮುಂದುವರೆಸಿದ್ದಾರೆ. ಅದರಲ್ಲೂ ರಾಜ್ಯದಲ್ಲಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆಗೆ ಕಾರಣರಾದ ಹಾಗೂ ಮೂಡಾದ ನಿವೇಶನಗಳನ್ನು ತಮ್ಮ ಪತ್ನಿಗೆ ಅಕ್ರಮವಾಗಿ ವರ್ಗಾಯಿಸಿಕೊಳ್ಳುವ ಮೂಲಕ ನಾಡಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನತೆಗೆ ಅನ್ಯಾಯ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಕಾಂಗ್ರೆಸ್ ನಾಯಕರು ಈಗ ಶೋಷಿತ ವರ್ಗಕ್ಕೆ ಸೇರಿದ ರಾಜ್ಯಪಾಲರ ಮೇಲೆ ಮುಗಿಬಿದ್ದಿರುವುದು ಕಾಂಗ್ರೆಸ್ ಪಕ್ಷದ ಶೋಷಿತ ಸಮುದಾಯದ ವಿರೋಧಿ ಪ್ರವೃತ್ತಿಯ ದ್ಯೋತಕವಾಗಿದೆ.
ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ಹುದ್ದೆಯ ಘನತೆಯನ್ನು ಅರಿಯದ ಕಾಂಗ್ರೆಸ್ ನಾಯಕರುಗಳು ಅವರ ವಿರುದ್ಧ ಅವಹೇಳನಕಾರಿಯಾಗಿ ಟೀಕೆಗಳನ್ನು ಮಾಡುತ್ತಿದ್ದಾರೆ. ಹಾದಿ ಬೀದಿಯಲ್ಲಿ ಅವರ ಪ್ರತಿಕೃತಿಯನ್ನು ಸುಡುವಂತಹ ಹೀನ ಕೃತ್ಯಕ್ಕೆ ಇಳಿದಿದ್ದಾರೆ. ಮುಖ್ಯಮಂತ್ರಿಗಳ ಮೇಲೆ ಬಂದ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸುವುದು ರಾಜ್ಯಪಾಲರಿಗೆ ಸಂವಿಧಾನ ನೀಡಿರುವ ಅಧಿಕಾರ. ಅತ್ಯಂತ ವಿವೇಚನಾಯುಕ್ತವಾಗಿ ಕಾನೂನು ತಜ್ಞರೊಡನೆ ಸಮಾಲೋಚಿಸಿ, ಪ್ರಕರಣದ ಸೂಕ್ಷ್ಮಾತಿ ಸೂಕ್ಷ್ಮಗಳನ್ನು ಪರಾಮರ್ಶಿಸಿ ತನಿಖೆಗೆ ಆದೇಶ ನೀಡಿರುವ ರಾಜ್ಯಪಾಲರ ನಡೆಯನ್ನು ಖಂಡಿಸುವುದು, ಅವರ ಪ್ರತಿಕೃತಿಯನ್ನು ಸುಡುವುದು ಕಾಂಗ್ರೆಸ್ ನಾಯಕರು ಸಂವಿಧಾನಕ್ಕೆ ಮಾಡುತ್ತಿರುವ ಅಪಮಾನ. ಇಂತಹ ಕೃತ್ಯಗಳನ್ನು ಪೋಲೀಸರ ಸಮ್ಮುಖದಲ್ಲಿಯೇ ಮಾಡುತ್ತಿರುವ ಕಾಂಗ್ರೆಸ್ ನಾಯಕರುಗಳ ಮೇಲೆ ಕ್ರಮಕೈಗೊಳ್ಳದೆ ಪೋಲೀಸ್ ಇಲಾಖೆ ನಿರ್ಲಕ್ಷ್ಯ ತಳೆದಿದೆ.
ಇದಲ್ಲದೆ ಒಬ್ಬ ಪರಿಶಿಷ್ಟ ಜಾತಿಗೆ ಸೇರಿದ ರಾಜ್ಯಪಾಲರ ಬಗ್ಗೆ ಸಾರ್ವಜನಿಕವಾಗಿ ಅವಹೇಳನಕಾರಿ ಹೇಳಿಕೆಗಳನ್ನುನೀಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಜಾತಿ ನಿಂದನೆ ಕೇಸುಗಳನ್ನು ದಾಖಲಿಸಬೇಕಾಗಿದೆ. ಇಂತಹ ಹೇಳಿಕೆಗಳುಸಂವಿಧಾನಕ್ಕೆ ಮತ್ತು ಪರಿಶಿಷ್ಟ ಜನಾಂಗಕ್ಕೆ ಮಾಡಿದ ಅವಮಾನ. ಅಲ್ಲದೆ ಈ ತೆರನಾದ ಹೇಳಿಕೆಗಳು ಅತ್ಯಂತ ಸೂಕ್ಷ್ಮದ್ದಾಗಿದ್ದು ಸಮಾಜವನ್ನು ಪ್ರಚೋದಿಸುವಂತಹ ಹೇಳಿಕೆಗಳಾಗಿದೆ. ಈ ರೀತಿಯ ಸಾಂವಿಧಾನಿಕ ಹುದ್ದೆಯಲ್ಲಿರು ವ್ಯಕ್ತಿಯ ವಿರುದ್ಧದಪ್ರತಿಭಟನೆ ಹಾಗೂ ಅವಹೇಳನಾಕಾರಿ ಹೇಳಿಕೆಗಳು ನಡೆಯುತ್ತಿದ್ದರೂ, ಕಾರಣರಾದ ವ್ಯಕ್ತಿಗಳ ವಿರುದ್ಧ ಒಂದೂ ಪ್ರಕರಣವೂ ದಾಖಲಾಗದಿರುವುದು ಪ್ರಕರಣದ ಗಂಭೀರತೆಯನ್ನು ಪೋಲೀಸ್
ಇಲಾಖೆ ಅರಿತಿಲ್ಲ ಎಂಬ ಅನುಮಾನಗಳು ಸಾರ್ವಜನಿಕವಾಗಿ ಮೂಡಲು ಕಾರಣವಾಗುತ್ತದೆ. ಅಧಿಕಾರಕ್ಕಾಗಿ ಪರಿಶಿಷ್ಟ ಜಾತಿ ಪಂಗಡದ ಹೆಸರನ್ನು ಬಳಸಿಕೊಳ್ಳುವ, ಅಧಿಕಾರ ಬಂದ ಮೇಲೆ ಆ ಜನಾಂಗಕ್ಕೆ ಸೇರಬೇಕಾದ ಹಣವನ್ನು ದುರ್ಬಳಕೆ ಮಾಡಿಕೊಳ್ಳುವ ಕಾಂಗ್ರೆಸ್ಮ ನಾಯಕರು, ಈಗ ನಿಯಮಾವಳಿಗಳ ಪ್ರಕಾರವೇ ಮುಖ್ಯಮಂತ್ರಿಗಳ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡಿದ ಪರಿಶಿಷ್ಟ ಜಾತಿಗೆ ಸೇರಿದ ರಾಜ್ಯಪಾಲರನ್ನು ವೈಯುಕ್ತಿವಾಗಿ ನಿಂದನೆ ಮಾಡುವಂತಹ ಕೀಳು ಪ್ರವೃತ್ತಿಗೆ ಮಟ್ಟಕ್ಕೆ ಇಳಿದಿರುವುದು ಅತ್ಯಂತ ದುದೃಷ್ಟಕರ. ಅದರಲ್ಲೂ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿರುವ, ನಿಯಮಾವಳಿಗಳ ಪ್ರಕಾರವೇ ತನಗಿರುವ ಅಧಿಕಾರವನ್ನು ಉಪಯೋಗಿಸಿಕೊಂಡು ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರನ್ನು ಕಾಂಗ್ರೆಸ್ ನಾಯಕರು ಹಾಗೂ ಹಿಂಬಾಲಕರು ನಿಂದಿಸುತ್ತಿರುವುದು, ರಾಜ್ಯಪಾಲರು ಒಬ್ಬ ಪರಿಶಿಷ್ಟ ಜಾತಿಗೆ ಸೇರಿದವರು ಎನ್ನುವ ಕಾರಣದಿಂದಲೇ ಎನ್ನುವ ಅನುಮಾನಗಳು ಮೂಡುತ್ತಿವೆ. ರಾಜ್ಯಪಾಲರು ಸಾಂವಿಧಾನಿಕ ಅಧಿಕಾರಿಯಾಗಿದ್ದು, ಸಾರ್ವಜನಿಕರ ವೈಯಕ್ತಿಕ ದಾಳಿಯನ್ನು ಎದುರಿಸಲು ಸಾಧ್ಯವಿಲ್ಲ ಹಾಗೂ ವಾಕ್ ಸ್ವಾತಂತ್ರ್ಯದ ನೆಪದಲ್ಲಿ ವ್ಯಕ್ತಿಯ ಪ್ರತಿಷ್ಠೆಗೆ ಧಕ್ಕೆ ತರುವಂತಹ ಮಾನ ಹಾನಿಕರ ಹೇಳಿಕೆಗಳನ್ನು ನೀಡುವಂತಿಲ್ಲ ಎಂದು ಕಲ್ಕತ್ತಾ ಉಚ್ಚ ನ್ಯಾಯಾಲಯ ಆದೇಶಿಸಿದೆ.
ಹೀಗಿದ್ದರೂ, ಬಾಂಗ್ಲಾ ದೇಶದ ಪ್ರಧಾನಮಂತ್ರಿ ಶ್ರೀಮತಿ ಶೇಖ್ ಹಸೀನಾಗೆ ಬಂದ ಗತಿ ತಮಗೂ ಬರುತ್ತದೆ, ನಾವು ಕಾಂಗ್ರೆಸ್ಸಿಗರು ರಾಜ್ ಭವನಕ್ಕೆ ನುಗ್ಗಿ ತಮ್ಮನ್ನು ಓಡಿಸುವ ಕೆಲಸವನ್ನು ಮಾಡುತ್ತೇವೆ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯರಾದ ಐವಾನ್ ಡಿಸೋಜಾ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ರಾಜ್ಯಪಾಲರೇ ಕಾರಣ ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವರಾದ ಜಮೀರ್ ಅಹಮದ್ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಸಚಿವರಾದ ಕೃಷ್ಣಭೈರೇಗೌಡ, ದಿನೇಶ್ ಗುಂಡೂರಾವ್, ಶಾಸಕರಾದ ನಂಜೇಗೌಡ ಹಾಗೂ ಇನ್ನು ಅನೇಕ ಕಾಂಗ್ರೆಸ್ ಮುಖಂಡರ ವಿರುದ್ಧ ಜಾತಿ ನಿಂದನೆ ಹಾಗೂ ಗೂಂಡಾ ಕಾಯ್ದೆಯಡಿ ತಕ್ಷಣ ಬಂಧಿಸಿ, ಕಾನೂನು ಕ್ರಮ ಕೈಗೊಂಡು ರಾಜ್ಯಪಾಲರ ವಿರುದ್ಧ ವೈಯುಕ್ತಿಕ ನಿಂದನಾ ಹೇಳಿಕೆಗಳನ್ನು ನೀಡುತ್ತಿರುವ ಹಾಗೂ ಪ್ರತಿಭಟನೆಗಳ ಮೂಲಕ ಸಾಂವಿಧಾನಿಕ ಹುದ್ದೆಯಾದ ರಾಜ್ಯಪಾಲ ಹುದ್ದೆಗೆ ಅಗೌರವ ತೋರಿಸುತ್ತಿರುವ ಕಾಂಗ್ರೆಸ್ ನಾಯಕರುಗಳನ್ನು ಪ್ರತೀ ಜಿಲ್ಲೆಯಲ್ಲಿ ಗುರುತಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಈ ರೀತಿಯ ಅವಹೇಳನಾಕಾರಿ ಮತ್ತು ಪೂರ್ವಯೋಜಿತ ಪ್ರತಿಭಟನೆಗಳು ಮುಂದೆ ನಡೆಯದಂತೆ ಕ್ರಮ ಕೈಗೊಳ್ಳಬೇಕೆಂದೂ, ಇಲ್ಲದಿದ್ದಲ್ಲಿ ಬಿಜೆಪಿ ಉಗ್ರ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ. ಇದಕ್ಕೆ ಪೋಲೀಸ್ ಇಲಾಖೆಯೇ ಹೊಣೆ ಎಂಬ ಸಂದೇಶವನ್ನು ಈ ಮೂಲಕ ನೀಡುತ್ತಿದ್ದೇವೆ.
ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಚಿತ್ರದುರ್ಗದ ಸಂಸದರಾದ ಗೋವಿಂದ ಕಾರಜೋಳ, ವಿಧಾನಪರಿಷತ್ ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರು ಮತ್ತು ಮಾಜಿ ಸಚಿವರಾದ ಎನ್. ಮಹೇಶ್, ಮಾಜಿ ಸಂಸದರಾದ ಡಾ. ಉಮೇಶ್ ಜಾಧವ್, ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರು ಮತ್ತು ಶಾಸಕರಾದ ಸಿಮೆಂಟ್ ಮಂಜುನಾಥ್, ಮಾಜಿ ಸಂಸದರಾದ ಎಸ್. ಮುನಿಸ್ವಾಮಿ, ಎಸ್‌ಟಿ ಮೋರ್ಚಾ ರಾಜ್ಯ ಅಧ್ಯಕ್ಷರಾದ ಬಂಗಾರು ಹನುಮಂತು ಹಾಗೂ ಮತ್ತಿತರರು ಉಪಸ್ಥಿತರಿದ್ದರು.