
2023ರ ಟಿ20 ವಿಶ್ವಕಪ್‌ನಲ್ಲಿ (T20 World Cup 2023) ಭಾರತ ಮಹಿಳಾ ತಂಡ ಮತ್ತೊಮ್ಮೆ ಎಡವಿದೆ. ಪ್ರಶಸ್ತಿಯ ಸ್ಪರ್ಧಿ ಎಂದೇ ಪರಿಗಣಿತವಾಗಿದ್ದ ಟೀಂ ಇಂಡಿಯಾದ (Team India) ಪಯಣ ಸೆಮಿಫೈನಲ್ನಲ್ಲಿಯೇ ಅಂತ್ಯಗೊಂಡಿದೆ. ಈ ಸೋಲಿನ ನಂತರ ಇಡೀ ತಂಡವೇ ಮೈದಾನದಲ್ಲಿ ಕಣ್ಣೀರು ಹಾಕಿತ್ತು. ಅಲ್ಲದೆ ಇದೊಂದು ಸೋಲು ಕೋಟ್ಯಾಂತರ ಅಭಿಮಾನಿಗಳ ಕಣ್ಣು ಜಿನುಗುವಂತೆ ಮಾಡಿತ್ತು. ಇತ್ತ ತೀರ್ವ ಜ್ವರದ ಹೊರತಾಗಿಯೂ, ಅಖಾಡಕ್ಕಿಳಿದಿದ್ದ ನಾಯಕಿ ಹರ್ಮನ್‌ಪ್ರೀತ್ ಕೌರ್ಗೆ (Harmanpreet Kaur ) ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲವಲ್ಲ ಎಂಬ ಕೊರಗಿದ್ದರೆ, ಅತ್ತ ಕೌರ್ ಮಾಡಿದ ಎಡವಟ್ಟಿನಿಂದಲೇ ತಂಡ ಸೋಲಬೇಕಾಯಿತು ಎಂಬುದು ಟೀಂ ಇಂಡಿಯಾ ಅಭಿಮಾನಿಗಳ ಅಭಿಪ್ರಾಯವಾಗಿದೆ. ಹಾಗೆಯೇ ಈ ಪಂದ್ಯದ ಸೋಲಿನೊಂದಿಗೆ ಐಸಿಸಿ (ICC) ಈವೆಂಟ್ನ ಪ್ರಮುಖ ಪಂದ್ಯಗಳಲ್ಲಿ ಸೋಲುವ ಟೀಂ ಇಂಡಿಯಾದ ಸರಣಿಯೂ ಕೂಡ ಮುಂದುವರೆದಿದೆ. ಹೀಗಾಗಿ ತಂಡದಲ್ಲಿ ಬದಲಾವಣೆ ತರಲು ಬಿಸಿಸಿಐ ಮನಸ್ಸು ಮಾಡಿದ್ದರೆ, ಮೊದಲನೆಯದಾಗಿ ನಾಯಕಿಯ ತಲೆದಂಡವಾಗುವುದಂತೂ ಖಚಿತ.
ಆಫ್ರಿಕಾದಿಂದ ಬರಿಗೈಯಲ್ಲಿ ಭಾರತಕ್ಕೆ ಮರಳುವ ಭಾರತ ಮಹಿಳಾ ತಂಡಲ್ಲಿ ಬದಲಾವಣೆಯ ಗಾಳಿ ಬೀಸುವ ಸಾಧ್ಯತೆಗಳಿವೆ. ಟೀಂ ಇಂಡಿಯಾ ತುಂಬಾ ಹತ್ತಿರ ಬಂದು ಸೋತಿರಬಹುದು, ಆದರೆ ಇದು ಮಂಡಳಿಗೆ ಕೇವಲ ಸೋಲು ಅಷ್ಟೆ. ನಾಕೌಟ್‌ನಲ್ಲಿ ಭಾರತದ ಸೋಲಿನ ಸರಣಿಯು ಮುರಿಯುತ್ತಿಲ್ಲ. ಹೀಗಾಗಿ ಈ ಸರಣಿ ಸೋಲಿನ ಫಲಿತಾಂಶಗಳನ್ನು ಬದಲಾಯಿಸಲು ಮಂಡಳಿಯು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸೂಚನೆಗಳಿವೆ.
T20 World Cup 2023:ಕೇವಲ 14 ಎಸೆತಗಳಲ್ಲಿ 56 ರನ್! ಟಿ20ಯಲ್ಲಿ ಪಾಕ್ ಪರ ಸಿಡಿಯಿತು ಮೊದಲ ಶತಕ
ಹರ್ಮನ್‌ಪ್ರೀತ್ ಕೆಟ್ಟ ದಾಖಲೆ
ಸದ್ಯ ಟೀಂ ಇಂಡಿಯಾದ ಏಕದಿನ ಮತ್ತು ಟಿ20 ತಂಡದ ನಾಯಕತ್ವವನ್ನು ಹರ್ಮನ್‌ಪ್ರೀತ್ ಕೌರ್ ವಹಿಸಿಕೊಂಡಿದ್ದಾರೆ. 2018 ರಲ್ಲಿ ಟಿ20 ನಾಯಕತ್ವ ವಹಿಸಿಕೊಂಡ ಕೌರ್ಗೆ, ಕಳೆದ ವರ್ಷ ಮಿಥಾಲಿ ರಾಜ್ ನಿವೃತ್ತಿಯ ನಂತರ ಏಕದಿನ ತಂಡದ ನಾಯಕತ್ವವನ್ನು ವಹಿಸಲಾಗಿದೆ. ನಾವು 2018 ರಿಂದ ನೋಡಿದರೆ, ಅವರ ನಾಯಕತ್ವದಲ್ಲಿ ತಂಡವು ನಾಲ್ಕು ಪ್ರಮುಖ ನಾಕೌಟ್ ಪಂದ್ಯಗಳನ್ನು ಸೋತಿದೆ. 2018ರಲ್ಲಿ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋತಿತ್ತು. ಬಳಿಕ 2020 ರಲ್ಲಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಈಗ ಕಳೆದ ಗುರುವಾರ ಮತ್ತೊಮ್ಮೆ ಅದೇ ರೀತಿಯ ಘಟನೆ ನಡೆದಿದೆ. ಏತನ್ಮಧ್ಯೆ, 2022 ರ ಕಾಮನ್‌ವೆಲ್ತ್ ಗೇಮ್ಸ್‌ನ ಫೈನಲ್‌ನಲ್ಲಿಯೂ ಹರ್ಮನ್‌ಪ್ರೀತ್ ಕೌರ್ ತಂಡಕ್ಕೆ ಚಿನ್ನದ ಪದಕವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.
ನಾಯಕತ್ವದಿಂದ ಹರ್ಮನ್ ಔಟ್?
ಇದೆಲ್ಲ ಘಟನೆಗಳನ್ನು ಗಣನೆಗೆ ತೆಗೆದುಕೊಂಡು ಒಂದು ವೇಳೆ ಬಿಸಿಸಿಐ ಬದಲಾವಣೆಗೆ ಮುಂದಾದರೆ, ಹರ್ಮನ್‌ಪ್ರೀತ್ ಕೌರ್ ನಾಯಕತ್ವ ಹೋಗುವುದು ಖಚಿತ. ಏಕೆಂದರೆ ಇನ್ನು ಕೇವಲ 18 ತಿಂಗಳ ನಂತರ ಮತ್ತೆ ಟಿ20 ವಿಶ್ವಕಪ್ ಆಡಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನೂತನ ನಾಯಕಿಗೆ ಕಮಾಂಡ್ ನೀಡಲು ಇದು ಸೂಕ್ತ ಸಮಯ. ಹರ್ಮನ್‌ಪ್ರೀತ್ ಕೌರ್ ಬದಲಿಗೆ ಸ್ಮೃತಿ ಮಂಧಾನಾ ಈ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆಗಳಿವೆ. ಸ್ಮೃತಿ ಈಗಾಗಲೇ ಮಹಿಳೆಯರ ಟಿ20 ಚಾಲೆಂಜ್‌ನ ನಾಯಕತ್ವ ವಹಿಸಿದ್ದಾರೆ ಮತ್ತು ಈಗ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ. ಅಲ್ಲದೆ ತಂಡದಲ್ಲಿ ಹೊಸ ನಾಯಕಿಯ ಆಗಮನದೊಂದಿಗೆ ಬಹಳಷ್ಟು ಬದಲಾವಣೆಗಳು ಮತ್ತು ಫಲಿತಾಂಶಗಳಲ್ಲಿ ಅದೇ ಬದಲಾವಣೆಯನ್ನು ನೋಡಲು ಮಂಡಳಿಯು ಬಯಸುತ್ತದೆ.
ತಂಡದಿಂದ ಹರ್ಮನ್ ಔಟ್?
ನಾಯಕತ್ವದ ಜೊತೆಗೆ ಹರ್ಮನ್‌ಪ್ರೀತ್ ಕೌರ್ ಟಿ20 ತಂಡದಲ್ಲಿ ಆಡುವ ಬಗ್ಗೆಯೂ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಟಿ20 ವಿಶ್ವಕಪ್ 2023 ರ ಸೆಮಿ ಫೈನಲ್‌ನಲ್ಲಿ ಹರ್ಮ್‌ಪ್ರೀತ್ ಕೌರ್ ಅರ್ಧಶತಕ ಗಳಿಸಿದರಾದರೂ ಇದನ್ನು ಹೊರತುಪಡಿಸಿ, ಇಡೀ ಪಂದ್ಯಾವಳಿಯಲ್ಲಿ ಅವರು ವಿಶೇಷವಾದದ್ದನ್ನು ಮಾಡಲು ಸಾಧ್ಯವಾಗಲಿಲ್ಲ. ಅವರು ವೆಸ್ಟ್ ಇಂಡೀಸ್ ವಿರುದ್ಧ ಕೇವಲ 33 ರನ್ ಗಳಿಸಿದ್ದರೆ, ಪಾಕಿಸ್ತಾನದ ವಿರುದ್ಧ ಕೇವಲ 16, ಇಂಗ್ಲೆಂಡ್ ವಿರುದ್ಧ 4 ಮತ್ತು ಐರ್ಲೆಂಡ್ ವಿರುದ್ಧ ಕೇವಲ 13 ರನ್ ಮಾತ್ರ ಗಳಿಸಿದ್ದರು. ಆದರೆ, ಹರ್ಮನ್‌ಪ್ರೀತ್ ಬದಲಿಗೆ ತಂಡದಲ್ಲಿ ಅವರ ಸ್ಥಾನವನ್ನು ತುಂಬುವ ಬೇರೆ ಆಟಗಾರ್ತಿ ಸಧ್ಯಕ್ಕೆ ಯಾರು ಇಲ್ಲ. ಲೀಗ್ ಪಂದ್ಯಗಳಲ್ಲಿ ಕೈಕೊಟ್ಟರು ಹರ್ಮನ್, ಪ್ರಮುಖ ಪಂದ್ಯಗಳಲ್ಲಿ ಸಾಕಷ್ಟು ಬಾರಿ ನೆರವಾಗಿದ್ದಾರೆ. ಅಲ್ಲದೆ ಕೌರ್ ಆಲ್‌ರೌಂಡರ್ ಆಗಿರುವುದರಿಂದ ತಂಡಕ್ಕೆ ಅವರ ಬದಲಿ ಆಟಗಾರ್ತಿಯನ್ನು ಹುಡುಕುವುದು ಸುಲಭವಲ್ಲ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ