(ಆ.16): ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಮತ್ತು ಸಹ ಆರೋಪಿಗಳನ್ನು ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸಲು ಜೈಲು ಅಧಿಕಾರಿಗಳು ಮುಂದಾಗಿದ್ದಾರೆ. ಭದ್ರತೆ ಮತ್ತು ಆಡಳಿತಾತ್ಮಕ ಕಾರಣಗಳಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಕುರಿತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಜೈಲು ಅಧಿಕಾರಿಗಳು ಆರೋಪಿಗಳನ್ನು ಬೇರೆ ಜೈಲುಗಳಿಗೆ ವರ್ಗಾಯಿಸುವಂತೆ ಕೋರಿ 64ನೇ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯವು ಜೈಲು ಅಧಿಕಾರಿಗಳಿಂದ ನೇರವಾಗಿ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದೆ. ಬದಲಾಗಿ, ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (SPP) ಮೂಲಕವೇ ಅರ್ಜಿಯನ್ನು ಸಲ್ಲಿಸುವಂತೆ ಸೂಚಿಸಿದೆ. ನ್ಯಾಯಾಲಯದ ಈ ಸೂಚನೆಯ ಮೇರೆಗೆ, ಜೈಲು ಸೂಪರಿಂಟೆಂಡೆಂಟ್ ಅವರು ಎಸ್ಪಿಪಿ ಅವರನ್ನು ಭೇಟಿ ಮಾಡಿ, ಇಂದು ಮಧ್ಯಾಹ್ನ ಅಥವಾ ಸೋಮವಾರದೊಳಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಭದ್ರತಾ ಕಾರಣಗಳೇನು?: ಆರೋಪಿಗಳ ರಾಜಾತಿಥ್ಯ ಮತ್ತು ಜೈಲು ಅಧಿಕಾರಿಗಳ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ಬಾರಿಯ ರಾಜಾತಿಥ್ಯ ಪ್ರಕರಣವನ್ನು ಉಲ್ಲೇಖಿಸಿ, ಭದ್ರತಾ ಹಿತದೃಷ್ಟಿಯಿಂದ ಆರೋಪಿಗಳ ಸ್ಥಳಾಂತರ ಅತ್ಯಗತ್ಯ ಎಂದು ಮನವಿ ಮಾಡಲಾಗಿದೆ. ದರ್ಶನ್ ಅವರ ಜಾಮೀನು ರದ್ದು ಆದೇಶದ ಸಮಯದಲ್ಲಿ ಸುಪ್ರೀಂ ಕೋರ್ಟ್ ಜೈಲು ಅಧಿಕಾರಿಗಳ ಕಾರ್ಯನಿರ್ವಹಣೆಯನ್ನು ಕಟುವಾಗಿ ಟೀಕಿಸಿತ್ತು. ನ್ಯಾಯಾಲಯದ ಈ ಖಂಡನೆಯಿಂದಾಗಿ, ಜೈಲು ಅಧಿಕಾರಿಗಳು ಯಾವುದೇ ಹೆಚ್ಚಿನ ವಿವಾದಗಳಿಗೆ ಅವಕಾಶ ನೀಡದಂತೆ ಆರೋಪಿಗಳನ್ನು ಬೇರೆಡೆಗೆ ವರ್ಗಾಯಿಸಲು ನಿರ್ಧರಿಸಿದ್ದಾರೆ.
ಈ ಸ್ಥಳಾಂತರದ ನಿರ್ಧಾರವು ಪ್ರಭಾವಿ ವ್ಯಕ್ತಿಗಳು ಬಂಧಿತರಾದಾಗ ಜೈಲುಗಳಲ್ಲಿ ಎದುರಾಗುವ ಭದ್ರತಾ ಸವಾಲುಗಳನ್ನು ಎದುರಿಸುವಲ್ಲಿ ಹೊಸ ದಿಕ್ಕನ್ನು ಸೂಚಿಸುತ್ತದೆ. ನ್ಯಾಯಾಲಯದ ಅಂತಿಮ ತೀರ್ಪು ಬಂದ ನಂತರವೇ ಈ ಸ್ಥಳಾಂತರ ಪ್ರಕ್ರಿಯೆ ನಡೆಯಲಿದೆ.
ಯಾರನ್ನು ಎಲ್ಲಿಗೆ ಶಿಫ್ಟ್ ಮಾಡಲಾಗುತ್ತದೆ?
- ದರ್ಶನ್: ಬಳ್ಳಾರಿ ಜೈಲು
- ಜಗದೀಶ್, ಲಕ್ಷ್ಮಣ್: ಶಿವಮೊಗ್ಗ ಜೈಲು
- ನಾಗರಾಜ್: ಗುಲ್ಬರ್ಗಾ ಜೈಲು
- ಪ್ರದೋಷ್: ಬೆಳಗಾವಿ ಜೈಲು
- ಪವಿತ್ರಾ ಗೌಡ, ಅನುಕುಮಾರ್: ಹಿಂದೆಯೂ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದರು.
ಸಮಸ್ಯೆ ಆಗೋದು ಗೊತ್ತಿತ್ತು ಎಂದಿರುವ ದರ್ಶನ್!
ನಟ ದರ್ಶನ್ ಜೈಲಿನಲ್ಲಿ ಮೊದಲ ದಿನದ ಬೇಸರವನ್ನು ಮರೆತು ಸಹಜ ಸ್ಥಿತಿಗೆ ಮರಳಿದ್ದಾರೆ. ರಾತ್ರಿ ಅನ್ನ ಮತ್ತು ಸಾಂಬಾರ್ ಸೇವಿಸಿ ಮಲಗಿದ್ದಾರೆ. ಜೈಲಿನ ಸಿಬ್ಬಂದಿ ಹಾಗೂ ಇತರ ಸಹಚರರೊಂದಿಗೆ ಸಾಮಾನ್ಯವಾಗಿಯೇ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದಾಗಲೇ, ಜಾಮೀನು ರದ್ದು ಮಾಡಬಹುದೆಂದು ಅರಿತಿದ್ದೆ, ಹಾಗಾಗಿ ಮಾನಸಿಕವಾಗಿ ಸಿದ್ಧನಾಗಿದ್ದೆ ಎಂದು ದರ್ಶನ್ ತಮ್ಮ ಮಾತುಗಳಲ್ಲಿ ಹೇಳಿಕೊಂಡಿದ್ದಾರೆ.
ಇದೇ ಪ್ರಕರಣದ ಮತ್ತೊಬ್ಬ ಆರೋಪಿಯಾಗಿರುವ ಪವಿತ್ರಾ ಗೌಡ ಕೂಡ ಮಹಿಳಾ ಬ್ಯಾರಕ್‌ನಲ್ಲಿ ಸಹಜವಾಗಿದ್ದಾರೆ. ನಿನ್ನೆ ರಾತ್ರಿ ಊಟ ಮಾಡಿ, ತಮ್ಮ ಸಹ ಕೈದಿಗಳೊಂದಿಗೆ ಮಾತನಾಡುತ್ತಾ ಕಾಲ ಕಳೆದಿದ್ದಾರೆ ಎನ್ನಲಾಗಿದೆ.
Views: 43