ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಯೋಜನೆ ಕಾರ್ಯಕ್ಕೆ ಶೀಘ್ರ ಚಾಲನೆ.

  • ದಾವಣಗೆರೆ -ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಯೋಜನೆ
  • ಭರಮಸಾಗರ-ಚಿತ್ರದುರ್ಗ ಮಧ್ಯದ ಕಾಮಗಾರಿ ಚಾಲನೆಗೆ ಶೀಘ್ರ ಭೂಮಿಪೂಜೆ
  • ಅಂತಿಮ ಹಂತದಲ್ಲಿ ಬಾಕಿ 145 ಎಕರೆ ಭೂ ಸ್ವಾಧೀನ ಪ್ರಕ್ರಿಯೆ

ಚಿತ್ರದುರ್ಗ: ‘ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆ ವ್ಯಾಪ್ತಿಯ ಭರಮಸಾಗರ-ಚಿತ್ರದುರ್ಗ ಮಧ್ಯದ ಕಾಮಗಾರಿ ಚಾಲನೆಗೆ ಶೀಘ್ರ ಭೂಮಿಪೂಜೆ ನೆರವೇರಿಸಲಾಗುವುದು’ ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.

ಭರಮಸಾಗರ-ಚಿತ್ರದುರ್ಗ ಮಧ್ಯದ ಸುಮಾರು 29 ಕಿಲೋ ಮೀಟರ್‌ ಉದ್ದದ ರೈಲ್ವೆ ಭೂಸ್ವಾಧೀನ ಪ್ರಕ್ರಿಯೆ ಶೇ.90 ರಷ್ಟು ಮುಕ್ತಾಯಗೊಂಡಿದ್ದು, ಭೂಮಿ ಹಸ್ತಾಂತರ ಮಾಡಲಾಗಿದೆ. ಕಾಮಗಾರಿಯ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರ ರಾಜ್ಯದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಂದ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮ ಆಯೋಜಿಸುವಂತೆ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಭಾಗದ ಜನರ ಬಹುದಿನಗಳ ಬೇಡಿಕೆಯಾದ ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಯೋಜನೆ ಜಿಲ್ಲೆಗೆ ಅಗತ್ಯವಾಗಿದೆ. ಯೋಜನೆಗೆ ಚಿತ್ರದುರ್ಗ ಜಿಲ್ಲಾವ್ಯಾಪ್ತಿಯ ಒಟ್ಟು 1210 ಎಕರೆ ಭೂಮಿ ಅವಶ್ಯಕವಾಗಿದೆ. ಇದರಲ್ಲಿ 1053 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ನೀಡಲಾಗಿದೆ. ಬಾಕಿಯಿರುವ 145 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಯೋಜನೆ ವಿಳಂಬವಾಗದಂತೆ ರೈಲ್ವೆ ಕಾಮಗಾರಿಗೆ ಅಗತ್ಯ ಇರುವ ಭೂಮಿ ಸ್ವಾಧೀನ ಹಾಗೂ ರೈಲ್ವೆ ಇಲಾಖೆಗೆ ಭೂಮಿ ಹಸ್ತಾಂತರಿಸುವ ಪ್ರಕ್ರಿಯೆಯನ್ನು ತ್ವರಿತವಾಗಿ ಮಾಡುವಂತೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌, ಭೂಸ್ವಾಧೀನಾಧಿಕಾರಿ ವಿವೇಕ್‌, ನೈರುತ್ಯ ರೈಲ್ವೆ ಮುಖ್ಯ ಎಂಜಿನಿಯರ್‌ ಪರದೀಪ್‌ ಪುರಿ, ಕಾರ್ಯಪಾಲಕ ಎಂಜಿನಿಯರ್‌ ರಜತ್‌ ತುನಹಾ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಬಿ.ಪುರುಷೊತಮ್‌, ವಿಭಾಗೀಯ ಸಹಾಯಕ ಎಂಜಿನಿಯರ್‌ ನಿತ್ಯಾನಂದಸ್ವಾಮಿ ಸೇರಿದಂತೆ ಹಿರಿಯ ಅಧಿಕಾರಿಗಳಿದ್ದರು.

ಆಲಮಟ್ಟಿ-ಕೊಪ್ಪಳ-ಚಿತ್ರದುರ್ಗ ರೈಲು ಮಾರ್ಗ ಕೇಂದ್ರಕ್ಕೆ ಪ್ರಸ್ತಾವ

ಈ ಹಿಂದೆ ಬಿ.ಎಸ್‌ ಯಡಿಯೂರಪ್ಪ ಅವರು, ಮುಖ್ಯಮಂತ್ರಿ ಆಗಿದ್ದಾಗ ಆಲಮಟ್ಟಿ-ಕೊಪ್ಪಳ-ಚಿತ್ರದುರ್ಗ ರೈಲು ಮಾರ್ಗ ಯೋಜನೆಯ ಪ್ರಸ್ತಾವವನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲಾಗಿತ್ತು. 50:50 ಮಾದರಿಯಲ್ಲಿ ರಾಜ್ಯ ಸರಕಾರ ಅನುದಾನ ಬಿಡುಗಡೆ ಮಾಡುವುದರೊಂದಿಗೆ, ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಭೂಮಿ ಹಸ್ತಾಂತರ ಮಾಡುವುದಾಗಿ ಪ್ರಸ್ತಾವನೆಯಲ್ಲಿ ತಿಳಿಸಲಾಗಿತ್ತು.

ಈ ಯೋಜನೆಗೆ ಮರುಜೀವ ನೀಡುವ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಯಿಂದ ಮತ್ತೊಮ್ಮೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಚಿತ್ರದುರ್ಗ ಜಿಲ್ಲಾಧಿಕಾರಿಗಳು ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಈ
ಹಿಂದೆ ಸಲ್ಲಿಸಿದ್ದ ಯೋಜನೆ ಪ್ರಸ್ತಾವನೆ ಪ್ರತಿ ಪಡೆದುಕೊಳ್ಳುವಂತೆ ನಿರ್ದೇಶನ ನೀಡಿದ್ದೇನೆ ಎಂದು ಸಂಸದರು ಹೇಳಿದರು.

ಚಿತ್ರದುರ್ಗ-ಚಳ್ಳಕೆರೆ-ಪಾವಗಡ ಮಧ್ಯದ ರಸ್ತೆ ರಾಷ್ಟ್ರೀಯ ಹೆದ್ದಾರಿಗೆ ಪ್ರಸ್ತಾವನೆ

‘ಕರ್ನಾಟಕ ಹಾಗೂ ಆಂಧ್ರಪ್ರದೇಶ ನಡುವೆ ಸಂಪರ್ಕ ವೃದ್ಧಿಸಲು ಸಹಕಾರಿ ಆಗುವಂತೆ ಚಿತ್ರದುರ್ಗ-ಚಳ್ಳಕೆರೆ-ಪಾವಗಡ ಮಧ್ಯದ 120 ಕಿಮೀ ಉದ್ದದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.

ರಾಷ್ಟ್ರೀಯ ಹೆದ್ದಾರಿ ವಿಭಾಗ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಕೇಂದ್ರ ಸರಕಾರದಿಂದ ಈ ಯೋಜನೆಗೆ ಅನುಮೋದನೆ ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದರು.

‘ಚಳ್ಳಕೆರೆ ತಾಲೂಕಿನ ಸುಮಾರು ಎಂಟು ಸಾವಿರ ಎಕರೆ ವಿಸ್ತೀರ್ಣದಲ್ಲಿ ಐಐಎಸ್‌ಸಿ, ಇಸ್ರೋ, ಡಿಆರ್‌ಡಿಓ, ಬಾರ್ಕ್ ಸಂಸ್ಥೆಗಳ ಸ್ಥಾಪನೆಯಿಂದ ಚಳ್ಳಕೆರೆ ದೇಶದ ಪ್ರಮುಖ ನಗರವಾಗಿ ಮುನ್ನೆಲೆಗೆ ಬಂದಿದೆ. ಸರಿಯಿಲ್ಲದ ಚಳ್ಳಕೆರೆ ನಗರ ವ್ಯಾಪ್ತಿಯ ರಸ್ತೆಗಳನ್ನು ರಾಜ್ಯ ಹಾಗೂ ಕೇಂದ್ರ ಸರಕಾರವು ಅಭಿವೃದ್ಧಿಪಡಿಸುತ್ತಿಲ್ಲ. ಆದ್ದರಿಂದ ಚಳ್ಳಕೆರೆ ನಗರ ಪ್ರದೇಶದ 5.7 ಕಿ.ಮೀ. ರಸ್ತೆಯನ್ನು 50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿ ಪಡೆದುಕೊಳ್ಳಲಾಗುವುದು’ ಎಂದರು.

Source : https://vijaykarnataka.com/news/chitradurga/davanagere-chitradurga-tumakuru-direct-railway-project-to-start-soon-mp-govinda-karajola/articleshow/111685432.cms

Leave a Reply

Your email address will not be published. Required fields are marked *