David Warner: SRH ವಿರುದ್ಧ ಸೇಡು ತೀರಿಸಿಕೊಂಡ ಡೇವಿಡ್ ವಾರ್ನರ್

IPL 2023: ಐಪಿಎಲ್​ನ 34ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೋಲುಣಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 2ನೇ ಜಯ ಸಾಧಿಸಿದೆ. ಈ ಗೆಲುವು ಡೆಲ್ಲಿ ತಂಡದ ನಾಯಕ ಡೇವಿಡ್ ವಾರ್ನರ್ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ವಾರ್ನರ್ ಮಾಜಿ ಎಸ್​ಆರ್​​ಹೆಚ್ ಆಟಗಾರ.2014 ರಿಂದ 2021 ರವರೆಗೆ ಎಸ್​ಆರ್​ಹೆಚ್ ಪರ ಆಡಿದ್ದ ವಾರ್ನರ್, 2016 ರಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಇದಾಗ್ಯೂ 2021 ರಲ್ಲಿ ಕಳಪೆ ಫಾರ್ಮ್​ ಮುಂದಿಟ್ಟುಕೊಂಡು ವಾರ್ನರ್​ ಅವರನ್ನು ನಾಯಕತ್ವದಿಂದ ಕೆಳಗಿಸಲಾಗಿತ್ತು. ಅಷ್ಟೇ ಅಲ್ಲದೆ ಕೆಲ ಪಂದ್ಯಗಳಲ್ಲಿ ಡೇವಿಡ್ ವಾರ್ನರ್ ವಾಟರ್​ ಬಾಯ್​ ಆಗಿಯೂ ಕಾಣಿಸಿಕೊಂಡಿದ್ದರು.ಎಸ್​​ಆರ್​ಹೆಚ್​ ಫ್ರಾಂಚೈಸಿಯ ಈ ನಡೆಗೆ ಭಾರೀ ಆಕ್ರೋಶಗಳು ವ್ಯಕ್ತವಾಗಿದ್ದವು. ಆದರೆ 2022 ರಲ್ಲಿ ಹೈದರಾಬಾದ್ ತಂಡದಿಂದ ಹೊರಬಿದ್ದ ವಾರ್ನರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿಸಿತು. ಇದೀಗ ರಿಷಭ್ ಪಂತ್ ಅವರ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.ಇತ್ತ ತಮ್ಮ ಹಳೆಯ ಫ್ರಾಂಚೈಸಿಯ ತವರಿನಲ್ಲೇ ನಡೆದ ಪಂದ್ಯದಲ್ಲಿ ಎಸ್​ಆರ್​ಹೆಚ್​ ವಿರುದ್ಧ ಗೆಲ್ಲುವ ಮೂಲಕ ಡೇವಿಡ್ ವಾರ್ನರ್ ಆಕ್ರಮಣಕಾರಿಯಾಗಿ ಸಂಭ್ರಮಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಡಿರುವ 5 ಪಂದ್ಯಗಳಲ್ಲಿ ಸೋತಿದ್ದರೂ, ಎಸ್​ಆರ್​ಹೆಚ್​ ವಿರುದ್ಧದ ಈ ಒಂದು ಗೆಲುವಿನ ಖುಷಿಯಲ್ಲಿ ವಾರ್ನರ್ ಮೈ ಮರೆತು ಸಂಭ್ರಮಿಸಿರುವುದು ವಿಶೇಷ.ಅಷ್ಟೇ ಅಲ್ಲದೆ ಮೈದಾನದಲ್ಲೇ ಪುಷ್ಟ ಸ್ಟೈಲ್​ನಲ್ಲಿ ತಗ್ಗೋದೇ ಇಲ್ಲ ಎಂಬ ಸೂಚನೆ ನೀಡಿದರು. ಇದೀಗ ಡೇವಿಡ್ ವಾರ್ನರ್ ಅವರ ಈ ಭರ್ಜರಿ ಸಂಭ್ರಮದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 9 ವಿಕೆಟ್ ನಷ್ಟಕ್ಕೆ 144 ರನ್​ ಕಲೆಹಾಕಿತ್ತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಸನ್​ರೈಸರ್ಸ್ ಹೈದರಾಬಾದ್ ತಂಡವು 6 ವಿಕೆಟ್ ನಷ್ಟಕ್ಕೆ 137 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು 7 ರನ್​ಗಳ ರೋಚಕ ಜಯ ಸಾಧಿಸಿತು.

source https://tv9kannada.com/photo-gallery/cricket-photos/david-warner-rubs-it-in-srhs-face-with-insane-celebration-kannada-news-zp-au50-563426.html

Leave a Reply

Your email address will not be published. Required fields are marked *