David Warner: ದ್ವಿತೀಯ ಟೆಸ್ಟ್ ಆರಂಭವಾದ ಒಂದೇ ದಿನಕ್ಕೆ ಆಸ್ಟ್ರೇಲಿಯಾಕ್ಕೆ ಶಾಕ್: ಸ್ಟಾರ್ ಬ್ಯಾಟರ್ ಪಂದ್ಯದಿಂದ ಹೊರಕ್ಕೆ

David Warner and Australia Team

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಬಾರ್ಡರ್- ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಕುತೂಹಲ ಕೆರಳಿಸಿದೆ. ಮೊದಲ ದಿನವೇ ಕಾಂಗರೂ ಪಡೆಯನ್ನು 263 ರನ್​ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್​ ಶುರು ಮಾಡಿರುವ ಟೀಮ್ ಇಂಡಿಯಾ (Team India) ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿತ್ತು. ಇಂದಿನ ದ್ವಿತೀಯ ದಿನದಾಟದ ಮೇಲೆ ಎಲ್ಲರ ಕಣ್ಣಿದ್ದು ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಮೇಲೆ ದೊಡ್ಡ ಜವಾಬ್ದಾರಿಯಿದೆ. ಇದರ ನಡುವೆ ಆಸ್ಟ್ರೇಲಿಯಾಕ್ಕೆ ದೊಡ್ಡ ಆಘಾತ ಉಂಟಾಗಿದೆ. ತಂಡದ ಅನುಭವಿ ಆರಂಭಿಕ ಡೇವಿಡ್ ವಾರ್ನರ್ (David Warner) ಈ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.

ದ್ವಿತೀಯ ಟೆಸ್ಟ್​ನ ಮೊದಲ ದಿನ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ ಹಾಗೂ ಉಸ್ಮಾನ್ ಖ್ವಾಜಾ ಇನ್ನಿಂಗ್ಸ್ ಶುರು ಮಾಡಿದರು. ಈ ಸಂದರ್ಭ ಟೀಮ್ ಇಂಡಿಯಾ ವೇಗಿಗಳ ದಾಳಿ ನೇರವಾಗಿ ವಾರ್ನರ್ ಮೇಲೆ ಪರಿಣಾಮ ಬೀರಿತು. ಸಿರಾಜ್ ಹಾಗೂ ಶಮಿ ಬೌನ್ಸರ್​ಗಳು ಅನೇಕ ಬಾರಿ ವಾರ್ನರ್ ದೇಹದ ಮೇಲೆಯೇ ಬಿತ್ತು. ಅದರಲ್ಲೂ ಒಂದು ಸಂದರ್ಭ ಚೆಂಡು ವಾರ್ನರ್ ಅವರ ಮೊಣಕೈಗೆ ಬಡಿದು ಪೆಟ್ಟುಬಿದ್ದಿತು. ಎರಡು ಬಾರಿ ಹೆಲ್ಮೆಟ್​ಗೆ ಬಡಿಯಿತು. ಇದರಿಂದ ಗಾಯಕ್ಕೆ ತುತ್ತಾಗಿರುವ ವಾರ್ನರ್ ಇದೀಗ ದ್ವಿತೀಯ ಟೆಸ್ಟ್​ನಿಂದ ಹೊರಬಿದ್ದಿದ್ದಾರೆ. ಇವರ ಸ್ಥಾನಕ್ಕೆ ಮ್ಯಾಟಟ್ ರೆನ್ಶಾ ಅವರನ್ನು ಆಯ್ಕೆ ಮಾಡಲಾಗಿದೆ.

IND vs AUS: ರಾಹುಲ್ ಹಿಡಿದ ಅದ್ಭುತ ಕ್ಯಾಚ್ ನೋಡಿ ದಂಗಾದ ಶತಕ ವಂಚಿತ ಖವಾಜ; ವಿಡಿಯೋ ನೋಡಿ

ಈಗಾಗಲೇ ಸತತ ಕಳಪೆ ಪ್ರದರ್ಶನದಿಂದ ಬಳಲುತ್ತಿರುವ ವಾರ್ನರ್​ಗೆ ಇದು ದೊಡ್ಡ ಹಿನ್ನಡೆ. ಎಮ್​ಸಿಜಿಯಲ್ಲಿ ಆಡಿದ ತನ್ನ 100ನೇ ಪಂದ್ಯದಲ್ಲಿ ಶತಕ ಸಿಡಿಸಿದ ಬಳಿಕ ಇವರ ಬ್ಯಾಟ್​ನಿಂದ ಹೇಳಿಕೊಳ್ಳುವಂತಹ ರನ್ ಬರುತ್ತಿಲ್ಲ. ಮೊದಲ ಟೆಸ್ಟ್​ನಲ್ಲಿ 1 ರನ್ ಹಾಗೂ 10 ರನ್​ಗೆ ವಿಕೆಟ್ ಒಪ್ಪಿಸಿದರೆ, ದ್ವಿತೀಯ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ 15 ರನ್​ಗೆ ಔಟಾಗಿದ್ದರು. ವಾರ್ನರ್ ಅವರಿಗೆ ನೋವು ಅಧಿಕವಿದ್ದ ಕಾರಣ ಮೊದಲ ದಿನದಾಟದ ಭಾರತದ ಬ್ಯಾಟಿಂಗ್ ವೇಳೆ ಫೀಲ್ಡಿಂಗ್​ಗೂ ಬಂದಿರಲಿಲ್ಲ. ಇದೀಗ ಡೆಲ್ಲಿ ಟೆಸ್ಟ್​​ನಿಂದ ಹೊರಬಿದ್ದಿರುವ ವಾರ್ನರ್ ಮೂರನೇ ಟೆಸ್ಟ್ ಪಂದ್ಯಕ್ಕೆ ಲಭ್ಯರಿರುತ್ತಾರ ಎಂಬುದು ನೋಡಬೇಕಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಆಸೀಸ್ ಆರಂಭದದಲ್ಲೇ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡಿತು. ಮಾರ್ನಸ್ ಲಾಬುಶೇನ್​ಗೆ (18) ಅಶ್ವಿನ್ ಕಂಟಕವಾದರು. ಸ್ಮಿತ್ ಸೊನ್ನೆ ಸುತ್ತಿದ್ದು ತಂಡಕ್ಕೆ ದೊಡ್ಡ ಹಿನ್ನಡೆ ಆಯಿತು. ಟ್ರಾವಿಸ್ ಹೆಡ್ ಆಟ 12 ರನ್​ಗೆ ಅಂತ್ಯವಾಯಿತು. ಹೀಗೆ ಒಂದುಕಡೆ ಆಸೀಸ್ ವಿಕೆಟ್ ಕಳೆದುಕೊಳ್ಳುತ್ತಿದ್ದರೆ ಅತ್ತ ಓಪನರ್ ಉಸ್ಮಾನ್ ಖ್ವಾಜಾ (81) ಭಾರತೀಯ ಬೌಲರ್​ಗಳನ್ನು ದಿಟ್ಟವಾಗಿ ಎದುರಿಸಿ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ನಂತರ ಪೀಟರ್ ಹ್ಯಾಂಡ್ಸ್​ಕಾಂಬ್ (72) ನಾಯಕ ಪ್ಯಾಟ್ ಕಮಿನ್ಸ್ (33) ಜೊತೆಸೇರಿ 59 ರನ್​ಗಳ ಕಾಣಿಕೆ ನೀಡಿದರು.

ಅಂತಿಮವಾಗಿ ಆಸ್ಟ್ರೇಲಿಯಾ 78.4 ಓವರ್​ಗಳಲ್ಲಿ 263 ರನ್​ಗೆ ಆಲೌಟ್ ಆಯಿತು. ಭಾರತ ಪರ ಮೊಹಮ್ಮದ್ ಶಮಿ 4 ವಿಕೆಟ್ ಕಿತ್ತರೆ, ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಲಾ 3 ವಿಕೆಟ್ ಪಡೆದರು. ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭವನ್ನೇನು ಪಡೆದಿದೆ. ಮೊದಲ ದಿಣದಾಟದ ಅಂತ್ಯಕ್ಕೆ 9 ಓವರ್​ನಲ್ಲಿ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದೆ. ನಾಯಕ ರೋಹಿತ್ ಶರ್ಮಾ 13 ಹಾಗೂ ಕೆಎಲ್ ರಾಹುಲ್ 4 ರನ್ ಗಳಿಸಿ ದ್ವಿತೀಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/david-warner-has-been-ruled-out-of-the-india-vs-australia-second-test-match-in-delhi-cricket-news-in-kannada-vb-au48-522227.html

Views: 0

Leave a Reply

Your email address will not be published. Required fields are marked *