DC vs RCB: ಕೊಹ್ಲಿ-ಕೃನಾಲ್​ ಅಬ್ಬರಕ್ಕೆ ಡೆಲ್ಲಿ ವಿಲವಿಲ! ಕ್ಯಾಪಿಟಲ್ಸ್​ ಕೋಟೆಯನ್ನ ಛಿದ್ರ ಮಾಡಿ ಸೇಡು ತೀರಿಸಿಕೊಂಡ ಆರ್​​ಸಿಬಿ

ಬೌಲರ್​ಗಳ ಅಮೋಘ ಪ್ರದರ್ಶನ ಹಾಗೂ ವಿರಾಟ್ ಕೊಹ್ಲಿ- ಕೃನಾಲ್ ಪಾಂಡ್ಯ ಸಿಡಿಸಿದ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್​ಗಳ ಸುಲಭ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಭುವನೇಶ್ವರ್ ಕುಮಾರ್, ಹ್ಯಾಜಲ್​ವುಡ್ ಬೌಲಿಂಗ್ ದಾಳಿಗೆ ಸಿಲುಕಿ ಕೇವಲ 162 ರನ್​ಗಳ ಸಾಧಾರಣ ಮೊತ್ತಗಳಿಸಿತ್ತು. 163 ರನ್​ಗಳ ಗುರಿಯನ್ನ ಬೆನ್ನಟ್ಟಿದ ಆರ್​​ಸಿಬಿ ಕೇವಲ 23ಕ್ಕೆ3 ವಿಕೆಟ್​ ಕಳೆದುಕೊಂಡರೂ, ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ (51) ಹಾಗೂ ಕೃನಾಲ್ ಪಾಂಡ್ಯ (73) ಅಜೇಯ ಅರ್ಧಶತಕಗಳ ನೆರವಿನಿಂದ ಇನ್ನೂ 9 ಎಸೆತಗಳು ಇರುವಂತೆಯೇ ಗೆಲುವು ಸಾಧಿಸಿತು.

163ರನ್​ಗಳ ಸಾಧಾರಣ ಮೊತ್ತವನ್ನ ಚೇಸಿಂಗ್ ಮಾಡಲು ಹೊರ ಆರ್​​ಸಿಬಿ ಆರಂಭ ತೀರ ಕೆಟ್ಟದಾಗಿತ್ತು. ಇಂದೇ ಪದಾರ್ಪಣೆ ಮಾಡಿದ್ದ ಜಾಕೋಬ್ ಬೆಥೆಲ್ 6 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್ ಸಹಿತ ಕೇವಲ 12 ರನ್​ಗಳಿಸಿ ಔಟ್ ಆದರು. ಇಂಪ್ಯಾಕ್ಟ್ ಸಬ್​ ಆಗಿ ಬಂದ ದೇವದತ್ ಪಡಿಕ್ಕಲ್ 2 ಎಸೆತಗಳನ್ನಾಡಿ ಡಕ್​ ಔಟ್ ಆದರು. ಈ ಇಬ್ಬರು ಅಕ್ಷರ್​ ಪಟೇಲ್ ಎಸೆದ ಇನ್ನಿಂಗ್ಸ್​ನ 3ನೇ ಓವರ್​​ನಲ್ಲಿ ಔಟ್ ಆದರು. ನಂತರ ಬಂದ ನಾಯಕ ರಜತ್ ಪಾಟೀದಾರ್(6) 4ನೇ ಓವರ್​​ನಲ್ಲಿ ಕೊಹ್ಲಿ ಮಾಡಿದ ಎಡವಟ್ಟಿಗೆ ರನ್​ಔಟ್​ ಆದರು. ಮುಕೇಶ್ ಕುಮಾರ್ ಬೌಲಿಂಗ್​​ನಲ್ಲಿ ಮಿಡ್​ ವಿಕೆಟ್​​ನತ್ತ ಚೆಂಡನ್ನ ಬಾರಿಸಿದ್ದರು. ಇಬ್ಬರು ಸಿಂಗಲ್ ತೆಗೆದುಕೊಳ್ಳಲು ಮುಂದಾದರು, ಆದರೆ ಕೊಹ್ಲಿ ಒಂದೆರಡು ಹೆಜ್ಜೆ ಹಾಕಿ ನಂತರ ಪಾಟೀದಾರ್​ಗೆ ವಾಪಸ್ ಆಗಲು ಸೂಚಿಸಿದರು. ಆದರೆ ಪಾಟೀದಾರ್ ವಾಪಸ್ ತೆರಳುವಷ್ಟರಲ್ಲಿ ಕನ್ನಡಿಗ ಕರುಣ್ ನಾಯರ್ ಡೈರೆಕ್ಟ್ ಹಿಟ್ ಮೂಲಕ ಸ್ಟಂಪ್ ಎಗರಿಸಿದರು.

4 ಓವರ್​ಗಳಲ್ಲಿ ಕೇವಲ 23 ರನ್​ಗಳಿಗೆ ಆರ್​ಸಿಬಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಗೆಲುವು ಕೈತಪ್ಪಿತೇನೋ ಎನ್ನುವ ಭೀತಿ ಆರ್​ಸಿಬಿ ಪಾಳಯದಲ್ಲಿ ಮೂಡಿತ್ತು. ಅದರೆ ಚೇಸಿಂಗ್ ಮಾಸ್ಟರ್​ ಹಾಗೂ 5ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ಕೃನಾಲ್ ಪಾಂಡ್ಯ ಎಲ್ಲರ ಲೆಕ್ಕಾಚಾರವನ್ನು ಉಲ್ಟಾಪಲ್ಟಾ ಮಾಡಿದರು. ಅವಕಾಶ ಸಿಕ್ಕಾಗ ಬೌಂಡರಿ, ಸಿಕ್ಸರ್, ಇಲ್ಲದಿದ್ದಾಗ ಸಿಂಗಲ್, 2 ರನ್​ ತೆಗೆಯುತ್ತಾ ಅದ್ಭುತ ಜೊತೆಯಾಟ ನಡೆಸಿದ ಈ ಜೋಡಿ 4ನೇ ವಿಕೆಟ್​ಗೆ 84 ಎಸೆತಗಳಲ್ಲಿ 119ರನ್​ಗಳ ಜೊತೆಯಾಟ ನಡೆಸಿದರು. ವಿರಾಟ್ 47 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 51 ರನ್​ಗಳಿಸಿ ಗೆಲುವಿಗೆ 18 ರನ್​ಗಳ ಅಗತ್ಯವಿದ್ದಾಗ ಚಮೀರಾ ಬೌಲಿಂಗ್​​ನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಸ್ಟಾರ್ಕ್​​ಗೆ ಕ್ಯಾಚ್​ ನೀಡಿ ಔಟ್ ಆದರು.

ಆದರೆ 6ನೇ ಕ್ರಮಾಂಕದಲ್ಲಿ ಬಂದ ಟಿಮ್ ಡೇವಿಡ್ ಗೆಲುವಿಗೆ ಬೇಕಿದ್ದ 18 ರನ್​ಗಳನ್ನ 19ನೇ ಓವರ್​​ನ ಮೊದಲ 3 ಎಸೆತಗಳಲ್ಲಿ​  ಮುಗಿಸಿದರು. ಮುಕೇಶ್ ಕುಮಾರ್ ಎಸೆದ 19ನೇ ಓವರ್​​ನಲ್ಲಿ ಮೊದಲ 3 ಎಸೆತಗಳಲ್ಲಿ (ಒಂದು ನೋಬಾಲ್) 4 ಬೌಂಡರಿ, 1 ಸಿಕ್ಸರ್ ಸಿಡಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು. ಟಿಮ್ ಡೇವಿಟ್ 5 ಎಸೆತಗಳಲ್ಲಿ ಅಜೇಯ 19 ರನ್​ಗಳಿಸಿದರೆ, ಮ್ಯಾಚ್ ವಿನ್ನಿಂಗ್​ ಆಟವಾಡಿದ ಕೃನಾಲ್ ಪಾಂಡ್ಯ 47 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್​ಗಳ  ಸಹಿತ ಅಜೇಯ 73 ರನ್​ ಸಿಡಿಸಿದರು.

ಡೆಲ್ಲಿ ಕ್ಯಾಪಿಟಲ್ಸ್ ಅಕ್ಷರ್ ಪಟೇಲ್ 19ಕ್ಕೆ2, ದುಷ್ಮಂತ ಚಮೀರಾ 24ಕ್ಕೆ1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ತೋರುವಲ್ಲಿ ವಿಫಲರಾದರು.  ಕೆಎಲ್ ರಾಹುಲ್ 39 ಎಸೆತಗಳಲ್ಲಿ 3 ಬೌಂಡರಿಗಳ ಸಹಿತ 41ರನ್​ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅಭಿಷೇಕ್ ಪೊರೆಲ್ 11 ಎಸೆತಗಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ ಸಹಿತ 28 ರನ್​ಗಳಿಸಿದರೆ, ಟ್ರಿಸ್ಟಾನ್ ಸ್ಟಬ್ಸ್ 18 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 34 ರನ್​ಗಳಿಸಿದರು.

ಆರ್​ಸಿಬಿ ಈ ಗೆಲುವಿನೊಂದಿಗೆ 7ನೇ ಗೆಲುವಿನೊಂದಿಗೆ 14 ಅಂಕ ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಆರ್​ಸಿಬಿ ಮುಂದಿನ ಪಂದ್ಯದಲ್ಲಿ ಸಿಎಸ್​ಕೆ ತಂಡವನ್ನು ಮೇ 3ರಂದು ಚಿನ್ನಸ್ವಾಮಿಯಲ್ಲಿ ಎದುರಿಸಲಿದೆ.

Source : News18 Kannada

Views: 12

Leave a Reply

Your email address will not be published. Required fields are marked *