WPLನ ಮೊದಲ ಸೂಪರ್ ಓವರ್​ ಥ್ರಿಲ್ಲರ್‌ನಲ್ಲಿ ಆರ್​ಸಿಬಿಗೆ ಸೋಲು!

ಬೆಂಗಳೂರು: WPL ಇತಿಹಾಸದಲ್ಲೇ ಮೊದಲ ಸೂಪರ್ ಓವರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಯುಪಿ ವಾರಿಯರ್ಸ್ ತಂಡ ಜಯ ದಾಖಲಿಸಿದೆ. ಸೋಮವಾರ ನಡೆದ ರಣರೋಚಕ ಪಂದ್ಯಕ್ಕೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಯಿತು.

ಡಬ್ಲ್ಯುಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಸೂಪರ್ ಓವರ್‌ ಹಂತ ತಲುಪಿದ ಪಂದ್ಯವನ್ನ ಅಂತಿಮವಾಗಿ ಯುಪಿ ವಾರಿಯರ್ಸ್​ ತಂಡ 4 ರನ್​ಗಳಿಂದ ಗೆದ್ದು ಬೀಗಿತು. ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್​ ತಂಡ 8 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಆರ್​ಸಿಬಿ ಕೇವಲ 4 ರನ್ ಗಳಿಸಲಷ್ಟೇ ಶಕ್ತವಾಯಿತು.

ಇದಕ್ಕೂ ಮೊದಲು ಟಾಸ್ ಸೋತ ಆರ್‌ಸಿಬಿ ತಂಡ ಮೊದಲು ಬ್ಯಾಟಿಂಗ್ ಆರಂಭಿಸಿತು. ಆರ್‌ಸಿಬಿ ಪರ ಎಲ್ಲಿಸ್ ಪೆರ್ರಿ 56 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ ಅಜೇಯ 90 ರನ್ ಗಳಿಸಿದರು. ಮತ್ತೊಂದೆಡೆ ಆರಂಭಿಕ ಆಟಗಾರ್ತಿ ಡೇನಿಯಲ್ ವ್ಯಾಟ್-ಹಾಡ್ಜ್ 57 ರನ್‌ ಗಳಿಸಿದರು. ಇಬ್ಬರ ಅರ್ಧಶತಕಗಳ ನೆರವಿನಿಂದ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 180 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ಪರ ಶ್ವೇತಾ ಸೆಹ್ರಾವತ್ 31 ರನ್, ದೀಪ್ತಿ ಶರ್ಮಾ 25 ರನ್ ಮತ್ತು ಸೋಫಿ ಎಕಲ್ಸ್ಟನ್ ಅಜೇಯ 33 ರನ್ ಗಳಿಸಿದರು. ಕೊನೆಯ ಓವರ್‌ನಲ್ಲಿ ಯುಪಿ ತಂಡದ ಗೆಲುವಿಗೆ 18 ರನ್‌ಗಳ ಅಗತ್ಯವಿತ್ತು. ರೇಣುಕಾ ಸಿಂಗ್ ಎಸೆದ ಈ ಓವರ್‌ನಲ್ಲಿ ಸೋಫಿ ಎಕಲ್ಸ್ಟನ್ 2 ಸಿಕ್ಸರ್‌ ಮತ್ತು 1 ಬೌಂಡರಿ ಬಾರಿಸುವ ಮೂಲಕ ಪಂದ್ಯದ ಗತಿ ಬದಲಿಸಿದರು. ಆದರೆ, ಕೊನೆಯ ಎಸೆತದಲ್ಲಿ ಗೆಲುವಿಗೆ 1 ರನ್ ಅಗತ್ಯವಿದ್ದಾಗ ಸೋಫಿ ಎಕಲ್ಸ್ಟನ್ ರನ್ ಔಟ್‌ ಆಗುವ ಮೂಲಕ ಯುಪಿ ತಂಡ 20 ಓವರ್‌ಗಳಲ್ಲಿ 180 ರನ್‌ಗಳಿಗೆ ಆಲ್ ಔಟ್ ಆಯಿತು.

ಸೂಪರ್​ ಓವರ್ ಥ್ರಿಲ್ಲರ್: ಟೈ ಬಳಿಕ ಸೂಪರ್ ಓವರ್‌ನಲ್ಲಿ ಯುಪಿ ವಾರಿಯರ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ 8 ರನ್ ಕಲೆಹಾಕಿತು. ಗೆಲುವಿಗೆ 9 ರನ್‌ಗಳ ಗುರಿ ಪಡೆದ ಆರ್‌ಸಿಬಿಗೆ ಸೋಫಿ‌ ಎಕಲ್ಸ್ಟನ್ ಮತ್ತೊಮ್ಮೆ ವಿಲನ್ ಆಗಿ ಕಾಡಿದರು. ಬಿಗಿ ಬೌಲಿಂಗ್ ದಾಳಿ ಮಾಡಿದ ಎಕಲ್ಸ್ಟನ್ ಆರ್‌ಸಿಬಿಗೆ ಕೇವಲ 4 ರನ್‌ಗಳನ್ನಷ್ಟೇ ನೀಡಿದರು. ಅಂತಿಮವಾಗಿ ಯುಪಿ ವಾರಿಯರ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 4 ರನ್‌ಗಳಿಂದ ಸೋಲಿಸಿತು.

ಸಂಕ್ಷಿಪ್ತ ಸ್ಕೋರ್:

ರಾಯಲ್ ಚಾಲೆಂಜರ್ಸ್ ಬೆಂಗಳೂರು – 180/6 (20)
ಎಲ್ಲಿಸ್ ಪೆರ್ರಿ 90 (56), ಡೇನಿಯಲ್ ವ್ಯಾಟ್-ಹಾಡ್ಜ್ 57 (41)
ಸಿನೆಲ್ಲೆ ಹೆನ್ರಿ 4-34/1
ತಾಹಿಲಾ ಮೆಗ್ರಾತ್ 3-30/1

ಯುಪಿ ವಾರಿಯರ್ಸ್ – 180/10 (20)
ಸೋಫಿ ಎಕಲ್ಸ್ಟನ್ 33 (19), ಶ್ವೇತಾ ಸೆಹ್ರಾವತ್ 33 (25)
ಸ್ನೇಹ್ ರಾಣಾ 3-27/3, ರೇಣುಕಾ ಸಿಂಗ್ 4-36/2

Source : https://www.etvbharat.com/kn/!sports/wpl-2025-rcb-lose-in-first-super-over-match-against-up-warriors-karnataka-news-kas25022500992

Leave a Reply

Your email address will not be published. Required fields are marked *