ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ಶ್ರೇಯಾ ಯಾದವ್, ತೆಲಂಗಾಣದ ತಾನ್ಯಾ ಸೋನಿ ಮತ್ತು ಕೇರಳದ ಎರ್ನಾಕುಲಂನ ನವೀನ್ ಡಾಲ್ವಿನ್ ಅವರು ಐಎಎಸ್ ಕೋಚಿಂಗ್ ಅಕಾಡೆಮಿಯ ನೆಲಮಾಳಿಗೆಯಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.
![](https://samagrasuddi.co.in/wp-content/uploads/2024/07/image-212.png)
ನವದೆಹಲಿ: ಶನಿವಾರ ದೆಹಲಿಯ ಓಲ್ಡ್ ರಾಜೇಂದ್ರ ನಗರದಲ್ಲಿರುವ (Old Rajinder Nagar) ‘ರೌಸ್ ಐಎಎಸ್ ಕೋಚಿಂಗ್ ಸೆಂಟರ್’ನ (Coaching Centre) ನೆಲಮಾಳಿಗೆಯು ಜಲಾವೃತವಾಗಿ 3 ವಿದ್ಯಾರ್ಥಿಗಳು (Students) ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಮೃತರಲ್ಲಿ ಇಬ್ಬರು ವಿದ್ಯಾರ್ಥಿನಿಯರು ಹಾಗೂ ಓರ್ವ ವಿದ್ಯಾರ್ಥಿ ಸೇರಿದ್ದಾರೆ. ಪ್ರಕರಣ ಸಂಬಂಧ ತರಬೇತಿ ಕೇಂದ್ರದ ಮಾಲೀಕ (Owner) ಮತ್ತು ಸಮನ್ವಯಕಾರನನ್ನು (Coordinator) ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ವಿದ್ಯಾರ್ಥಿಗಳ ಪ್ರತಿಭಟನೆ
ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ಶ್ರೇಯಾ ಯಾದವ್, ತೆಲಂಗಾಣದ ತಾನ್ಯಾ ಸೋನಿ ಮತ್ತು ಕೇರಳದ ಎರ್ನಾಕುಲಂನ ನವೀನ್ ಡಾಲ್ವಿನ್ ಅವರು ಐಎಎಸ್ ಕೋಚಿಂಗ್ ಅಕಾಡೆಮಿಯ ನೆಲಮಾಳಿಗೆಯಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಮೃತರ ಸಂಖ್ಯೆ ಹೆಚ್ಚಿದೆ ಎಂದು ವಿದ್ಯಾರ್ಥಿಗಳು ಶಂಕಿಸಿದ್ದು, ನಾವು ಹೆಚ್ಚಿನ ದೇಹಗಳನ್ನು ನೋಡಿದ್ದೇವೆ ಎಂದು ಹೇಳಿದ್ದಾರೆ. ಸಾವನ್ನಪ್ಪಿದವರ ಸಂಖ್ಯೆಯ ಕುರಿತು ಪ್ರತಿಭಟನೆ ಮುಂದುವರಿದಿದ್ದು, ಇಂದು ಮೂಲವ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನುಮತಿ ಪಡೆಯದೆ ಗ್ರಂಥಾಲಯ ಓಪನ್
ದೆಹಲಿ ಅಗ್ನಿಶಾಮಕ ಸೇವೆಗಳ (DFS) ನಿರಾಕ್ಷೇಪಣಾ ಪ್ರಮಾಣಪತ್ರದ (NOC) ಪ್ರಕಾರ ಸ್ಟೋರೇಜ್ ಉದ್ದೇಶಗಳಿಗಾಗಿ ಮಾತ್ರ ನೆಲಮಾಳಿಗೆಯನ್ನು ಬಳಸಲು ಅನುಮತಿ ಹೊಂದಿತ್ತು. ಆದರೆ ಗ್ರಂಥಾಲಯವಾಗಿ ಪರಿರ್ತಿಸಿದ್ದು, ಎಫ್ಐಆರ್ನಲ್ಲಿ ಇದಕ್ಕೆ ಸಂಬಂಧಿಸಿದ ಸೆಕ್ಷನ್ ಸೇರಿಸಲು ಡಿಎಫ್‌ಎಸ್ ದೆಹಲಿ ಪೊಲೀಸರಿಗೆ ಪತ್ರ ಬರೆಯಲಿದೆ.
ಸ್ಥಳಕ್ಕೆ ಅಧಿಕಾರಿಗಳ ಭೇಟಿ
ರಾತ್ರಿ ನಡೆದ ಘಟನೆಯಿಂದ ಅಂಬೇಡ್ಕರ್ ನಗರದ ವಿದ್ಯಾರ್ಥಿಯೊಬ್ಬರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಆದ್ದರಿಂದ, ಜಿಲ್ಲಾಡಳಿತದ ಸೂಚನೆಯಂತೆ, ಇಲ್ಲಿಗೆ ಬಂದಿದ್ದೇನೆ ಎಂದು ಅಂಬೇಡ್ಕರ್ ನಗರದ ಉಪ-ಜಿಲ್ಲಾ ಮ್ಯಾಜಿಸ್ಟ್ರೇಟ್ ಸೌರಭ್ ಶುಕ್ಲಾ ತಿಳಿಸಿದ್ದಾರೆ. ತುಂಬಾ ಭರವಸೆಯ ವಿದ್ಯಾರ್ಥಿಯಾಗಿದ್ದ ಶ್ರೇಯಾ ಯಾದವ್ , IAS ಕೋಚಿಂಗ್‌ಗಾಗಿ ದೆಹಲಿಗೆ ಬಂದಿದ್ದಳು. ಘಟನೆ ಬಗ್ಗೆ ನಾವು ಅಧಿಕಾರಿಗಳಿಂದ ವರದಿ ಕೇಳಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಸಂಬಂಧಿಕರ ಆಕ್ರೋಶ
ಕೋಚಿಂಗ್ ಇನ್‌ಸ್ಟಿಟ್ಯೂಟ್ ಅಥವಾ ಸರ್ಕಾರದಿಂದ ನನಗೆ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ. ಸುದ್ದಿ ನೋಡಿ ಇಲ್ಲಿಗೆ ಬಂದೆ. ನಾನು ಶವಾಗಾರಕ್ಕೆ ಹೋಗಿ ಗುರುತಿಗಾಗಿ ಮುಖವನ್ನು ತೋರಿಸಲು ಕೇಳಿದೆ ಆದರೆ ಪೊಲೀಸ್ ಕೇಸ್ ಎಂದು ನಿರಾಕರಿಸಿದರು. ಶ್ರೇಯಾ ಯಾದವ್ ಹೆಸರು ಬರೆದಿರುವ ಕಾಗದವನ್ನು ಅವರು ನನಗೆ ತೋರಿಸಿದರು. ಘಟನೆ ಬಗ್ಗೆ ಸುದ್ದಿಯಾದಾಗ ನಾನು ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗೆ ಕರೆ ಮಾಡಿದೆ. ನಾವು ಹೆಸರನ್ನು ಹೇಳಲು ಸಾಧ್ಯವಿಲ್ಲ, ಎರಡು ಸಾವುನೋವುಗಳು ಸಂಭವಿಸಿವೆ ಎಂದು ಅವರು ಹೇಳಿದರು ಎಂದು ಶ್ರೇಯಾ ಯಾದವ್ ಅವರ ಸಂಬಂಧಿ ಧರ್ಮೇಂದ್ರ ಯಾದವ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಪಿಹೆಚ್‌ಡಿ ವಿದ್ಯಾರ್ಥಿ ಸಾವು
ನವಿನ್ (ಡಾಲ್ವಿನ್) ಕೇರಳದವರು ಮತ್ತು ಜೆಎನ್‌ಯು ಅಲ್ಲಿ ಪಿಹೆಚ್‌ಡಿ ಓದುತ್ತಿದ್ದರು. ಅವರು ನಮಗಿಂತ ಸ್ವಲ್ಪ ದೊಡ್ಡವರಾಗಿದ್ದು, ಗ್ರಂಥಾಲಯಕ್ಕೆ ಸಾಮಾನ್ಯವಾಗಿ ಬರುತ್ತುದ್ದರು. ಅವರಿಲ್ಲ ಎಂಬ ವಿಷಯ ಕೇಳಿ ನಮಗೆ ಕಷ್ಟವಾಗುತ್ತಿದೆ ಎಂದು ಅವರ ಸಹಪಾಠಿಯೊಬ್ಬರು ನ್ಯೂಸ್ 18ಗೆ ತಿಳಿಸಿದ್ದಾರೆ.
ಪೊಲೀಸರಿಂದ ತನಿಖೆ ಚುರುಕು
ನಾವು ರಾಜಿಂದರ್ ನಗರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 105, 106 (1), 115 (2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ. ಭಾರತೀಯ ನ್ಯಾಯ ಸಂಹಿತೆಯ 290 ಮತ್ತು 35ರ ಅಡಿಯಲ್ಲಿ ತನಿಖೆ ಪ್ರಾರಂಭಿಸಿದ್ದೇವೆ ಎಂದು ಎಂದು ಪೊಲೀಸ್ ಉಪ ಆಯುಕ್ತ ಎಂ ಹರ್ಷ ವರ್ಧನ್ ಹೇಳಿದರು. ಡಿಎಫ್‌ಎಸ್ ಪ್ರಕಾರ, ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಕೋಚಿಂಗ್ ಸೆಂಟರ್‌ಗೆ ನೀರು ನುಗ್ಗಿದ ಕುರಿತು ಕರೆ ಬಂದಿತ್ತು. ನೆಲಮಾಳಿಗೆಯು ಬೇಗನೆ ಜಲಾವೃತಗೊಂಡಿದ್ದರಿಂದ ಕೆಲವರು ಒಳಗೆ ಸಿಲುಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟು ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದಾಗ ನೆಲಮಾಳಿಗೆ ನೀರಿನಿಂದ ತುಂಬಿತ್ತು ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.