Delhi Air Pollution To Much Increase: ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣವು ಅತ್ಯಂತ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ನಿರ್ಮಾಣ ಕಾಮಗಾರಿಗೆ ಬ್ರೇಕ್ ಹಾಕಲಾಗಿದೆ. ಜತೆಗೆ ಪ್ರಾಥಮಿಕ ಶಾಲೆಗಳು ತಾತ್ಕಾಲಿಕ ಬಂದ್ ಮಾಡಿ ಆನ್‌ಲೈನ್ ಪಾಠಕ್ಕೆ ಸೂಚನೆ ನೀಡಲಾಗಿದೆ. 11 ಡಿಗ್ರಿ ಸೆಲ್ಸಿಯಸ್ ಚಳಿಯ ಜತೆಗೆ ಮಾಲಿನ್ಯದಿಂದ ಜನರು ತತ್ತರಿಸಿದ್ದಾರೆ. ಈ ಬಗ್ಗೆ ವಿವರ ಇಲ್ಲಿದೆ.

- ದೆಹಲಿಯಲ್ಲಿ 11 ಡಿಗ್ರಿ ಸೆಲ್ಸಿಯಸ್ ಚಳಿಯ ಜತೆಗೆ ಮಾಲಿನ್ಯದಿಂದ ಜನರು ತತ್ತರ.
- ಪ್ರಾಥಮಿಕ ಶಾಲೆಗಳು ತಾತ್ಕಾಲಿಕ ಬಂದ್, ಆನ್‌ಲೈನ್ ಪಾಠಕ್ಕೆ ಸೂಚನೆ.
- ನಿರ್ಮಾಣ ಕಾಮಗಾರಿಗೆ ಬ್ರೇಕ್; 300 ವಿಮಾನಗಳ ಸಂಚಾರದಲ್ಲಿ ವ್ಯತ್ಯಯ.
ಹೊಸದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಪ್ರಮಾಣವು ‘ಅತ್ಯಂತ ಅಪಾಯಕಾರಿ ಮಟ್ಟ’ (ಎಕ್ಯುಐ-428) ತಲುಪಿರುವ ಹಿನ್ನೆಲೆಯಲ್ಲಿಎಚ್ಚೆತ್ತಿರುವ ದೆಹಲಿ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಮಾಲಿನ್ಯ ನಿಯಂತ್ರಣದ ಜತೆಗೆ ಜನರ ಆರೋಗ್ಯ ರಕ್ಷಣೆಯ ತುರ್ತು ಕ್ರಮಗಳನ್ನು ಜರುಗಿಸಲು ಮುಂದಾಗಿವೆ. ಈ ನಿಟ್ಟಿನಲ್ಲಿ ದೆಹಲಿಯಲ್ಲಿ’ಗ್ರಾಪ್-3′ (ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲಾನ್-3ನೇ ಹಂತ) ಶುಕ್ರವಾರ ಬೆಳಗ್ಗೆಯಿಂದ ಜಾರಿಗೆ ಬರಲಿದೆ.
ಗ್ರಾಪ್-3 ಅನ್ವಯವಾದಂತೆ ದೆಹಲಿಯಲ್ಲಿ ಬಿಎಸ್-3 ಎಮಿಷನ್ ಗುಣಮಟ್ಟದ ಪೆಟ್ರೋಲ್ ಚಾಲಿತ ವಾಹನಗಳು ಹಾಗೂ ಬಿಎಸ್-4 ಎಮಿಷನ್ ಗುಣಮಟ್ಟದ ಡೀಸೆಲ್ ಚಾಲಿತ ವಾಹನಗಳಿಗಿಂತ ಹಳೆಯ ವಾಹನಗಳು ರಸ್ತೆಗೆ ಇಳಿಯುವಂತಿಲ್ಲ. ಕೇವಲ ದೆಹಲಿಗೆ ಮಾತ್ರವಲ್ಲದೇ ಗುರುಗ್ರಾಮ, ಘಾಜಿಯಾಬಾದ್, ಫರೀದಾಬಾದ್, ಗೌತಮಬುದ್ಧ ನಗರಕ್ಕೂ ‘ಗ್ರಾಪ್-3’ ಅನ್ವಯವಾಗಲಿದೆ.
ಜತೆಗೆ, ನಿರ್ಮಾಣ ಹಂತದ ಎಲ್ಲ ಕಾಮಗಾರಿಗಳನ್ನು ಕೂಡಲೇ ಸ್ಥಗಿತಗೊಳಿಸಲು ಕಟ್ಟಪ್ಪಣೆ ಮಾಡಲಾಗಿದೆ. ರಸ್ತೆಗಳು, ನಿರ್ಮಾಣ ಹಂತದ ಕಟ್ಟಡಗಳಲ್ಲಿದೆಹಲಿಪಾಲಿಕೆ ವತಿಯಿಂದ ನೀರನ್ನು ಸಿಂಪಡಿಸುವ ಮೂಲಕ ದೂಳಿನ ಕಣಗಳು ಮೇಲೇಳದಂತೆ ತಡೆಯುವ ನಿಯಂತ್ರಣ ಕ್ರಮ ಚುರುಕುಗೊಳಿಸಲಾಗಿದೆ ಎಂದು ದೆಹಲಿಪರಿಸರ ಸಚಿವ ಗೋಪಾಲ್ ರಾಯ್ ತಿಳಿಸಿದ್ದಾರೆ.
ಆನ್‌ಲೈನ್ ಶಾಲೆ
ದೆಹಲಿಯಲ್ಲಿಈ ಋುತುಮಾನದ ಕನಿಷ್ಠ ತಾಪಮಾನವು ದಾಖಲಾಗಿದೆ. ಗುರುವಾರ 11.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ವಾಯುಮಾಲಿನ್ಯ ಮಿತಿಮೀರಿರುವ ಹಿನ್ನೆಲೆಯಲ್ಲಿ ಜನರ ರಕ್ಷಣೆಗೆ ಮುಂದಾಗಿರುವ ದೆಹಲಿ ಸರ್ಕಾರವು ಪ್ರಾಥಮಿಕ ಶಾಲೆಗಳಿಗೆ ತಾತ್ಕಾಲಿಕವಾಗಿ ಆನ್‌ಲೈನ್ ಪಾಠಕ್ಕೆ ಮೊರೆಹೋಗುವಂತೆ ನಿರ್ದೇಶಿಸಿದೆ. ಪ್ರಾಥಮಿಕ ಶಾಲೆಗಳು ವಿದ್ಯಾರ್ಥಿಗಳನ್ನು ಕರೆಸಿಕೊಂಡು ಕೊಠಡಿಗಳನ್ನು ಪಾಠ ಮಾಡುವುದನ್ನು ನಿಲ್ಲಿಸಿ, ಆನ್‌ಲೈನ್ ಪಾಠಕ್ಕೆ ಆದ್ಯತೆ ನೀಡಿ ಎಂದು ಶಿಕ್ಷಣ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.
300 ವಿಮಾನ ಸಂಚಾರ ವ್ಯತ್ಯಯ
ಕಳಪೆ ವಾಯು ಗುಣಮಟ್ಟ ಹಾಗೂ ಚಳಿಯಿಂದಾಗಿ ದಟ್ಟವಾದ ಕಪ್ಪು ಬಣ್ಣದ ಮಂಜು ರಾಷ್ಟ್ರ ರಾಜಧಾನಿಯ ಆಕಾಶ ಹಾಗೂ ರಸ್ತೆಗಳನ್ನು ಆವರಿಸಿದೆ. ಹೀಗಾಗಿ, ನಿತ್ಯ ಸಂಚರಿಸುವ ಕಾರು, ಲಾರಿಗಳು ಹೆಡ್‌ಲೈಟ್ ‘ಡಿಮ್ ಹಾಗೂ ಡಿಪ್’ ಮಾಡಿಕೊಂಡು ಸಾಗುತ್ತಿವೆ. ಮತ್ತೊಂದೆಡೆ, ದೆಹಲಿವಿಮಾನ ನಿಲ್ದಾಣದಲ್ಲಿಸುಮಾರು 300 ವಿಮಾನಗಳ ಹಾರಾಟದ ಸಮಯದಲ್ಲಿವ್ಯತ್ಯಯವಾಗಿದೆ. ದೆಹಲಿಗೆ ಆಗಮಿಸುವ 115 ವಿಮಾನಗಳು ಹಾಗೂ ಹೊರಡಬೇಕಿದ್ದ 226 ವಿಮಾನಗಳ ಸಮಯ ಬದಲಾಗಿ, ಪ್ರಯಾಣಿಕರು ಪರದಾಡಿದ್ದಾರೆ.
ಗ್ಯಾಸ್ ಚೇಂಬರ್ ಎಂದ ಪ್ರಿಯಾಂಕಾ ವಾದ್ರಾ
ಕೇರಳದ ವಯನಾಡಿನಿಂದ(ಎಕ್ಯುಐ-35) ಹೊಸದೆಹಲಿಗೆ ಬಂದ ಕೂಡಲೇ ‘ಗ್ಯಾಸ್ ಚೇಂಬರ್’ ಪ್ರವೇಶಿಸಿದಂತೆ ಆಯಿತು. ವಿಮಾನದಿಂದ ಗಮನಿಸಿದಾಗ ದೆಹಲಿಯ ಮೇಲೆ ದೊಡ್ಡ ಮಟ್ಟದ ‘ದಟ್ಟ ಹೊಗೆಯ ಹಾಸಿಗೆ’ ಹಾಸಿದಂತೆ ಕಾಣುತ್ತದೆ. ಇದು ಬಹಳ ಆತಂಕ ಮೂಡಿಸಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಹೇಳಿದ್ದಾರೆ.