Black pepper : ಮಾರುಕಟ್ಟೆಯಲ್ಲಿ ಕಪ್ಪು ಬಂಗಾರವೆಂದೇ ಕರೆಸಿಕೊಳ್ಳುವ ಕಾಳುಮೆಣಸು ದರ ಈಗ ಪ್ರತಿ ಕ್ವಿಂಟಾಲ್‌ಗೆ 10 ಸಾವಿರ ರೂಗಳಷ್ಟು ಜಾಸ್ತಿಯಾಗಿದೆ. ಇದರಿಂದ ಬೆಳೆಗಾರರು ದಾಸ್ತಾನು ಮಾಡಿದ್ದ ಬೆಳೆ ಈಗ ಟೆಂಡರ್ ಮಾರುಕಟ್ಟೆಗೆ ಬರುವ ಪ್ರಮಾಣ ಕೂಡ ಹೆಚ್ಚಳವಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ಹೌದು.. ಕಳೆದ 15 ದಿನಗಳ ಹಿಂದಿನವರೆಗೂ ಕ್ವಿಂ. ಗೆ ಗರಿಷ್ಟ 49 ಸಾವಿರ ರೂ. ಹಾಗೂ ಸರಾಸರಿ 45 ಸಾವಿರ ರೂ. ಆಸುಪಾಸು ದರ ಲಭ್ಯವಾಗುತ್ತಿತ್ತು. ಆದರೆ ಈಗ ಕ್ವಿಂ.ಗೆ 10 ಸಾವಿರ ರೂ. ಗಳಷ್ಟು ತೇಜಿಯಾಗಿದ್ದು ಮಾರುಕಟ್ಟೆಯಲ್ಲಿ ಸಂಚಲನ ಉಂಟು ಮಾಡಿದೆ. ಕಳೆದ ಎರಡು ವಾರದಲ್ಲಿ ಕ್ರಮೇಣ ಏರಿಕೆಯಾಗುತ್ತಾ ಬಂದ ದರ ಈ ವಾರದ ಪ್ರಾರಂಭಕ್ಕೆ ಕೂಡ ಮುಂದುವರೆದಿದೆ.
ಸೋಮವಾರದ ಟೆಂಡರ್ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಕಾಳುಮೆಣಸಿಗೆ ಗರಿಷ್ಠ 61,599 ರೂ. ಲಭ್ಯವಾಗಿದೆ. ಹಾಗೆಂದು ಕಾಳುಮೆಣಸು ದರ ಈ ಗರಿಷ್ಠ ಮೊತ್ತಕ್ಕೆ ತೇಜಿ ಆಗಿರುವುದು ಇದೇ ಮೊದಲೇನು ಅಲ್ಲ. ಆರು ವರ್ಷಗಳ ಹಿಂದೆ 2017 ರಲ್ಲಿ ಇದಕ್ಕಿಂತ ಹೆಚ್ಚಿನ ದರ ಲಭ್ಯವಾಗಿತ್ತು. ಅದು ಕೂಡ ಕೆಲ ತಿಂಗಳುಗಳ ಕಾಲ ಮುಂದುವರೆದು ಅದುವರೆಗೆ ದಾಸ್ತಾನು ಮಾಡಿದ ಬೆಳೆಗಾರರು ಖುಷಿ ಪಡುವಂತಾಯಿತು.
ಆಗ ಸಾಕಷ್ಟು ಬೆಳೆಗಾರರು ದಾಸ್ತಾನು ಮಾಡಿದ್ದ ಕಾಳುಮೆಣಸನ್ನು ಮಾರುಕಟ್ಟೆಗೆ ತಂದು ವಿಕ್ರಿ ಮಾಡಿ ಉತ್ತಮ ದರ ಪಡೆದಿದ್ದರೆ, ಮತ್ತಷ್ಟು ಬೆಳೆಗಾರರು ಇನ್ನಷ್ಟು ತೇಜಿಯಾಗಬಹುದು ನಿರೀಕ್ಷೆ ಮಾಡುವಂತೆಯೂ ಆಗಿತ್ತು.
ಆದರೆ ಆಗ ಕೆಲ ತಿಂಗಳುಗಳ ನಂತರ ಇಳಿಕೆ ಕಂಡಿದ್ದ ಕಾಳು ಮೆಣಸಿನ ದರವು ಕ್ವಿಂ.ಗೆ 40- 45 ಸಾವಿರ ರೂಗಳಿಗೆ ಕುಸಿತ ಕಂಡು ಬೆಳೆಗಾರರು ನಿರಾಸೆ ವ್ಯಕ್ತಪಡಿಸುವಂತಾಗಿತ್ತು. ಆದರೆ ಬರೋಬ್ಬರಿ ಆರು ವರ್ಷದ ನಂತರ ಈಗ ಪುನಃ 60 ಸಾವಿರ ರೂಗಳ ಗಡಿಯನ್ನು ದಾಟಿದ ದರ ಈವರೆಗೆ ದಾಸ್ತಾನು ಮಾಡಿದ ಬೆಳೆಗಾರರ ಮಂದಹಾಸಕ್ಕೆ ಕಾರಣವಾಗಿದೆ.
ಕಾಳುಮೆಣಸು ದರ ಮತ್ತೊಮ್ಮೆ 60 ಸಾವಿರ ರೂ. ತೇಜಿ ಆದ ನಂತರ ವಿಕ್ವಿ ಮಾರುಕಟ್ಟೆಯಲ್ಲಿ ಆವಕದ ಪ್ರಮಾಣ ಕೂಡ ಈಗ ಸಾಕಷ್ಟು ಹೆಚ್ಚಳವಾಗಿದೆ.ಇದಕ್ಕೂ ಮುಂಚೆ ಟೆಂಡರ್ ಮಾರುಕಟ್ಟೆ ಯಲ್ಲಿ ಕೇವಲ ಕೆಲವೇ ಕ್ವಿಂ.ಗಳಷ್ಟು ಮಾತ್ರ ಆವಕವಾಗುತ್ತಿತ್ತು. ಅದರಲ್ಲೂ ಕೆಲವು ದಿನ ಇಲ್ಲವೇ ಇಲ್ಲ ಎನ್ನುವಂತೆ ಆಗುತ್ತಿತ್ತು.
ಆದರೆ ಕಳೆದೊಂದು ಹತ್ತು ದಿನಗಳ ಈಚೆಗೆ ಆವಕ ಸಾಕಷ್ಟು ಹೆಚ್ಚಳವಾಗಿದ್ದು ಅಡಕೆ ಮಾರುಕಟ್ಟೆಯಲ್ಲಿ ಕಾಳು ಮೆಣಸು ವಿಕ್ರಿಗೂ ಜಾಗ ಮಾಡಿಕೊಡಬೇಕು ಎನ್ನುವಂತೆ ಆಗಿದೆ. ಆದರೆ ಶಿರಸಿ ಸಹಕಾರಿ ಸಂಘ ಸಂಸ್ಥೆಗಳ ಮಾರುಕಟ್ಟೆಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಕಾಳುಮೆಣಸಿನ ವ್ಯಾಪಾರ ನಡೆಯುತ್ತಿದ್ದು ಬೆಳೆಗಾರರಿಗೆ ಅನುಕೂಲವಾಗಿದೆ.
ಒಟ್ಟಾರೆ ಆರು ವರ್ಷದ ಹಿಂದಿನ ದರಕ್ಕೆ ಕಾಳುಮೆಣಸುಪುನಃ ತಲುಪಿದ ಬಗ್ಗೆ ಕೃಷಿಕರ ವಲಯದಲ್ಲಿ ಖುಷಿ ಇದ್ದರೂ ಈ ದರ ಇನ್ನಷ್ಟು ತೇಜಿ ಆಗಬಹುದೇ ಎನ್ನುವ ನಿರೀಕ್ಷೆಗೂ ಕಾರಣವಾಗುತ್ತಿದೆ. ಅಲ್ಲದೆ ಇನ್ನೆಷ್ಟು ದಿನ ಮುಂದುವರಿಯಬಹುದು ಎಂಬ ಪ್ರಶ್ನೆ ಬೆಳೆಗಾರರಲ್ಲಿ ಮೂಡುವಂತೆ ಮಾಡಿದೆ.