Karnataka dengue cases: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರುತ್ತಿದೆ.

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕೇಸ್ಗಳ ಸಂಖ್ಯೆ ಏರಿಕೆಯಾಗಿದೆ. ಪ್ರಸ್ತುತ ರಾಜ್ಯದಲ್ಲಿ 6,806 ಪ್ರಕರಣಗಳು ಪತ್ತೆಯಾಗಿದ್ದು, ಆ ಪೈಕಿ 3,454 ಕೇಸ್ಗಳು ಬೆಂಗಳೂರಿನಲ್ಲೇ ಇವೆ.
ಪ್ರಕರಣಗಳ ಸಂಖ್ಯೆ ಏರುತ್ತಿರುವುದು ಆತಂಕ ಮೂಡಿಸಿದೆ.
2022ರಲ್ಲಿ ಇದೇ ವೇಳೆಗೆ ರಾಜ್ಯದಲ್ಲಿ 5,500 ಪ್ರಕರಣಗಳು ಪತ್ತೆಯಾಗಿದ್ದವು. ರಾಜಧಾನಿ ಬೆಂಗಳೂರಿನಲ್ಲಿ 1,058 ಪ್ರಕರಣಗಳು ವರದಿಯಾಗಿದ್ದವು. 2021ರ ಸೆಪ್ಟೆಂಬರ್ ಅಂತ್ಯಕ್ಕೆ ನಗರದಲ್ಲಿ 520 ಪ್ರಕರಣಗಳು ದಾಖಲಾಗಿದ್ದವು.
ರಾಜ್ಯದಲ್ಲಿ ಉಂಟಾಗುತ್ತಿರುವ ಹಮಾಮಾನ ಬದಲಾವಣೆಯಿಂದಾಗಿ ಡೆಂಗ್ಯೂ ಪ್ರಕರಣಗಳು ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಮಳೆ ಕಡಿಮೆ. ಆದರೂ, ಡೆಂಗ್ಯೂ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ. ಕಾರಣ, ಮಳೆ ನಿರಂತರವಾಗಿ ಬೀಳದೇ ಇರುವುದರಿಂದ ಸೊಳ್ಳೆಗಳು ಮೊಟ್ಟೆ ಇಡುವುದಕ್ಕೆ ಪೂರಕ ವಾತಾವರಣ ನಿರ್ಮಾಣಗೊಂಡಿವೆ. ನಿರಂತರವಾಗಿ ಮಳೆ ಸುರಿಯುತ್ತಿದ್ದರೆ, ನೀರು ನಿಲ್ಲುತ್ತಿರಲಿಲ್ಲ, ಮೊಟ್ಟೆಗಳು ನೀರಿನಲ್ಲಿ ಹೋಗುತ್ತಿದ್ದವು ಎನ್ನುತ್ತಾರೆ ವೈದ್ಯರು.
ಡೆಂಗ್ಯೂ ಜ್ವರದ ಲಕ್ಷಣಗಳೇನು?: ಜ್ವರ, ತಲೆನೋವು, ವಿಪರೀತ ಶೀತ, ಗಂಟಲು ನೋವು, ವಾಂತಿ, ಹೊಟ್ಟೆನೋವು, ಮೈ-ಕೈ ನೋವು, ಅತಿಸಾರ, ಹೃದಯ ಬಡಿತ ಹೆಚ್ಚಾಗುವುದು, ಮೈಮೇಲೆ ಅಲರ್ಜಿ ರೀತಿಯಲ್ಲಿ ಗುಳ್ಳೆಗಳು ಬರುವುದು ಇದರ ಲಕ್ಷಣಗಳು.
ಸೊಳ್ಳೆಗಳ ಮತ್ತು ಡೆಂಗ್ಯೂ ಕೇಸ್ಗಳ ನಿಯಂತ್ರಣ ಹೇಗೆ?: ಸೊಳ್ಳೆಗಳನ್ನು ನಿಯಂತ್ರಿಸಬೇಕು. ಸೊಳ್ಳೆ ಕಚ್ಚದಂತೆ ಎಚ್ಚರ ವಹಿಸಬೇಕು. ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಉತ್ತಮ. ನೀರು ಶೇಖರಣೆಗೊಳ್ಳುವ ತೊಟ್ಟಿ, ಟ್ಯಾಂಕ್‌ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಿಡಿ. ಮನೆಯ ಸುತ್ತ ಹಾಗೂ ಟೆರೆಸ್ ಮೇಲೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ತೆಂಗಿನ ಚಿಪ್ಪು, ಟಯರ್ ನಂತಹ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಮನೆ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.
ಡೆಂಗ್ಯೂ ಬಗ್ಗೆ ಜಾಗೃತಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ಡೆಂಗ್ಯೂ ಕಾಯಿಲೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಈ ಸಂಬಂಧ ಶಾಲೆ, ಕಾಲೇಜು ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾಗಳನ್ನು ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಸಿಬ್ಬಂದಿ ಮನೆ-ಮನೆಗೆ ತೆರಳಿ ಲಾರ್ವ ಸಮೀಕ್ಷೆ ಮಾಡುತ್ತಿದ್ದಾರೆ. ಅತಿ ಹೆಚ್ಚು ಪ್ರಕರಣಗಳು ವರದಿಯಾದ ಪ್ರದೇಶಗಳ 100 ಮೀಟರ್ ಸುತ್ತ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿಯ ಆರೋಗ್ಯ ಇಲಾಖೆಯ ವಿಶೇಷ ಆಯುಕ್ತ ಡಾ. ಕೆ ವಿ ತ್ರಿಲೋಕಚಂದ್ರ ತಿಳಿಸಿದ್ದಾರೆ.
ಈ ಹಿಂದೆ ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾದ ಡೆಂಗ್ಯೂ ಪ್ರಕರಣಗಳು ಮಾತ್ರ ಲೆಕ್ಕಕ್ಕೆ ಸಿಗುತ್ತಿತ್ತು. ಆದರೆ, ಈ ವರ್ಷ ಖಾಸಗಿ ಆಸ್ಪತ್ರೆಗಳಿಂದಲೂ ಡೇಟಾ ಸಂಗ್ರಹ ಮಾಡಲಾಗುತ್ತಿದೆ. ಹಾಗಾಗಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಡೆಂಗ್ಯೂ ಕಾಯಿಲೆಗೆ ಚಿಕಿತ್ಸೆ ನೀಡಲು ಬಿಬಿಎಂಪಿ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ದಾಖಲಾದವರು ಕೂಡ ಎರಡು-ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಾರೆ. ಸಾವಿನ ಬಗ್ಗೆ ಇದುವರೆಗೆ ವರದಿಯಾಗಿಲ್ಲ. ನಗರದ ಪೂರ್ವ, ದಕ್ಷಿಣ ಮತ್ತು ಮಹದೇವಪುರ ವಾರ್ಡ್‌ನಲ್ಲಿ ಹೆಚ್ಚಿನ ಪ್ರಕರಣಗಳು ಕಾಣಿಸಿಕೊಂಡಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಡೆಂಗ್ಯೂ ನಿಯಂತ್ರಣ ಮತ್ತು ಚಿಕಿತ್ಸೆಗೆ ಬಿಬಿಎಂಪಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಈ ಹಿಂದೆ ಖಾಸಗಿ ಆಸ್ಪತ್ರೆಗಳಿಂದ ಡೆಂಗ್ಯೂ ಅಂಕಿ-ಅಂಶಗಳು ಸಂಗ್ರಹವಾಗುತ್ತಿರಲಿಲ್ಲ. ಈ ವರ್ಷ ಹೆಚ್ಚುವರಿ 600 ಕೇಂದ್ರಗಳಿಂದ ಮಾಹಿತಿ ಸಂಗ್ರಹವಾಗುತ್ತಿದೆ. ಈ ವರ್ಷ ವಾತಾವರಣ ಡೆಂಗ್ಯೂ ಸೋಂಕು ಹೆಚ್ಚಳಕ್ಕೆ ಪೂರಕವಾಗಿರುವುದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದಿದ್ದಾರೆ ಡಾ. ತ್ರಿಲೋಕಚಂದ್ರ.
ಆತಂಕ ಬೇಡ: ಡೆಂಗ್ಯೂ ಜ್ವರದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಮೂರು ದಿನಗಳ ನಿರಂತರ ಜ್ವರ, ಮೈಕೈ ನೋವು, ತಲೆ ನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಸೊಳ್ಳೆಗಳು ಕಚ್ಚದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk
ನಮ್ಮ Facebook page: https://www.facebook.com/samagrasudii