ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಘೋಷಣೆ: ಕಾಂಗ್ರೆಸ್ ನಡೆ ಖಂಡನೀಯ – ಬಿಜೆಪಿ ವಕ್ತಾರ ನಾಗರಾಜ್ ಬೇದ್ರೇ.

ಚಿತ್ರದುರ್ಗ, ಡಿ.16:

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭಾನುವಾರ ನಡೆದ ಕಾಂಗ್ರೆಸ್ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಘೋಷಣೆಗಳನ್ನು ಕೂಗಿರುವುದನ್ನು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಚುನಾವಣಾ ಆಯೋಗ ಹಾಗೂ ಬಿಜೆಪಿ ವಿರುದ್ಧ ಮತಗಳ್ಳತನ ಆರೋಪ ಹೊರಿಸಿ ರಾಮಲೀಲಾ ಮೈದಾನದಲ್ಲಿ ನಡೆದ “ವೋಟ್ ಚೋರ್ – ಗದ್ದಿ ಚೋಡ್” ರ್ಯಾಲಿಯಲ್ಲಿ, ಜೈಪುರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರ ಗುಂಪು ಪ್ರಧಾನಿ ಮೋದಿ ವಿರುದ್ಧ “ಸಮಾಧಿ” (ಕಬ್ರ್) ಘೋಷಣೆಗಳನ್ನು ಕೂಗಿರುವ ದೃಶ್ಯಗಳನ್ನು ಮಾಧ್ಯಮಗಳ ಮೂಲಕ ದೇಶದ ಜನತೆ ನೋಡಿದ್ದಾರೆ ಎಂದು ಹೇಳಿದರು. ಇದು ಅತ್ಯಂತ ಕೀಳು ಮಟ್ಟದ ರಾಜಕಾರಣವಾಗಿದ್ದು, ಕಾಂಗ್ರೆಸ್‌ನ ದುರಹಂಕಾರಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ವಿರುದ್ಧದ ಈ ಅವಹೇಳನಕಾರಿ ಘೋಷಣೆಗಳ ಬಗ್ಗೆ ಲೋಕಸಭೆಯಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ವಿಷಯ ಪ್ರಸ್ತಾಪಿಸಿ, ಜಾಗತಿಕ ಮಟ್ಟದಲ್ಲಿ ಅತಿ ಪ್ರಭಾವಶಾಲಿ ನಾಯಕನಾಗಿರುವ ಹಾಗೂ 140 ಕೋಟಿ ಭಾರತೀಯರ ಪ್ರಧಾನಿಯಾಗಿರುವ ಮೋದಿಯವರ ವಿರುದ್ಧ ಸಮಾಧಿ ತೋಡುವ ಘೋಷಣೆ ಕೂಗಿರುವುದು ಅತ್ಯಂತ ದುರಾದೃಷ್ಟಕರವಾಗಿದೆ. ಈ ವಿಚಾರಕ್ಕೆ ಕಾಂಗ್ರೆಸ್ ಪಕ್ಷ ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ ಎಂದು ನಾಗರಾಜ್ ಬೇದ್ರೇ ತಿಳಿಸಿದ್ದಾರೆ.

ಇನ್ನು ರಾಜ್ಯಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಚಿವ ಜೆ.ಪಿ. ನಡ್ಡಾ ಅವರು ಈ ವಿಷಯವನ್ನು ಪ್ರಸ್ತಾಪಿಸಿ, ಪ್ರಧಾನಮಂತ್ರಿಯ ಸಾವನ್ನು ಬಯಸುವ ರೀತಿಯ ಘೋಷಣೆಗಳು ಕಾಂಗ್ರೆಸ್‌ನ ಮಾನಸಿಕತೆ ಮತ್ತು ರಾಜಕೀಯ ದಿವಾಳಿತನವನ್ನು ಪ್ರತಿಬಿಂಬಿಸುತ್ತವೆ ಎಂದು ಕಟುವಾಗಿ ಟೀಕಿಸಿದ್ದಾರೆ.

ಈ ಘಟನೆಯ ಕುರಿತು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ರಾಷ್ಟ್ರದ ಜನತೆಗೆ ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ ಒತ್ತಾಯಿಸಿದ್ದಾರೆ.

Views: 31

Leave a Reply

Your email address will not be published. Required fields are marked *