ಹಳದಿ ಕಲ್ಲಂಗಡಿ ಬೆಳೆದು ಗಮನ ಸೆಳೆದ ಧಾರವಾಡದ ಯುವ ರೈತ: ಲಾಭದಾಯಕವಾಯ್ತು ಹೊಸ ಚಿಂತನೆ.

ಆಧುನಿಕ ಬೇಸಾಯ ಪದ್ಧತಿಯಿಂದಾಗಿ ನದಿ ತೀರದ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದ ಕಲ್ಲಗಂಡಿ ಹಣ್ಣು ಧಾರವಾಡದಂಥ ಅರೆ ಮಲೆನಾಡು ಜಿಲ್ಲೆಗೂ ಕೆಲ ವರ್ಷಗಳ ಹಿಂದೆ ಪ್ರವೇಶ ಪಡೆದಿದೆ. ಆದರೆ, ಎಲ್ಲೆಡೆ ಕೆಂಪು ಬಣ್ಣದ ಸಾಂಪ್ರದಾಯಿಕ ತಳಿಯು ಪ್ರಚಲಿತವಿದ್ದರೆ, ಧಾರವಾಡದ ರೈತನೋರ್ವ ಹಳದಿ ಬಣ್ಣದ ಕಲ್ಲಂಗಡಿಯನ್ನು ಬೆಳೆದು ಗಮನ ಸೆಳೆದಿದ್ದಾರೆ.

ಧಾರವಾಡದಿಂದ ಸುಮಾರು 12 ಕಿ.ಮೀ. ದೂರದ ಕುರುಬಗಟ್ಟಿ ಗ್ರಾಮದ ಮೈಲಾರ ಗುಡ್ಡಪ್ಪನವರ್ ತಮ್ಮ ಅರ್ಧ ಎಕರೆ ಪ್ರದೇಶದಲ್ಲಿ ಹಳದಿ ಬಣ್ಣದ ಕಲ್ಲಗಂಡಿಯನ್ನು ಯಶಸ್ವಿಯಾಗಿ ಬೆಳೆದಿರುವ ಯುವ ರೈತ. 70 ದಿನಗಳ ಕಾಲಾವಧಿಯ ಈ ಕಲ್ಲಂಗಡಿಯು ಈಗ ಮಾರುಕಟ್ಟೆಗೆ ಹೋಗಲು ಸಿದ್ಧವಾಗಿದೆ. ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಸಹಕಾರದೊಂದಿಗೆ ಹನಿ ನೀರಾವರಿ ಪದ್ಧತಿ ಮೂಲಕ ಹೊಸ ಬೇಸಾಯ ಪದ್ಧತಿಯಲ್ಲಿ ಎಕರೆಗೆ 10-15 ಕ್ವಿಂಟಾಲ್‌ ಕಲ್ಲಂಗಡಿ ಇಳುವರಿಯ ನಿರೀಕ್ಷೆ ಹೊಂದಲಾಗಿದೆ.

ಪದವಿ ಮುಗಿದ ನಂತರ ನೌಕರಿಗೆ ಹೋಗು ಎಂದು ಅಪ್ಪ ಹೇಳಿದರೂ ಮೂಲ ವೃತ್ತಿ ಕೃಷಿ ನನ್ನನ್ನು ಆಕರ್ಷಿಸಿತು. ಇಡೀ ಧಾರವಾಡ ಸುತ್ತಲೂ ಕುರುಬಗಟ್ಟಿ ಹೂವು ಬೆಳೆಯಲು ಪ್ರಸಿದ್ಧಿ. ಹೊಸ ಚಿಂತನೆ ಮಾಡುತ್ತಿದ್ದ ನಾನು, ಮೂರು ವರ್ಷಗಳಿಂದ ಕೆಂಪು ಕಲ್ಲಂಗಡಿ ಬೆಳೆದೆ. ನಂತರ ಹಳದಿ ಬಣ್ಣದ ಕಲ್ಲಗಂಡಿ ಬಗ್ಗೆ ಆಕರ್ಷಿತಗೊಂಡು ಪ್ರಾಯೋಗಿಕವಾಗಿ ಅರ್ಧ ಎಕರೆಯಲ್ಲಿ ಬೆಳೆದಿದ್ದೇನೆ ಎಂದು ರೈತ ಮೈಲಾರ ಗುಡ್ಡಪ್ಪನವರ್ ಟಿವಿ-9 ಡಿಜಿಟಲ್ ಜೊತೆಗೆ ಮಾಹಿತಿ ಹಂಚಿಕೊಂಡರು.

ನಮ್ಮೂರಿನ ಮಣ್ಣು, ಹವಾಮಾನಕ್ಕೆ ಎರಡರಿಂದ-ಮೂರು ಕೆಜಿ ತೂಕದ ಹಣ್ಣು ನಿರೀಕ್ಷೆ ಮಾಡಲಾಗಿತ್ತು. ಆದರೆ, ತೋಟಗಾರಿಕೆ, ಕೃಷಿ ವಿವಿ, ಇಲಾಖೆ ತಂತ್ರಜ್ಞಾನ, ಸಲಹೆ ಮೇರೆಗೆ ಐದರಿಂದ-ಏಳು ಕೆ.ಜಿ. ತೂಕದವರೆಗೂ ಇಳುವರಿ ಬಂದಿದೆ. ಸಾಮಾನ್ಯ ಕಲ್ಲಂಗಡಿ ಕೆಜಿಗೆ ರೂ. 10 ಇದ್ದರೆ, ಹಳದಿ ಕಲ್ಲಂಗಡಿ ಕೆ.ಜಿ. ರೂ. 30 ವರೆಗೂ ಮಾರುತ್ತಿದೆ. ರುಚಿ, ಬಣ್ಣ ಹಾಗೂ ಆರೋಗ್ಯಕರ ಅಂಶಗಳಿಂದ ಈ ಹಣ್ಣಿಗೆ ಹೆಚ್ಚಿನ ಬೆಲೆ ಇದೆ. ಎಕರೆಗೆ ಒಂದು ಲಕ್ಷವರೆಗೂ ವೆಚ್ಚವಾಗಿದ್ದು, ಕನಿಷ್ಠ ನಾಲ್ಕೂವರೆ ಲಕ್ಷ ರೂ ಆದಾಯದ ನಿರೀಕ್ಷೆ ಇದೆ ಎಂದು ಹೇಳಿದರು.

ಲೈಕೋಪಿನ್‌ ಎಂಬ ಅಂಶ ಕಡಿಮೆ ಇರುವುದರಿಂದ ಕಲ್ಲಂಗಡಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದು ಕೆಂಪು ಹಣ್ಣಿಗಿಂತ ಸಿಹಿಯಾಗಿದ್ದು, ಸುವಾಸನೆ ಸಹ ಹೊಂದಿರುತ್ತದೆ. ರೋಗ ನಿರೋಧಕ ಶಕ್ತಿ ಒದಗಿಸುವ ಎ ಮತ್ತು ಸಿ ವಿಟಮಿನ್‌ ಮಾತ್ರವಲ್ಲದೇ, ಕ್ಯಾನ್ಸರ್‌ ಮತ್ತು ಕಣ್ಣಿನ ಕಾಯಿಲೆಯಿಂದ ರಕ್ಷಿಸುವ ಬೀಟಾ-ಕ್ಯಾರೋಟಿನ್‌ ಅಂತಹ ಪ್ರತಿ ರಕ್ಷಣೆಯನ್ನು ದೇಹಕ್ಕೆ ಈ ಹಣ್ಣು ಒದಗಿಸುತ್ತದೆ. ಹೆಚ್ಚಿನ ನೀರಿನಂಶ ಹೊಂದಿರುವುದರಿಂದ ಬೇಸಿಗೆಯ ಬಿಸಿ ವಾತಾವರಣದಲ್ಲಿ ದೇಹವನ್ನು ತಂಪಾಗಿ ಇಡಲು ಈ ಹಣ್ಣು ಸಹಾಯಕಾರಿ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಕೆ. ಸಿ. ಭದ್ರಣ್ಣವರ್ ಹಾಗೂ ಹಿರಿಯ ಸಹಾಯಕ ನಿರ್ದೇಶಕ ಇಮ್ತಿಹಾಜ್‌ ತಿಳಿಸಿದರು.

ಈಗಾಗಲೇ ಹಳದಿ ಬಣ್ಣದ ಕಲ್ಲಂಗಡಿ ಮಾರುಕಟ್ಟೆ ಹೋಗಲು ಸಿದ್ಧವಾಗಿದ್ದು, ಎರಡ್ಮೂರು ದಿನಗಳಲ್ಲಿ ಧಾರವಾಡದಲ್ಲಿ ಲಭ್ಯವಾಗಲಿದೆ. ಬರೀ ಮೈಲಾರ ಮಾತ್ರವಲ್ಲದೇ ಸಮೀಪದ ಬಾಡದ ಕಲ್ಲನಗೌಡ ಪಾಟೀಲ ಅವರು ಸಹ ಇದೇ ಹಳದಿ ಬಣ್ಣದ ಕಲ್ಲಂಗಡಿ ಬೆಳೆದಿದ್ದು ಕೆಲವೇ ದಿನಗಳಲ್ಲಿ ಅದೂ ಸಹ ಮಾರುಕಟ್ಟೆ ಪ್ರವೇಶಿಸಲಿದೆ.

ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು, ರಾಜ್ಯದ ನದಿ ತೀರ ಸೇರಿದಂತೆ ಎಲ್ಲೆಡೆ ಸುಮಾರು ಐದು ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲೂ 87 ಹೆಕ್ಟೇರ್‌ ಪ್ರದೇಶದಲ್ಲಿ ಸಾಂಪ್ರದಾಯಿಕ ಕಲ್ಲಂಗಡಿ ಬೆಳೆಯುತ್ತಿದ್ದು, ಮೊದಲ ಬಾರಿಗೆ ಹಳದಿ ಬಣ್ಣದ ಕಲ್ಲಂಗಡಿ ಬೆಳೆದು ಕುರುಬಗಟ್ಟಿಯ ಮೈಲಾರ ಉಳಿದ ರೈತರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *