ಬೆಂಗಳೂರಿನ ವಿವಿಧೆಡೆಗಳಿಂದ ಸಂಗ್ರಹಿಸಲಾದ ಇಡ್ಲಿ ಮಾದರಿಗಳು ಪ್ರಯೋಗಾಲಯ ಪರೀಕ್ಷೆಯಲ್ಲಿ ಅಸುರಕ್ಷಿತ ಎಂಬುದು ದೃಢಪಟ್ಟ ಬೆನ್ನಲ್ಲೇ ಕರ್ನಾಟಕ ಆರೋಗ್ಯ ಸಚಿವರು ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ರಾಜ್ಯದಾದ್ಯಂತ ಇನ್ಮುಂದೆ ಹೋಟೆಲ್, ರೆಸ್ಟೋರೆಂಟ್, ಉಪಾಹಾರ ಗೃಹಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗುತ್ತಿದೆ ಎಂದು ಅವರು ಘೋಷಣೆ ಮಾಡಿದ್ದಾರೆ.

ಬೆಂಗಳೂರು, ಫೆಬ್ರವರಿ 27: ಬೆಂಗಳೂರಿನ ಕೆಲವು ಹೋಟೆಲ್ ಹಾಗೂ ಉಪಾಹಾರ ಕೇಂದ್ರಗಳಲ್ಲಿ ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸಲಾಗುತ್ತಿದ್ದು, ಅದರಿಂದಾಗಿ ಗ್ರಾಹಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನ ವಿವಿಧೆಡೆಯಿಂದ ಸಂಗ್ರಹಿಸಲಾದ ಇಡ್ಲಿ ಮಾದರಿಗಳಲ್ಲಿ ಸುಮಾರು 51 ರಷ್ಟು ಅಸುರಕ್ಷಿತ ಎಂಬುದು ಆಹಾರ ಇಲಾಖೆಯ ಪ್ರಯೋಗಾಲಯದಲ್ಲಿ ದೃಢಪಟ್ಟ ಬೆನ್ನಲ್ಲೇ ಕರ್ನಾಟಕ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ರಾಜ್ಯದ ಹೋಟೆಲ್, ಉಪಾಹಾರ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗುರುವಾರ ಘೋಷಿಸಿದ್ದಾರೆ.
ಹೋಟೆಲ್, ರಸ್ತೆಬದಿ ತಿಂಡಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್ ಬಳಸುವಂತಿಲ್ಲ. ಇನ್ಮುಂದೆ ಆಹಾರ ತಯಾರಿಕೆ, ವಿತರಣೆ ವೇಳೆ ಪ್ಲಾಸ್ಟಿಕ್ ಬಳಸಬಾರದು ಎಂದು ಗುಂಡೂರಾವ್ ಹೇಳಿದ್ದಾರೆ.
ದಿನೇಶ್ ಗುಂಡೂರಾವ್ ಹೇಳಿದ್ದೇನು?
ಸುಮಾರು 251 ತಿಂಡಿ ಹೋಟೆಲ್, ಅಂಗಡಿಗಳಿಂದ ಸ್ಯಾಂಪಲ್ಸ್ ಪಡೆಯಲಾಗಿತ್ತು. ಅವುಗಳ ಪೈಕಿ 51 ಕಡೆ ಸಂಗ್ರಹಿಸಿದ್ದ ಸ್ಯಾಂಪಲ್ಸ್ ಅಸುರಕ್ಷಿತ ಎಂಬುದು ಪ್ರಯೋಗಾಲಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಅವುಗಳಲ್ಲಿ ಕಾರ್ಸಿನೋಜೆನಿಕ್ ಅಂಶ ಪತ್ತೆಯಾಗಿದೆ. ಪ್ಲಾಸ್ಟಿಕ್ ಬಳಕೆಯಿಂದ ಇಡ್ಲಿಯಲ್ಲಿ ಕಾರ್ಸಿನೋಜೆನಿಕ್ ಅಂಶ ಸೇರಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.
ಕ್ಯಾನ್ಸರ್ಗೆ ಕಾರಣವಾಗುವ ಕಾರ್ಸಿನೋಜೆನಿಕ್
ಈ ಮೊದಲು ಹೋಟೆಲ್‌ಗಳಲ್ಲಿ ಇಡ್ಲಿ ತಯಾರಿಗೆ ಹತ್ತಿ ಬಟ್ಟೆ ಬಳಕೆ ಮಾಡಲಾಗುತ್ತಿತ್ತು. ಆದರೆ ಈಗ ಹೆಚ್ಚಿನ ಕಡೆ ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಇದರಿಂದ ಅನಾರೋಗ್ಯಕ್ಕೆ ಕಾರಣವಾದ ಕಾರ್ಸಿನೋಜೆನಿಕ್ ಅಂಶ ಮಿಶ್ರಣವಾಗುತ್ತಿದೆ. ಪ್ಲಾಸ್ಟಿಕ್ ಬಳಕೆಯಿಂದ ಇಡ್ಲಿಯಲ್ಲಿ ಕಾರ್ಸಿನೋಜೆನಿಕ್ ಅಂಶ ಮಿಶ್ರಣವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ಕಾರ್ಸಿನೋಜೆನಿಕ್ ಅಂಶ ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಅನೇಕ ಹೋಟೆಲ್‌ಗಳಲ್ಲಿ ತಯಾರಾಗುವ ಇಡ್ಲಿ ಅಸುರಕ್ಷಿತ ಎಂಬುದು ಆಹಾರ ಇಲಾಖೆಯ ಪ್ರಯೋಗದಲ್ಲಿ ದೃಢಪಟ್ಟ ತಕ್ಷಣವೇ ಆರೋಗ್ಯ ಸಚಿವರು ಆ ಬಗ್ಗೆ ಕ್ರಮಕ್ಕೆ ಮುಂದಾಗಿದ್ದಾರೆ.
ಬೆಂಗಳೂರಿನ ಹಲವಡೆ ಇತ್ತೀಚೆಗೆ ಇಡ್ಲಿ ತಯಾರಿಸಲು ಬಟ್ಟೆಯ ಬದಲು ಪ್ಲಾಸ್ಟಿಕ್ ಕವರ್ ಬಳಕೆ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಹಾಳೆಯು ಶಾಖಕ್ಕೆ ಒಡ್ಡಿಕೊಂಡು ಹಾನಿಕಾರಕ ವಸ್ತುವನ್ನು ಹೊರಸೂಸುತ್ತಿದೆ. ಇದು ಕ್ಯಾನ್ಸರ್ ಕಾರಕವಾಗಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಆರೋಗ್ಯ ಇಲಾಖೆ ಅನೇಕ ಕಡೆಗಳಿಂದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿತ್ತು. ಆ ಪೈಕಿ ಸುಮಾರು 50 ರಷ್ಟು ಸ್ಯಾಂಪಲ್ಸ್ ವರದಿ ಬಂದಿದ್ದು, ಕಾರ್ಸಿನೋಜೆನಿಕ್ ಅಂಶ ಪತ್ತೆಯಾಗಿದೆ. ಇಡ್ಲಿ ಸ್ಯಾಂಪಲ್ಸ್ ಅಸುರಕ್ಷಿತ ಎಂಬುದು ಗೊತ್ತಾಗಿದೆ. ಉಳಿದ ಸ್ಯಾಂಪಲ್ಸ್ ವರದಿಗಾಗಿ ಕಾಯಲಾಗುತ್ತಿದೆ.