ಕೋಲ್ಕತ್ತಾ:
ಜಾಗತಿಕ ಫುಟ್‌ಬಾಲ್ ಐಕಾನ್ ಲಿಯೋನೆಲ್ ಮೆಸ್ಸಿ ಭಾರತ ಪ್ರವಾಸದ ಅಂಗವಾಗಿ ಇಂದು ಶನಿವಾರ ಕೋಲ್ಕತ್ತಾದ ವಿವೇಕಾನಂದ ಯುವ ಭಾರತಿ (ಸಾಲ್ಟ್ ಲೇಕ್) ಕ್ರೀಡಾಂಗಣಕ್ಕೆ ಆಗಮಿಸಿದ ವೇಳೆ, ಅಭಿಮಾನಿಗಳ ಭಾರೀ ನಿರೀಕ್ಷೆ ನಿರಾಸೆಯಾಗಿ ಪರಿಣಮಿಸಿದ ಘಟನೆ ನಡೆದಿದೆ. ಮೆಸ್ಸಿಯನ್ನು ಸಮೀಪದಿಂದ ಅಥವಾ ದೊಡ್ಡ ಪರದೆಗಳಲ್ಲಿ ಸರಿಯಾಗಿ ನೋಡಲು ಸಾಧ್ಯವಾಗದೆ, ಕೋಪಗೊಂಡ ಪ್ರೇಕ್ಷಕರು ಮೈದಾನಕ್ಕೆ ನುಗ್ಗಿ ಗಲಾಟೆ ನಡೆಸಿದ ಘಟನೆ ಎಲ್ಲರ ಗಮನ ಸೆಳೆದಿದೆ.
ಬೆಳಿಗ್ಗೆ ಸುಮಾರು 11.30ರ ವೇಳೆಗೆ ಲಿಯೋನೆಲ್ ಮೆಸ್ಸಿ, ಸ್ಟ್ರೈಕರ್ ಲೂಯಿಸ್ ಸುವಾರೆಜ್ ಹಾಗೂ ಅರ್ಜೆಂಟೀನಾ ತಂಡದ ಸಹ ಆಟಗಾರ ರೊಡ್ರಿಗೋ ಡಿ ಪಾಲ್ ಅವರೊಂದಿಗೆ ಕ್ರೀಡಾಂಗಣಕ್ಕೆ ಪ್ರವೇಶಿಸಿದರು. ಕೆಲ ನಿಮಿಷಗಳ ಕಾಲ ಮೈದಾನದಲ್ಲಿ ಓಡಾಡಿದ ಮೆಸ್ಸಿ ಅಭಿಮಾನಿಗಳಿಗೆ ಕೈ ಬೀಸಿದರು. ಆದರೆ ಅವರನ್ನು ವಿಐಪಿ ಗಣ್ಯರು, ಸಂಘಟಕರು ಮತ್ತು ಭದ್ರತಾ ಸಿಬ್ಬಂದಿ ಸುತ್ತುವರೆದಿದ್ದರಿಂದ ಗ್ಯಾಲರಿಗಳಲ್ಲಿದ್ದ ಸಾವಿರಾರು ಪ್ರೇಕ್ಷಕರಿಗೆ ಸ್ಪಷ್ಟವಾಗಿ ಕಾಣಿಸಲಿಲ್ಲ.
ಮೆಸ್ಸಿಯನ್ನು ನೇರವಾಗಿ ನೋಡಬೇಕೆಂದು ಸಾವಿರಾರು ರೂಪಾಯಿ ನೀಡಿ ಟಿಕೆಟ್ ಖರೀದಿಸಿ ಬೆಳಿಗ್ಗೆಯಿಂದ ಕಾಯುತ್ತಿದ್ದ ಅಭಿಮಾನಿಗಳು, ದೊಡ್ಡ ಪರದೆಗಳಲ್ಲಿಯೂ ಸಮರ್ಪಕ ದೃಶ್ಯ ಸಿಗದಿದ್ದರಿಂದ ಆಕ್ರೋಶಗೊಂಡರು. “ನಮಗೆ ಮೆಸ್ಸಿ ಬೇಕು” ಎಂಬ ಘೋಷಣೆಗಳು ಕ್ರೀಡಾಂಗಣದಲ್ಲಿ ಮೊಳಗಿದವು. ಆದರೆ ಕೆಲವೇ ನಿಮಿಷಗಳಲ್ಲಿ ಮೆಸ್ಸಿಯನ್ನು ಹೆಚ್ಚುವರಿ ಭದ್ರತೆಯೊಂದಿಗೆ ಕ್ರೀಡಾಂಗಣದಿಂದ ಹೊರಗೆ ಕರೆದೊಯ್ಯಲಾಯಿತು.
ಇದರಿಂದ ನಿರಾಶೆಗೊಂಡ ಅಭಿಮಾನಿಗಳು ಮೈದಾನಕ್ಕೆ ನುಗ್ಗಿ, ಪ್ಲಾಸ್ಟಿಕ್ ಕುರ್ಚಿಗಳು, ಬ್ಯಾನರ್‌ಗಳು ಮತ್ತು ಹೋರ್ಡಿಂಗ್‌ಗಳನ್ನು ಹಾನಿಗೊಳಿಸಿದರು. ಕೆಲವರು ಬ್ಯಾರಿಕೇಡ್‌ಗಳನ್ನು ಹರಿದು ಒಳನುಗ್ಗಿದರೆ, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆ ಹೆಚ್ಚಿಸಲಾಗಿದ್ದರಿಂದ ದೊಡ್ಡ ಅನಾಹುತ ತಪ್ಪಿತು.
ಮಧ್ಯರಾತ್ರಿಯಿಂದಲೇ ಕೊರೆಯುವ ಚಳಿಯನ್ನು ಲೆಕ್ಕಿಸದೆ ಸಾವಿರಾರು ಫುಟ್‌ಬಾಲ್ ಅಭಿಮಾನಿಗಳು ಮೆಸ್ಸಿಯನ್ನು ಒಂದು ನೋಟ ನೋಡುವ ಆಸೆಯಿಂದ ಕಾದು ಕುಳಿತಿದ್ದರು. ಭಾರತದಲ್ಲಿ ನಡೆಯುತ್ತಿರುವ ಗೋಟ್ ಇಂಡಿಯಾ ಟೂರ್ 2025 ಕಾರ್ಯಕ್ರಮದ ಭಾಗವಾಗಿ ಕೋಲ್ಕತ್ತಾಗೆ ಆಗಮಿಸಿದ್ದ ಮೆಸ್ಸಿಗೆ ಭರ್ಜರಿ ಸ್ವಾಗತ ದೊರಕಿದ್ದರೂ, ಇಂದಿನ ಗಲಾಟೆ ಅವರ ಭಾರತ ಭೇಟಿಯಲ್ಲಿ ಒಂದು ಕಪ್ಪುಚುಕ್ಕೆಯಾಗಿ ಉಳಿಯುವಂತಾಯಿತು.
Views: 13