ಭಾರತೀಯರ ಜಗದ್ವಿಖ್ಯಾತ ಅತಿದೊಡ್ಡ ಹಬ್ಬವಾದ ದೀಪಾವಳಿ ಯುನೆಸ್ಕೋದ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿ ಪಟ್ಟಿಗೆ ಸೇರ್ಪಡೆಯಾಗಿದೆ. ದೆಹಲಿಯ ಕೆಂಪುಕೋಟೆಯಲ್ಲಿ ನಡೆಯುತ್ತಿರುವ ಯುನೆಸ್ಕೋದ ಅಂತರಸರ್ಕಾರಿ ಸಮಿತಿಯ 20ನೇ ಅಧಿವೇಶನದಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.
ಡಿಸೆಂಬರ್ 8 ರಿಂದ 13ರವರೆಗೆ ನಡೆಯುತ್ತಿರುವ ಈ ಅಧಿವೇಶನವನ್ನು ಭಾರತ ಮೊದಲ ಬಾರಿಗೆ ಆತಿಥೇಯತೆ ವಹಿಸಿದೆ. ದೀಪಾವಳಿ ಹಬ್ಬವು ಯುನೆಸ್ಕೋ ಪಟ್ಟಿಗೆ ಸೇರಿಸಲಾಗಿದೆ ಎನ್ನುವ ಘೋಷಣೆ ಮಾಡಿದ ತಕ್ಷಣ, ಕೆಂಪುಕೋಟೆ ಪರಿಸರದಲ್ಲಿ ‘ವಂದೇ ಮಾತರಂ’ ಮತ್ತು ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಗಳು ಘೋಷಣೆಗಳಾಗಿ ಮೊಳಗಿದವು.
ಪ್ರಸ್ತುತ ಭಾರತವು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿ ಪಟ್ಟಿಯಲ್ಲಿ 15 ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಇವುಗಳಲ್ಲಿ ಕುಂಭಮೇಳ, ಕೋಲ್ಕತ್ತಾದ ದುರ್ಗಾ ಪೂಜೆ, ಗುಜರಾತಿನ ಗರ್ಭಾ ನೃತ್ಯ, ಯೋಗ, ವೇದಪಠಣ ಸಂಪ್ರದಾಯ, ರಾಮಲೀಲೆ ಮೊದಲಾದವು ಸೇರಿವೆ. ಇದೀಗ ದೀಪಾವಳಿಯ ಸೇರ್ಪಡೆ ದೇಶದ ಸಂಸ್ಕೃತಿಯ ಜಾಗತಿಕ ಮಾನ್ಯತೆಯನ್ನು ಮತ್ತಷ್ಟು ವಿಸ್ತರಿಸಿದೆ.
ಈ ಮಹತ್ವದ ಸಾಧನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದು, ದೀಪಾವಳಿ ನಮ್ಮ ಸಂಸ್ಕೃತಿ, ನೀತಿ ಮತ್ತು ನಾಗರಿಕತೆಯ ಆತ್ಮವಾಗಿದ್ದು, ಜ್ಞಾನೋದಯ ಮತ್ತು ಸದಾಚಾರದ ಸಂಕೇತ ಎಂದಿದ್ದಾರೆ.
ಯುನೆಸ್ಕೋ ಪಟ್ಟಿಗೆ ದೀಪಾವಳಿ ಸೇರ್ಪಡೆ ಹಬ್ಬದ ಜಾಗತಿಕ ಜನಪ್ರಿಯತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ. “ಪ್ರಭು ಶ್ರೀರಾಮನ ಆದರ್ಶಗಳು ನಮಗೆ ಸದಾ ಮಾರ್ಗದರ್ಶನ ನೀಡಲಿ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
Views: 23