ಭಾರತದ ಶಾಸಕರ ಆಸ್ತಿ ವರದಿ ಬಿಡುಗಡೆಯಾಗಿದ್ದು, ಪರಾಗ್ ಶಾ ಮೊದಲ ಸ್ಥಾನದಲ್ಲಿದ್ದಾರೆ. ಡಿ.ಕೆ.ಶಿವಕುಮಾರ್ 2ನೇ ಸ್ಥಾನದಲ್ಲಿದ್ದು, ನಿರ್ಮಲ್ ಕುಮಾರ್ ಧಾರಾ ಅತ್ಯಂತ ಬಡ ಶಾಸಕರಾಗಿದ್ದಾರೆ.

ನವದೆಹಲಿ (ಮಾ.20): ಭಾರತದ ಎಲ್ಲಾ ರಾಜ್ಯಗಳ ಶಾಸಕರ ಸಂಪತ್ತಿನ ಕುರಿತ ವರದಿಯೊಂದು ಬಿಡುಗಡೆಯಾಗಿದ್ದು, ಮುಂಬೈನ ಘಾಟ್ಕೋಪರ್ ಕ್ಷೇತ್ರ ಪ್ರತಿನಿಧಿಸುವ ಬಿಜೆಪಿಯ ಪರಾಗ್ ಶಾ 3383 ಕೋಟಿ ರು. ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಕೆಪಿಸಿಸಿ ಅಧ್ಯಕ್ಷ, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 1413 ಕೋಟಿ ರು. ಆಸ್ತಿಯೊಂದಿಗೆ 2ನೇ ಸ್ಥಾನ ಪಡೆದಿದ್ದಾರೆ. ಇನ್ನು ಕರ್ನಾಟಕದವರೇ ಆದ ಗೌರಿಬಿದನೂರು ಕ್ಷೇತ್ರದ ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ 1,267 ಕೋಟಿ ಆಸ್ತಿಯೊಂದಿಗೆ 3ನೇ ಸ್ಥಾನ ಪಡೆದಿದ್ದಾರೆ.
ಟಾಪ್- 10 ಪಟ್ಟಿಯಲ್ಲಿ ರಾಜ್ಯದ ನಾಲ್ವರು ।
ವಿಶೇಷವೆಂದರೆ ಟಾಪ್ 10 ಶ್ರೀಮಂತರಲ್ಲಿ ಕರ್ನಾಟಕದ ನಾಲ್ವರು ಸ್ಥಾನ ಪಡೆದಿದ್ದಾರೆ. ಕಾಂಗ್ರೆಸ್ನ ಪ್ರಿಯಾಕೃಷ್ಣ 1156 ಕೋಟಿ ರು.ನೊಂದಿಗೆ 4ನೇ ಸ್ಥಾನದಲ್ಲಿ ಮತ್ತು ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ನ ಬೈರತಿ ಸುರೇಶ್ 648 ಕೋಟಿ ರು.ನೊಂದಿಗೆ 10ನೇ ಸ್ಥಾನ ಪಡೆದಿದ್ದಾರೆ.
ಇನ್ನು ಪಶ್ಚಿಮ ಬಂಗಾಳ ರಾಜ್ಯದ ಇಂಡಸ್ ಕ್ಷೇತ್ರದ ಬಿಜೆಪಿ ಶಾಸಕ ನಿರ್ಮಲ್ ಕುಮಾರ್ ಧಾರಾ ಅವರು ಅತ್ಯಂತ ಬಡ ಶಾಸಕರಾಗಿದ್ದಾರೆ. ಇವರ ಒಟ್ಟು ಆಸ್ತಿ ಕೇವಲ 1,700 ರು.
ಅಸೋಸಿಯೇಷನ್ ಫಾರ್ ಡೆಮೊಕ್ರಟಿಕ್ ರಿಫಾರ್ಮ್ಸ್ (ಎಡಿಆರ್) 28 ರಾಜ್ಯ, 3 ಕೇಂದ್ರಾಡಳಿತ ಪ್ರದೇಶದಲ್ಲಿನ ಒಟ್ಟು 4092 ಶಾಸಕರ ಆಸ್ತಿ ಅಧ್ಯಯನದ ಮಾಡಿ ಈ ವರದಿ ಬಿಡುಗಡೆ ಮಾಡಿದೆ.
ಕರ್ನಾಟಕ ನಂ.1:
ಕರ್ನಾಟಕದ 223 ಶಾಸಕರ ಒಟ್ಟು ಆಸ್ತಿ 14,179 ಕೋಟಿ ರು.ನಷ್ಟಿದೆ. ಈ ಮೂಲಕ ದೇಶದಲ್ಲಿ ಶಾಸಕರ ಒಟ್ಟಾರೆ ಆಸ್ತಿ ಮೌಲ್ಯದ ಪಟ್ಟಿಯಲ್ಲಿ ಕರ್ನಾಟಕ ನಂ.1 ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿರುವ ಮಹಾರಾಷ್ಟ್ರ (286 ಶಾಸಕರು)12,424 ಕೋಟಿ ರು., ಆಂಧ್ರಪ್ರದೇಶದ (174 ಶಾಸಕರು) ಶಾಸಕರು 11, 323 ಕೋಟಿ ರು. ಒಟ್ಟಾರೆ ಆಸ್ತಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಕರ್ನಾಟಕ ನಂ.2:
ಇನ್ನು ಶಾಸಕರ ಸರಾಸರಿ ಆಸ್ತಿಯಲ್ಲಿ ಕರ್ನಾಟಕ ದೇಶದಲ್ಲಿ 2ನೇ ಸ್ಥಾನದಲ್ಲಿದೆ. ಆಂಧ್ರಪ್ರದೇಶದ ಶಾಸಕರು 65.07 ಕೋಟಿ ರು. ಆಸ್ತಿ ಮೂಲಕ ನಂ.1 ಸ್ಥಾನದಲ್ಲಿದ್ದಾರೆ. 63.58 ಕೋಟಿ ರು. ಸರಾಸರಿ ಆಸ್ತಿಯೊಂದಿಗೆ ಕರ್ನಾಟಕದ ಶಾಸಕರು 2ನೇ ಸ್ಥಾನದಲ್ಲಿದ್ದಾರೆ. 3ನೇ ಸ್ಥಾನದಲ್ಲಿರುವ ಮಹಾರಾಷ್ಟ್ರದ ಶಾಸಕರ ಸರಾಸರಿ ಆಸ್ತಿ 43.44 ಕೋಟಿ ರು. ಆಗಿದೆ.
ನಂ.1 ಬಿಲಿಯನೇರ್ ಶಾಸಕರು:
100 ಕೋಟಿ ರು.ಗಿಂತಲೂ ಹೆಚ್ಚಿನ ಆಸ್ತಿ ಹೊಂದಿದ ಅತಿ ಹೆಚ್ಚು ಶಾಸಕರು ಕರ್ನಾಟಕದಲ್ಲಿ ಇದ್ದಾರೆ. ಕರ್ನಾಟಕದ 31 ಶಾಸಕರ ಆಸ್ತಿ 100 ಕೋಟಿ ರು.ಗಿಂತಲೂ ಹೆಚ್ಚಿದೆ. ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ (27), ಮಹಾರಾಷ್ಟ್ರ (18 ಶಾಸಕರು) ರಾಜ್ಯಗಳಿವೆ.
ಅತಿ ಹೆಚ್ಚು ಸಾಲ:
ಅತಿ ಹೆಚ್ಚು ಸಾಲ ಹೊಂದಿರುವ ಟಾಪ್ 10 ಶಾಸಕರ ಪೈಕಿ ಕರ್ನಾಟಕದ ಮೂವರು ಸ್ಥಾನ ಪಡೆದಿದ್ದಾರೆ. ಪ್ರಿಯಾಕೃಷ್ಣ 881 ಕೋಟಿ ರು.ನೊಂದಿಗೆ ಮೊದಲ ಸ್ಥಾನದಲ್ಲಿ, ಡಿ.ಕೆ.ಶಿವಕುಮಾರ್ 245 ಕೋಟಿ ರು.ನೊಂದಿಗೆ 3ನೇ ಸ್ಥಾನ ಮತ್ತು ಬೈರತಿ ಸುರೇಶ್ 114 ಕೋಟಿ ರು.ಸಾಲದೊಂದಿಗೆ 10ನೇ ಸ್ಥಾನದಲ್ಲಿದ್ದಾರೆ.
ಬಿಜೆಪಿ ಶಾಸಕರ ಒಟ್ಟು ಆಸ್ತಿ3 ರಾಜ್ಯ ಬಜೆಟ್ಗಿಂತ ಹೆಚ್ಚು
ಬಿಜೆಪಿ ಒಟ್ಟು 1653 ಶಾಸಕರನ್ನು ಹೊಂದಿದ್ದು ಒಟ್ಟಾರೆ ಈ ಶಾಸಕರ ಆಸ್ತಿ 26,270 ಕೋಟಿ ರುಪಾಯಿ. ಇದು ಸಿಕ್ಕಿಂ, ನಾಗಾಲ್ಯಾಂಡ್ (23,086 ಕೋಟಿ) ಮತ್ತು ಮೇಘಾಲಯ ರಾಜ್ಯಗಳ ಒಟ್ಟಾರೆ ವಾರ್ಷಿಕ ಬಜೆಟ್ಗಿಂತಲೂ ಹೆಚ್ಚು. ಕಾಂಗ್ರೆಸ್ ಶಾಸಕರು (646 ಶಾಸಕರು) 17,357 ಕೋಟಿ ರು, ಟಿಡಿಪಿ ಶಾಸಕರು (134 ಶಾಸಕರು) 9,108 ಕೋಟಿ ರು. ಒಟ್ಟಾರೆ ಆಸ್ತಿ ಹೊಂದಿದ್ದಾರೆ.
ಟಾಪ್ 5 ಶ್ರೀಮಂತ ಶಾಸಕರು
ಸ್ಥಾನ-ಹೆಸರು-ಆಸ್ತಿ
1 ಪರಾಗ್ ಶಾ-3383 ಕೋಟಿ ರು.
2 ಡಿ.ಕೆ.ಶಿವಕುಮಾರ್-1413 ಕೋಟಿ ರು.
3 ಪುಟ್ಟಸ್ವಾಮಿಗೌಡ-1267 ಕೋಟಿ ರು.
4 ಪ್ರಿಯಾಕೃಷ್ಣ-1156 ಕೋಟಿ ರು.
10 ಬೈರತಿ ಸುರೇಶ್-648 ಕೋಟಿ ರು.
ಅತಿ ಬಡ ಶಾಸಕ
ಸ್ಥಾನ-ಹೆಸರು-ಆಸ್ತಿ
4092-ನಿರ್ಮಲ್ ಕುಮಾರ್-1700 ರು