

16ನೇ ಆವತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (RCB vs KKR) ನಡುವಣ ಪಂದ್ಯ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಗೆಲ್ಲಬಹುದಾಗಿದ್ದ ಈ ಪಂದ್ಯದಲ್ಲಿ ಆರ್ಸಿಬಿ ಸೋತರೆ ಕೆಕೆಆರ್ 21 ರನ್ಗಳ ಜಯ ಸಾಧಿಸಿತು. ಬೌಲಿಂಗ್ನಲ್ಲಿ ಆರ್ಸಿಬಿ ಬೌಲರ್ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರು. ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ (Virat Kohli) ಅರ್ಧಶತಕ ಸಿಡಿಸಿ ಹೋರಾಟ ನಡೆಸಿದ್ದು ಬಿಟ್ಟರೆ ಮತ್ಯಾರು ಸಾಥ್ ನೀಡಲಿಲ್ಲ. ಈ ಮೂಲಕ ಕೊಹ್ಲಿ, ಫಾಫ್ ಡುಪ್ಲೆಸಿಸ್ (Faf Duplessis), ಗ್ಲೆನ್ ಮ್ಯಾಕ್ಸ್ವೆಲ್ ಆಡಿದರೆ ಮಾತ್ರ ಆರ್ಸಿಬಿ ತಂಡಕ್ಕೆ ಜಯ, ಇಲ್ಲವಾದಲ್ಲಿ ಸೋಲು ಖಚಿತ ಎಂಬುದು ಮತ್ತೊಮ್ಮೆ ಸಾಭೀತಾಯಿತು.
ಡುಪ್ಲೆಸಿಸ್ ಹಾಗೂ ಮ್ಯಾಕ್ಸ್ವೆಲ್ ಬೇಗನೆ ಔಟಾಗಿ ಪೆವಿಲಿಯನ್ ಸೇರಿಕೊಂಡಿದ್ದರೂ ಕೊಹ್ಲಿ ಗೆಲುವಿಗಾಗಿ ಹೋರಾಡಿದರು. ಆದರೆ, ಈ ಹೋರಾಟ 13ನೇ ಓವರ್ನಲ್ಲಿ ಅಂತ್ಯವಾಯಿತು. ಆಂಡ್ರೆ ರಸೆಲ್ ಬೌಲಿಂಗ್ನ ಮೊದಲ ಎಸೆತದಲ್ಲಿ ಕೊಹ್ಲಿ ಬಿಗ್ ಶಾಟ್ ಹೊಡೆಯಲು ಬ್ಯಾಟ್ ಬೀಸಿದರು. ಚೆಂಡು ಬೌಂಡರಿ ಗೆರೆ ದಾಟುವುದರಲ್ಲಿತ್ತು. ಆದರೆ, ವೆಂಕಟೇಶ್ ಅಯ್ಯರ್ ಹಿಡಿದ ರೋಚಕ ಕ್ಯಾಚ್ನಿಂದ ಕೊಹ್ಲಿ ಔಟಾಗಬೇಕಾಯಿತು. ವಿರಾಟ್ಗೆ ತಾನು ಔಟಾಗಿದ್ದನ್ನು ನಂಬಲು ಸಾಧ್ಯವಾಗಲಿಲ್ಲ. ಅತ್ತ ಪಂದ್ಯ ವೀಕ್ಷಿಸಲು ಬಂದಿದ್ದ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಒಂದು ಕ್ಷಣ ಸ್ತಬ್ಧರಾದರು. ಬೇಸರದಿಂದ ಇರುವುದು ಕ್ಯಾಮೆರಾದಲ್ಲಿ ಸೆರೆ ಆಗಿದೆ.
— Guess Karo (@KuchNahiUkhada) April 27, 2023
IPL 2023 Orange and Purple Cap: ಈ ಸಲ ಕ್ಯಾಪ್ ನಮ್ದೆ..!
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಕೆಕೆಆರ್ ಪರವಾಗಿ ಜೇಸನ್ ರಾಯ್ (56) ಮತ್ತು ಎನ್. ಜಗದೀಶನ್ (27) ಮೊದಲ ವಿಕೆಟ್ಗೆ 83 ರನ್ ಗಳನ್ನು ಸೇರಿಸಿದರು. ನಾಯಕ ನಿತೀಶ್ ರಾಣ 21 ಎಸೆತಗಳಲ್ಲಿ 48 ರನ್ ಚಚ್ಚಿದರು. ವೆಂಕಟೇಶ್ ಅಯ್ಯರ್ 26 ಎಸೆತಗಳಲ್ಲಿ 31 ರನ್ಗಳನ್ನು ಗಳಿಸಿದರೆ, ರಿಂಕು ಸಿಂಗ್ 10 ಎಸೆತಗಳಲ್ಲಿ 18 ರನ್ ಗಳನ್ನು ದಾಖಲಿಸಿ ಅಜೇಯರಾಗಿ ಉಳಿದರು. ಇನಿಂಗ್ಸ್ನ ಕೊನೆಯಲ್ಲಿ ಡೇವಿಡ್ ವೈಸ್ 3 ಎಸೆತಗಳಲ್ಲಿ 2 ಸಿಕ್ಸರ್ ಬಾರಿಸಿದ ಪರಿಣಾಮ ಕೋಲ್ಕತ್ತಾ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್ ಕಲೆಹಾಕಿತು. ಆರ್ಸಿಬಿ ಪರ ಹಸರಂಗ ಹಾಗೂ ವಿಜಯಕುಮಾರ್ ವೈಶಾಖ್ ತಲಾ 2 ವಿಕೆಟ್ ಪಡೆದರು.
ಕಠಿಣ ಟಾರ್ಗೆಟ್ ಬೆನ್ನಟ್ಟಿದ ಆರ್ಸಿಬಿ ಆರಂಭದಲ್ಲೇ ನೆಲಕಚ್ಚಿತು. ಫಾಫ್ ಡುಪ್ಲೆಸಿಸ್ 17 ರನ್ಗೆ ನಿರ್ಗಮಿಸಿದರು. ನಂತರ ಬಂದ ಶಹಬಾಜ್ ಅಹ್ಮದ್ (2) ಬಂದಷ್ಟೆ ವೇಗದಲ್ಲಿ ಪೆವಿಲಿಯನ್ ಸೇರಿದರು. ಗ್ಲೆನ್ ಮ್ಯಾಕ್ಸ್ವೆಲ್ (5) ಆಟ ಈ ಬಾರಿ ನಡೆಯಲಿಲ್ಲ. ಈ ನಡುವೆ ಕ್ರೀಸ್ಗೆ ಬಂದ ಮಹಿಪಾಲ್ ಲೊಮ್ರೋರ್ 34 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ಮತ್ತೊಂದೆಡೆ, 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದ ಕೊಹ್ಲಿ (54) ರಸೆಲ್ ಎಸೆತದಲ್ಲಿ ಕ್ಯಾಚಿತ್ತರು. ನಂತರ ಬಂದ ಬ್ಯಾಟರ್ಗಳು ಯಾರು ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಆರ್ಸಿಬಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತಷ್ಟೆ. ಕೋಲ್ಕತ್ತಾ ಪರ ವರುಣ್ ಚಕ್ರವರ್ತಿ ಮೂರು ವಿಕೆಟ್ ಪಡೆದರೆ, ಸುಯಶ್ ಶರ್ಮಾ ಮತ್ತು ಆಂಡ್ರೆ ರಸೆಲ್ ತಲಾ ಎರಡು ವಿಕೆಟ್ ತಮ್ಮದಾಗಿಸಿಕೊಂಡರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ