ಕೋಟಿ..ಕೋಟಿ ಇದ್ರೂ ರತನ್ ಟಾಟಾ ಹೆಸರು ಶ್ರೀಮಂತರ ಪಟ್ಟಿಯಲ್ಲಿ ಯಾಕಿಲ್ಲ ಗೊತ್ತಾ.?-ಇಲ್ಲಿದೆ ಅಸಲಿ ಸತ್ಯ

Ratan Naval Tata: ಭಾರತದ ಹೆಸರಾಂತ ಉದ್ಯಮಿ ಮತ್ತು ಲೋಕೋಪಕಾರಿ ಟಾಟಾ ಸನ್ಸ್‌ನ ಗೌರವಾನ್ವಿತ ಅಧ್ಯಕ್ಷ ರತನ್ ಟಾಟಾ (86) ಅವರು ವಯೋಸಹಜ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರ (ಅಕ್ಟೋಬರ್‌ 9) ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇನ್ನು ಅವರ ಈ ನಿಧನದಿಂದಾಗಿ ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿದೆ.

ಬಿಲೇನಿಯರ್ ಆಗಿರುವ ರತನ್ ಟಾಟಾ ಅವರು, ಭಾರತದ ಅತ್ಯನ್ನತ ಉದ್ಯಮಿಗಳ ಸಾಲಿನಲ್ಲಿ ಅವರು ಕೂಡ ಒಬ್ಬರಾಗಿದ್ದರು. ಐಐಎಫ್‌ಎಲ್‌ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022ರ ಪ್ರಕಾರ, ರತನ್ ಟಾಟಾ ಅವರು ಸಾಮಾಜಿಕ ಮಾಧ್ಯಮವನ್ನು ಅತೀ ಹೆಚ್ಚಾಗಿ ಅನುಸರಿಸುವ ಭಾರತೀಯ ಕೈಗಾರಿಕೋದ್ಯಮಿಯಾಗಿದ್ದರು.

2024ರಲ್ಲಿ ಅವರ ಟ್ವಿಟರ್ ಫಾಲೋವರ್ಸ್‌ ಸಂಖ್ಯೆಯಲ್ಲಿ 118 ಲಕ್ಷ ಏರಿಕೆಯಾಗಿದೆ. ಅವರ ವ್ಯವಹಾರಿಕ ಸಾಧನೆಗಳು ಮತ್ತು ಮೆಚ್ಚಿದ ಕೆಲಸದ ನೀತಿಗೆ ಹೆಸರುವಾಸಿ ಆಗಿದ್ದರು. ಆದರೂ ಅವರ ಹೆಸರು ದೇಶದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಇಲ. ಇದಕ್ಕೆ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

3,800 ಕೋಟಿ ರೂಪಾಯಿ ನಿವ್ವಳ ಮೌಲ್ಯ ಹೊಂದಿರುವ ರತನ್‌ ಟಾಟಾ ಅವರು, ಐಐಎಫ್‌ಎಲ್ ‌ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022ರಲ್ಲಿ 421ನೇ ಸ್ಥಾನ ಗಿಟ್ಟಿಸಿಕೊಂಡಿದ್ದರು. 2021ರಲ್ಲಿ ಈ ಪಟ್ಟಿಯಲ್ಲಿ 3,500 ಕೋಟಿ ನಿವ್ವಳ ಆದಾಯದೊಂದಿಗೆ 433ನೇ ಸ್ಥಾನ ಅಲಂಕರಿಸಿದ್ದರು.

ಅವರು ಕಂಪನಿಗಳ ಲಾಭದ 66 ಪ್ರತಿಶತ ಹಣವನ್ನು ಸಾಮಾಜಿಕ ಕಾರ್ಯಕ್ರಮಗಳಿಗಾಗಿ ದೇಣಿಗೆ ನೀಡುತ್ತಿದ್ದು, ಈ ಹಿನ್ನೆಲೆ ಅವರು ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯ ಆಗಿಲ್ಲ. ನಾವು ನೋಡಿರುವ ಹಾಗೆ ಬಹುತೇಕ ಮಂದಿ ದೊಡ್ಡ ದೊಡ್ಡ ಉದ್ಯಮಿಗಳಾಗಿದ್ದರೂ ಕೂಡ ಅವರು ಬಡವರಿಗಾಗಿ ಬಿಡಿಗಾಸನ್ನು ಬಿಚ್ಚುವುದಿರಲಿ, ಸಾಮಾಜಿಕ ಕಾರ್ಯಗಳಿಗೂ ಹಣವನ್ನು ನೀಡುತ್ತಿಲ್ಲ. ಆದರೆ ರತನ್‌ ಟಾಟಾ ಆಗಲ್ಲ.

ರತನ್‌ ಟಾಟಾ ಅವರು ಎಷ್ಟೇ ಶ್ರೀಮಂತರ ಉದ್ಯಮಿಯಾಗಿದ್ದರೂ ಕೂಡ ನಡೆದುಬಂದ ಹಾದಿಯನ್ನು ಮರೆಯದೆ, ತಮ್ಮ ಕಂನಿಗಳಿಂದ ಬಂದಂತಹ ಇಂತಿಷ್ಟು ಹಣ ಅಂತಾ ಬಡವರು, ಸಾಮಾಜದ ಒಳಿತಿಗಾಗಿ ಬಳಸುತ್ತಿದ್ದರು ಎನ್ನುವ ಮಾತು ಎಂಥವರ ಬಾಯಲ್ಲೂ ಕೇಳಿಬರುತ್ತಿದೆ.

ಇನ್ನು ಟಾಟಾ ಸನ್ಸ್ ಪ್ರಾಥಮಿಕ ಹೂಡಿಕೆ ಹಿಡುವಳಿ ಕಂಪನಿ ಮತ್ತು ವಿವಿಧ ಟಾಟಾ ಘಟಕಗಳ ಪ್ರವರ್ತಕರಾಗಿ ಕಾರ್ಯನಿರ್ವಹಿಸುತ್ತದೆ. ಟಾಟಾ ಸನ್ಸ್‌ನ ಈಕ್ವಿಟಿ ಷೇರು ಬಂಡವಾಳದ 66 ಪ್ರತಿಶತವು ಲೋಕೋಪಕಾರಿ ಟ್ರಸ್ಟ್‌ಗಳ ಉಸ್ತುವಾರಿಯಲ್ಲಿದೆ. ಶಿಕ್ಷಣ, ಆರೋಗ್ಯ ಮತ್ತು ಜೀವನೋಪಾಯದ ಉತ್ಪಾದನೆಗೆ ಸಂಬಂಧಿಸಿದ ಕಾರಣಗಳನ್ನು ಮುನ್ನಡೆಸುವಲ್ಲಿ ಈ ಟ್ರಸ್ಟ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಜೊತೆಗೆ ಕಲೆ ಮತ್ತು ಸಂಸ್ಕೃತಿಯಲ್ಲಿ ಉಪಕ್ರಮಗಳನ್ನು ಕೂಡ ಇವರ ಇವುಗಳು ಬೆಂಬಲಿಸುತ್ತವೆ ಎಂಬುದು ವಿಶೇಷವಾಗಿದೆ.

ಟಾಟಾ ಗ್ರೂಪ್ ತನ್ನ ವ್ಯಾಪಾರವನ್ನು ಉಪ್ಪಿನಿಂದ ಹಿಡಿದು ಐಟಿವರೆಗೆ ವ್ಯಾಪಕ ಶ್ರೇಣಿಯಲ್ಲಿ ವ್ಯಾಪಿಸಿಬಿಟ್ಟಿದೆ. ಮಾರ್ಚ್ 31, 2022ರ ವೇಳೆಗೆ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, 29 ಸಾರ್ವಜನಿಕವಾಗಿ ಪಟ್ಟಿ ಮಾಡಲಾದ ಟಾಟಾ ಉದ್ಯಮಗಳು $311 ಶತಕೋಟಿ ಅಂದರೆ 23.6 ಟ್ರಿಲಿಯನ್ ರೂಪಾಯಿ ಸಂಚಿತ ಮಾರುಕಟ್ಟೆ ಬಂಡವಾಳ ಹೊಂದಿವೆ.

ರತನ್ ಟಾಟಾ ಮತ್ತು ಅವರ ಕುಟುಂಬವು 50 ವರ್ಷಗಳಿಂದ ಲೋಕೋಪಕಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈ ದಾನ ನೀಡುವ ಸಂಪ್ರದಾಯವನ್ನು ಅವರ ಮುತ್ತಜ್ಜ ಜಮ್ಸೆಟ್ಜಿ ಟಾಟಾ ಪ್ರಾರಂಭಿಸಿದರು. 2021-22 ರ ಆರ್ಥಿಕ ವರ್ಷದಲ್ಲಿ, ಟಾಟಾ ಕಂಪನಿಗಳು ಒಟ್ಟಾರೆಯಾಗಿ $128 ಶತಕೋಟಿ (9.6 ಟ್ರಿಲಿಯನ್ ರೂಪಾಯಿ) ಆದಾಯ ಗಳಿಸಿವೆ ಮತ್ತು 9,35,000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ ಎಂದು ಗ್ರೂಪ್‌ನ ಅಧಿಕೃತ ವೆಬ್‌ಸೈಟ್ ತಿಳಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಟಾಟಾ ಅವರು ಎಷ್ಟೇ ದೊಡ್ಡ ಉದ್ಯಮಿಯಾಗಿದ್ದರೂ ಕೂಡ ಸರಳತೆಯಿಂದ ಬದುಕುವ, ಬಡವರಿಗಾಗಿ ಶ್ವಮಿಸುವ ಗುಣ ಅವರದ್ದಾಗಿತ್ತು. ಅವರು ಶ್ರೀಮಂತರ ಪಟ್ಟಿಯಲ್ಲಿ ಇರದಿರಬಹುದು. ಆದರೆ ಸಮಾಜದ ಪಾಲಿಗೆ ಅವರು ಮಾಡಿರುವ ಸಹಾಯವೇ ಸಿರಿತನದಲ್ಲಿ ಅಗ್ರಸ್ಥಾನ ಪಡೆದಿದೆ ಎಂದು ಹೇಳಿದರೆ ತಪ್ಪಾಗಲಾರದು.

Source : https://m.dailyhunt.in/news/india/kannada/oneindiakannada-epaper-thatskannada/ratan+tata+koti+koti+idru+ratan+taata+hesaru+shrimantara+pattiyalli+yaakilla+gotta+illide+asali+satya-newsid-n634450646?listname=topicsList&topic=for%20you&index=2&topicIndex=0&mode=pwa&action=click

Leave a Reply

Your email address will not be published. Required fields are marked *