Doctor suspended: ರೋಗಿಗಳಿಂದ ಹಣ ಸುಲಿಗೆ ಆರೋಪ: ಮೈಸೂರಲ್ಲಿ ಮಹಿಳಾ ವೈದ್ಯಾಧಿಕಾರಿ ಅಮಾನತು

ರೋಗಿಗಳಿಂದ ಹಣ ಪಡೆಯುತ್ತಿದ್ದ ಆರೋಪದ ಮೇಲೆ ಮಹಿಳಾ ವೈದ್ಯಾಧಿಕಾರಿ ಅಮಾನತುಗೊಳಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಅದೇಶಿಸಿದ್ದಾರೆ.

ಮೈಸೂರು: ಪ್ರಾಥಮಿಕ‌ ಆರೋಗ್ಯ ಕೇಂದ್ರದಲ್ಲಿ ನರ್ಸ್​ಗಳು ಹಾಗೂ ಸಿಬ್ಬಂದಿ ಮೂಲಕ ರೋಗಿಗಳಿಂದ ಹಣ ಸುಲಿಗೆ ಮಾಡುತ್ತಿದ್ದ ಆರೋಪದ ಮೇಲೆ ಮಹಿಳಾ ವೈದ್ಯಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ಮೈಸೂರಿನ ಶಾಂತಿನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕೋಮಲಾ ಅವರನ್ನು ಅಮಾನತು ಮಾಡಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ಡಿ. ರಂದೀಪ್ ಆದೇಶ ಹೊರಡಿಸಿದ್ದಾರೆ.

ಕರ್ತವ್ಯಲೋಪ, ದುರ್ನಡತೆ ಆರೋಪದ ಬಗ್ಗೆ ವಿಚಾರಣೆ ಬಾಕಿ ಇರಿಸಿ, ಈ ತಕ್ಷಣದಿಂದ ಅಮಾನತು ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ. ವೈದ್ಯರು ಉದಯಗಿರಿ ಪೊಲೀಸ್ ಠಾಣೆ ಪಕ್ಕದಲ್ಲೇ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್​ಗಳು ಹಾಗೂ ಸಿಬ್ಬಂದಿ ಮೂಲಕ ಬಾಣಂತಿ, ಮಕ್ಕಳು ವೃದ್ಧರಿಂದಲೂ ಲಂಚ ಪಡೆಯುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಲಂಚ ಕೊಟ್ಟರೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಸಂಬಂಧ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ, ತನಿಖೆ ಕೈಗೊಂಡು ವರದಿ ನೀಡುವಂತೆ ಆರೋಗ್ಯ ಇಲಾಖೆ ಆಯುಕ್ತರು ಸೂಚನೆ ನೀಡಿದ್ದರು. ತನಿಖಾ ವರದಿಯನ್ನು ಆಯುಕ್ತರಿಗೆ ಕಳುಹಿಸಲಾಗಿತ್ತು. ವರದಿ ಆಧಾರದ ಮೇಲೆ ವೈದ್ಯಾಧಿಕಾರಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಹೆಚ್​ಒ ಡಾ. ಕೆ. ಎಚ್‌. ಪ್ರಸಾದ್, ”ಶಾಂತಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕೋಮಲಾ ಅವರು ರೋಗಿಗಳಿಂದ ಹಣ ಪಡೆಯುತ್ತಿದ್ದರು ಎಂಬ ಆರೋಪದ ಬಗ್ಗೆ ತನಿಖೆ ನಡೆಸಲಾಗಿದೆ. ಈ ಬಗ್ಗೆ ಹಣ ಪಡೆಯುತ್ತಿರುವ ವಿಡಿಯೋ ತುಣುಕೊಂದು ವೈರಲ್​ ಆಗಿತ್ತು. ನಮಗೂ ಕೂಡ ಈ ವಿಡಿಯೋ ಲಭ್ಯವಾಗಿತ್ತು. ಇದರ ಬಗ್ಗೆ ರಾಜ್ಯ ಆಯುಕ್ತರಿಗೆ ವರದಿ ನೀಡಲಾಗಿತ್ತು‌. ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಿಚಾರಣೆ ಬಾಕಿ ಇರಿಸಿ ಅಮಾನತು ಮಾಡಲಾಗಿದೆ. ಜೊತೆಗೆ ಸಿಬ್ಬಂದಿಯೂ ಸೇರಿಕೊಂಡು ಹಣ ಪಡೆಯಲಾಗಿದೆ ಎಂಬ ಆರೋಪವೂ ಇದೆ. ಎಲ್ಲರ ಮೇಲೆಯೂ ಸಮಗ್ರವಾದ ತನಿಖೆ ನಡೆಯುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆಗಳು ಉಚಿತವಾಗಿದೆ. ವೈದ್ಯಾಧಿಕಾರಿಗಳು ಯಾವುದೇ ಕಾರಣಕ್ಕೂ ಹಣ ಪಡೆಯುವ ಹಕ್ಕು ಇಲ್ಲ. ಹಾಗೆಯೇ ರೋಗಿಗಳೂ ಕೂಡ ಹಣವನ್ನು ಕೊಡುವ ಅವಶ್ಯಕತೆ ಇಲ್ಲ” ಎಂದು ಮಾಹಿತಿ ನೀಡಿದ್ದಾರೆ.

Source : https://m.dailyhunt.in/news/india/kannada/etvbhar9348944527258-epaper-etvbhkn/doctor+suspended+rogigalindha+hana+sulige+aaropa+maisuralli+mahila+vaidyaadhikaari+amaanatu-newsid-n515602290?listname=newspaperLanding&topic=homenews&index=2&topicIndex=0&mode=pwa&action=click

Leave a Reply

Your email address will not be published. Required fields are marked *