ವಿದ್ಯಾರ್ಥಿ ಜೀವನವನ್ನು ವ್ಯರ್ಥ ಮಾಡಬೇಡಿ: ದ್ವಿತೀಯ ಪಿಯುಸಿ ಬೀಳ್ಕೂಡುಗೆ ಸಮಾರಂಭದಲ್ಲಿ ಡಾ. ಶ್ರೀ ಬಸವಪ್ರಭು ಶ್ರೀಗಳು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 07

ಈಗ 25 ವರ್ಷ ನೀವುಗಳು ಕಷ್ಟಪಟ್ಟರೆ ಮುಂದಿನ 75 ವರ್ಷ ಉತ್ತಮವಾದ ಬದುಕನ್ನು ನಡೆಸ ಬಹುದಾಗಿದೆ, ಆದರೆ ಈಗ ನೀವುಗಳು ವಿದ್ಯಾರ್ಥಿ ಜೀವನವನ್ನು ಜಾಲಿಯಾಗಿ ಕಳೆದರೆ ಮುಂದಿನ ಜೀವನ ಕಷ್ಟಕರವಾಗಿರುತ್ತದೆ ಎಂದು ವಿದ್ಯಾರ್ಥಿಗಳಿಗೆ ಚಿತ್ರದುರ್ಗದ ಮುರುಘಾಮಠ ಹಾಗೂ ದಾವಣಗೆರೆಯ ವಿರಕ್ತಮಠದ ಡಾ. ಶ್ರೀ ಬಸವಪ್ರಭು ಶ್ರೀಗಳು ತಿಳಿ ಹೇಳಿದರು.

ಚಿತ್ರದುರ್ಗ ನಗರದ ಗಾರೆಹಟ್ಟಿಯ ಮಹಾ ಬಲೇಶ್ವರ ದೇವಸ್ಥಾನದ ಆವರಣದಲ್ಲಿನ ಬೃಹನ್ಮಠ ಸಂಯುಕ್ತ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೂಡುಗೆ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ವಿದ್ಯಾರ್ಥಿ ಜೀವನ ಬಂಗಾರದ ಜೀವನ ಎಂದು ಹೇಳಲಾಗುತ್ತಿದೆ ಆದರೆ ಈ ಸಮಯದಲ್ಲಿ ನಿಮ್ಮ ಜೀವನ ಮತ್ತು ಬದುಕಿನ ಗುರಿಯನ್ನು ನಿರ್ಧಾರ ಮಾಡಬೇಕಿದೆ, ವಿದ್ಯಾರ್ಥಿ ಜೀವನದಲ್ಲಿ ಮೋಜು, ಮಸ್ತಿ, ಆಟ, ವಿಲಾಸಿ ಜೀವನದಲ್ಲಿ ಕಳೆದರೆ ಮುಂದಿನ ದಿನ ಬಹಳ ಕಷ್ಠವಾಗುತ್ತದೆ, ತಂದೆ-ತಾಯಿಗಳಿಂದ ಪಡೆದ ಹಣವನ್ನು ವಿದ್ಯಾರ್ಥಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ನಿಮ್ಮ 25 ವರ್ಷ ಜೀವನದಲ್ಲಿ ಸರಿಯಾದ ರೀತಿಯಲ್ಲಿ ನಡೆದುಕೊಂಡರೆ ಮುಂದಿನ 75 ವರ್ಷ ಸುಖವಾಗಿ ಇರಬಹುದಾಗಿದೆ. ಈಗ ಕಷ್ಠಪಟ್ಟವರಿಗೆ ಮುಂದಿನ ಜೀವನ ಸುಖಕರವಾಗಿ ಇರುತ್ತದೆ. ಇದನ್ನು ಸಾಧಿಸಲು ಶಿಕ್ಷಣದಿಂದ ಮಾತ್ರ ಸಾಧ್ಯವಾಗುತ್ತದೆ ಎಂದರು.

ಇಂದಿನ ಯುವಕರು ದುಶ್ಚಟಗಳ ದಾಸರಾಗುತ್ತಿದ್ದಾರೆ. ಸಹವಾಸ ದೋಷದಿಂದ ಹಾಳಾಗುತ್ತಿದ್ದಾರೆ. ಇದರಿಂದ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಬಾರ್‍ನಲ್ಲಿ ಕುಡಿದರೆ ಬೇರೆಯವರಿಗೆ ಗೊತ್ತಾಗುತ್ತದೆ ಎಂದು ಪಾರ್ಸಲ್ ತೆಗೆದುಕೊಂಡು ಹೊಲಗಳಲ್ಲಿ ಕುಡಿಯುತ್ತಿದ್ದಾರೆ. ಚನ್ನಾಗಿ ಓದಿ ಸರ್ಕಾರಿ ಉದ್ಯೋಗವನ್ನು ಪಡೆದು ಕೈತುಂಬ ಸಂಪಾದನೆಯನ್ನು ಮಾಡಿದಾಗ ಮಾತ್ರ ಯಾರಾದರೂ ಹೆಣ್ಣು ಕೂಡಲು ಮುಂದೆ ಬರುತ್ತಾರೆ ಇಲ್ಲವಾದರೆ ಯಾರೂ ಸಹಾ ತಮ್ಮ ಮಗಳನ್ನು ಕೂಡಲು ಮುಂದೆ ಬರುವುದಿಲ್ಲ, ಶಿಕ್ಷಣ ಎಂದರೆ ಮಾನವ ಬದುಕಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರದ ದಾರಿ ಎಂದು ಶ್ರೀಗಳು ನಿಮ್ಮನ್ನು ಒಂದು ಕಡೆ ನೆಲೆಯನ್ನು ನಿಲ್ಲಿಸಲು ನಿಮ್ಮ ತಂದೆ-ತಾಯಿಗಳು ಬಹಳ ಕಷ್ಟವನ್ನು ಪಟ್ಟಿದ್ದಾರೆ ಅವರ ತ್ಯಾಗವನ್ನು ಮರೆಯಬೇಡಿ ವೃದ್ಯಾಪ್ಯದಲ್ಲಿ ಅವರನ್ನು ಮರೆಯಬೇಡಿ ವೃದ್ದಾಶ್ರಮಕ್ಕೆ ಕಳುಹಿಸದೇ ನಿಮ್ಮ ಬಳಿಯಲ್ಲಿಯೇ ಅವರನ್ನು ಇಟ್ಟುಕೊಂಡು ಪ್ರೀತಿಯಿಂದ ಸಲಹಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೃಹನ್ಮಠ ಸಂಯುಕ್ತ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಎಂ.ಜಿ.ರಾಜೇಶ್ ಮಾತನಾಡಿ, ಅಕ್ಷರವನ್ನು ಕಲಿತರೇ ಅದು ಸಮಾಜದಲ್ಲಿ ನಿಮ್ಮನ್ನು ಗೌರವದಿಂದ ಇರುವಂತೆ ನೋಡಿಕೊಳ್ಳುತ್ತದೆ, ಇಂತಹ ಕಾರ್ಯಕ್ರಮದಲ್ಲಿ ಭಾಷಣವನ್ನು ಕೇಳುವುದರಿಂದ 10 ಪುಸ್ತಕಗಳನ್ನು ಓದಿದಂತೆ, ನೀವುಗಳು ಮುಂದೆ ಉನ್ನತವಾದ ಸ್ಥಾನದಲ್ಲಿದ್ದಾಗ ನಿಮ್ಮನ್ನು ಕಲಿಸಿದಂತ ಗುರುಗಳನ್ನು ಮರೆ ಬೇಡಿ ಈ ಸಾರಿ ನಮ್ಮ ಕಾಲೇಜಿನಲ್ಲಿ ಉತ್ತಮವಾಧ ಫಲಿತಾಂಶ ಬರಲು ಎಲ್ಲರ ಸಹಕಾರ ಮಾಡಿದ್ದಾರೆ. ಇದ್ದಲ್ಲದೆ ನಮ್ಮ ಕಾಲೇಜಿನಲ್ಲಿ ಕಡಿಮೆ ದರದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಸಿ.ಇ.ಟಿ ಮತ್ತು ಎನ್.ಇ.ಟಿಯನ್ನು ಕಲಿಸಲಾಗುತ್ತದೆ ಕಠಿಣವಾದ ಪರಿಶ್ರಮದಿಂದ ಮಾತ್ರ ವಿದ್ಯೆಯನ್ನು ಪಡೆಯಲು ಸಾಧ್ಯವಿದೆ ಎಂದರು.

ಎಸ್.ಜೆ.ಎಂ.ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ತಿಪ್ಪೇಸ್ವಾಮಿ ಎನ್.ಬಿ. ಮಾತನಾಡಿ, ವಿದ್ಯಾರ್ಥಿಗಳಾದವರು ಸೋಮಾರಿಗಳಾಗಬಾರದು, ಸದಾ ಚಟುವಟಿಕೆಯಿಂದ ಕೊಡಿರಬೇಕು, ಸೋಮಾರಿತನ ಮಾನವ ಶತೃ, ಕಠಿಣವಾದ ಪರಿಶ್ರಮದಿಂದ ಮಾತ್ರ ಪ್ರಗತಿಯನ್ನು ಹೊಂದಲು ಸಾಧ್ಯವಿದೆ. ನಾವುಗಳು ವೀಕ್ ಎನ್ನಬಾರದು ಶಕ್ತಿ ಶಾಲಿಗಳು ಎನ್ನುವಂತಾಗಬೇಕು, ಅಧಿಕಾರ ಇದ್ದಾಗ ಸದುಪಯೋಗ ವನ್ನು ಮಾಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಸೇಂಟ್ ಮೇರಿಸ್ ಬಿ.ಎಡ್.ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂದೀಪ್, ಪ್ರಿಯದರ್ಶಿನಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪುಷ್ಪವಲ್ಲಿ ಮಾತನಾಡಿದರು. ರಕ್ಷಿತಾ ಸ್ವಾಗತಿಸಿದರೆ ಶಿವಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಭೈರೇಶ ಪ್ರೀತಿ, ಸಹ ಕಾರ್ಯದರ್ಶಿ ಅರ್ಚನ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನವನ್ನು ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.

Leave a Reply

Your email address will not be published. Required fields are marked *