ಚಿತ್ರದುರ್ಗ: ವಿಜ್ಞಾನ ಕ್ಷೇತ್ರದಲ್ಲಿರುವ ಮಹಿಳೆಯರು ಸಂಶೋಧನೆ, ಆವಿಷ್ಕಾರ, ಆರೋಗ್ಯ, ಪರಿಸರ ರಕ್ಷಣೆ ಮತ್ತು ತಂತ್ರಜ್ಞಾನ ವಿಕಾಸದಲ್ಲಿ ಮಹತ್ತರವಾದ ಪಾತ್ರ ವಹಿಸುತ್ತಿದ್ದು, ಅವರು ವಿಕಸಿತ ಭಾರತ ನಿರ್ಮಾಣದ ಪ್ರಮುಖ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ ಅಭಿಪ್ರಾಯಪಟ್ಟರು.
ಅವರು ಇಂದು ನಗರದ ಸರ್ಕಾರಿ ವಿಜ್ಞಾನ ಕಾಲೇಜು ಸಭಾಂಗಣದಲ್ಲಿ ‘ಚಿತ್ರದುರ್ಗ ಸೈನ್ಸ್ ಫೌಂಡೇಶನ್’ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
‘ವಿಕಸಿತ ಭಾರತ’ಕ್ಕೆ ವಿಜ್ಞಾನವೇ ಬುನಾದಿ
“ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಕೊಡುಗೆ ದೇಶದ ಆರ್ಥಿಕ, ಸಾಮಾಜಿಕ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಹೊಸ ವೇಗ ನೀಡುತ್ತಿದೆ. ವಿಕಸಿತ ಭಾರತ ಎಂದರೆ ಆರ್ಥಿಕವಾಗಿ, ತಾಂತ್ರಿಕವಾಗಿ ಮತ್ತು ವೈಜ್ಞಾನಿಕವಾಗಿ ಶಕ್ತಿಶಾಲಿ ರಾಷ್ಟ್ರ ಎಂದರ್ಥ. ದೇಶದ ಅಭಿವೃದ್ಧಿಯ ಗುರಿ ಸಾಧಿಸಲು ವಿಜ್ಞಾನದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಅತ್ಯಗತ್ಯವಾಗಿದೆ. ಮಹಿಳೆಯರು ವಿಜ್ಞಾನ, ತಂತ್ರಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು. ವಿಜ್ಞಾನದಿಂದ ಶಕ್ತಿ ಹಾಗೂ ವಿಜ್ಞಾನದಿಂದ ಪ್ರಗತಿ ಸಾಧ್ಯ,” ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಯುವಪೀಳಿಗೆಯಲ್ಲಿ ಬೆಳೆಯಲಿ ಸಂಶೋಧನಾ ಮನೋಭಾವ
ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ಮೂಲಕ ಉಪನ್ಯಾಸ ನೀಡಿದ ಚಳ್ಳಕೆರೆ ಯರ್ರಿಸ್ವಾಮಿ ಅವರು ಮಾತನಾಡಿ, “ರಾಷ್ಟ್ರೀಯ ವಿಜ್ಞಾನ ದಿನವು ಕೇವಲ ಭಾರತೀಯ ವಿಜ್ಞಾನ ಕ್ಷೇತ್ರದ ಮಹತ್ವವನ್ನು ಸ್ಮರಿಸುವುದಷ್ಟೇ ಅಲ್ಲ, ಬದಲಾಗಿ ಯುವಪೀಳಿಗೆಯಲ್ಲಿ ಸಂಶೋಧನಾ ಮನೋಭಾವವನ್ನು ಬೆಳೆಸುವ ಮಹತ್ತರ ಉದ್ದೇಶವನ್ನು ಹೊಂದಿದೆ. ಸರ್ ಸಿ.ವಿ. ರಾಮನ್ ಅವರ ಆವಿಷ್ಕಾರ ವಿಜ್ಞಾನ ಸಂಶೋಧನೆಗೆ ಹೊಸ ದಿಕ್ಕು ತೋರಿತು. ಯುವಕರಲ್ಲಿ ಕುತೂಹಲ, ಸಂಶೋಧನಾ ಮನೋವೃತ್ತಿ ಮತ್ತು ಪ್ರಯೋಗಶೀಲತೆಯನ್ನು ಬೆಳೆಸುವಲ್ಲಿ ವಿಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ,” ಎಂದು ವಿವರಿಸಿದರು.
ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಲು ಕರೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರವಿಕಾಂತ ಮಾತನಾಡಿ, “ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ, ಇಂತಹ ಕಾರ್ಯಕ್ರಮಗಳ ಮೂಲಕ ತಮ್ಮಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ವೈಚಾರಿಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು,” ಎಂದು ಕಿವಿಮಾತು ಹೇಳಿದರು.
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಎನ್. ವಿದ್ಯಾ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ. ಲಾಲ್ ಸಿಂಗ್ ನಾಯಕ್ ಅವರು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರತಿಜ್ಞಾವಿಧಿ ಬೋಧಿಸಿದರು.
ವೇದಿಕೆಯಲ್ಲಿ ಗಣ್ಯರಾದ ಪ್ರೊ. ಜೆ. ನಾಗರಾಜು, ಈ. ರುದ್ರಮುನಿ, ಹಾಗೂ ನಾಗಲಿಂಗರೆಡ್ಡಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಬಹುಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕುಮಾರಿ ಸಾವಿತ್ರಿ ಪ್ರಾರ್ಥನೆ ಹಾಡಿದರು. ಕುಮಾರಿ ವರ್ಷಿಣಿ ವಂದಿಸಿದರು ಹಾಗೂ ಕಾರ್ಯದರ್ಶಿ ಎಚ್.ಎಸ್.ಟಿ. ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.