ಒತ್ತಡದ ಬದುಕಿನಲ್ಲಿ ಮಹಿಳೆಯ ಆರೋಗ್ಯ ಕಡೆಗಣನೆ ಆತಂಕಕಾರಿ: ಡಾ. ಜ್ಯೋತಿ ಶರತ್ ಕುಮಾರ್.

ಚಿತ್ರದುರ್ಗ ಜ. 10

ಇಂದಿನ ದಿನಮಾನದಲ್ಲಿ ಮಹಿಳೆ ಒತ್ತಡದಲ್ಲಿ ತನ್ನ ಬದುಕನ್ನು ನಡೆಸುತ್ತಿದ್ದಾಳೆ, ಮನೆ, ಮಕ್ಕಳು, ಗಂಡ, ಸಂಸಾರ ಎಂದು ಬಿಡುವಿಲ್ಲದೆ ಕೆಲಸವನ್ನು ಮಾಡುವುದರಲ್ಲಿ ತನ್ನ ಆರೋಗ್ಯದ ಬಗ್ಗೆ ಗಮನ ನೀಡುತ್ತಿಲ್ಲ, ದಿನದ 24 ಗಂಟೆಯಲ್ಲಿ ಒಂದು ಗಂಟೆಯಾದರೂ ನಿಮ್ಮ ಆರೋಗ್ಯದ ಬಗ್ಗೆ ಗಮನ ನೀಡುವಂತೆ ಹರಿಗೆ ಮತ್ತು ಸ್ತ್ರೀ ರೋಗ ತಜ್ಞರಾದ ಶ್ರೀಮತಿ ಡಾ. ಜ್ಯೋತಿ ಶರತ್ ಕುಮಾರ್ ಮಹಿಳೆಯರಿಗೆ ಕರೆ ನೀಡಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ) ಚಿತ್ರದುರ್ಗ ತಾಲ್ಲೂಕು ಅಡಿಯಲ್ಲಿ ನಗರದ ಬರಗೇರಮ್ಮ ಸಮುದಾಯ ಭವನದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಹದಿಹರೆಯದ ಮತ್ತು ಮದ್ಯ ವಯಸ್ಸಿನ ಮಹಿಳೆಯರ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಬಹುತೇಕ ಜನತೆ ಅಧುನಿಕ ಶೈಲಿಯಲ್ಲಿ ತಮ್ಮ ಬದುಕನ್ನು ನಡೆಸುತ್ತಿದ್ದಾರೆ ಹಿಂದಿನ ಪದ್ದತಿಯನ್ನು ಮರೆತ್ತಿದ್ದಾರೆ. ಎಲ್ಲದಕ್ಕೂ ಸಹಾ ಯಂತ್ರವನ್ನು ಅವಲಂಬಿಸಬೇಕಾದ ಅನಿವಾರ್ಯತೆ ಉಂಟಾಗಿದೆ ಇದರಿಂದ ಮಾನವನಲ್ಲಿ ಶ್ರಮ ಎನ್ನುವುದು ಇಲ್ಲವಾಗಿದೆ. ಈ ಹಿನ್ನಲೆಯಲ್ಲಿ ದೇಹ ಜಡ್ಡು ಗಟ್ಟಿದೆ ಊಟಕ್ಕಿಂತ ಮಾತ್ರೆಗಳೇ ಹೆಚ್ಚಾಗಿ ಸೇವಿಸುವಂತ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಒಂದು ಮನೆ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಹೆಚ್ಚಾಗಿದೆ ಎಲ್ಲವನ್ನು ಮಹಿಳೆ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಮನೆ, ಸಂಸಾರ, ಗಂಡ ಇವರನ್ನು ನೋಡಿಕೊಳ್ಳಬೇಕಾದ ಅಗತ್ಯ ಇದ್ದು, ಒತ್ತಡದಲ್ಲಿ ತನ್ನ ಬದುಕನ್ನು ನಡೆಸುತ್ತಿದ್ದಾಳೆ, ಇಂದಿನ ಬಹುತೇಕ ಮಹಿಳೆಯರು ಸಂಜೆ ಸಮಯವನ್ನು ಟಿ.ವಿ.ಅಥವಾ ಮೊಬೈಲ್‍ನಲ್ಲಿ ಕಳೆಯುತ್ತಿದ್ದಾರೆ. ಮಕ್ಕಳ ಬಗ್ಗೆ ನಿಗಾವಹಿಸುತ್ತಿಲ್ಲ ಇದರಿಂದ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಇದರ ಬಗ್ಗೆ ಪೋಷಕರು ನಿಗಾವಹಿಸಬೇಕಿದೆ. ನಮ್ಮ ಸಂಸ್ಕøತಿಯನ್ನು ಹೊರ ದೇಶದವರು ಅನುಸರಿಸುತ್ತಿದ್ದಾರೆ, ಅವರ ಸಂಸ್ಕøತಿಯನ್ನು ನಾವುಗಳು ಅನುಸರಿಸುತ್ತಿದ್ದೇವೆ ಮಕ್ಕಳಿಗೆ ಸಾಧ್ಯವಾದಷ್ಟು ಮೊಬೈಲ್ ನೀಡದೆ ಟಿ.ವಿ.ಯನ್ನು ತೋರಿಸದೇ ಬೆಳಸಿ ಇದರಿಂದ ಅವರು ಮುಂದೆ ಉತ್ತಮ ಪ್ರಜೆಗಳಾಗಲು ಸಾಧ್ಯವಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ)ನ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಗೀತಾ ಬಿ ಮಾತನಾಡಿ, ಹಿಂದಿನ ಕಾಲದಲ್ಲಿ ಬೆಳ್ಳಿಗ್ಗೆ ಎದ್ದ ಮಹಿಳೆ ರಾತ್ರಿಯವರೆಗೂ ಸಹಾ ಕೆಲಸದಲ್ಲಿ ತಲ್ಲಿನರಾಗುತ್ತಿದ್ದಳು ಇದರಿಂದ ಅವಳು ಆರೋಗ್ಯ ಚನ್ನಾಗಿ ಇತ್ತು ಆದರೆ ಇಂದಿನ ದಿನದಲ್ಲಿ ಬಹುತೇಕ ಮಹಿಳೆಯರ ಕೆಲಸಗಳಿಗೆ ಯಂತ್ರದ ಮೊರೆ ಹೋಗಿದ್ದಾರೆ ಇದರಿಂದ ಅವರು ಸೋಮಾರಿಗಳಾಗಿದ್ದಾರೆ. ಯಂತ್ರದ ಮೂಲಕ ಕೆಲಸವನ್ನು ಮಾಡಿಸಿ ಉಳಿದ ಸಮಯವನ್ನು ಮೊಬೈಲ್‍ನಲ್ಲಿ ಕಳೆಯುತ್ತಿದ್ದಾರೆ. ಮನೆಯ ಆಗು-ಹೋಗುಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಇದರಿಂದ ಮಕ್ಕಳು ಹಾದಿ ತಪ್ಪುತ್ತಿದ್ದಾರೆ. ಈ ರೀತಿಯಾಗಿ ದಾರಿ ತಪ್ಪಿದ ಮಕ್ಕಳಿಂದ ಮುಂದೆ ಸಮಾಜಕ್ಕೆ ಹಾನಿಯಾಗಲಿದೆ ಎಂದರು.

ರಾಜ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ 6.30 ಲಕ್ಷ ಸ್ವಸಹಾಯ ಸಂಘ ಗಳಿದ್ದು ಇದರಲ್ಲಿ 50 ಲಕ್ಷ ಸದಸ್ಯರಿದ್ದಾರೆ, ಇವರಿಗೆ ಆರ್ಥಿಕವಾಗಿ ಸಹಾಯವನ್ನು ಮಾಡುವುದರ ಮೂಲಕ ಅವರ ಆರ್ಥಿಕ ಪ್ರಗತಿಗೆ ನೆರವಾಗುತ್ತಿದೆ, ಇದ್ದಲ್ಲದೆ ಮಹಿಳೆಯರಲ್ಲಿ ವಿವಿಧ ವಿಷಯಗಳ ಬಗ್ಗೆ ಜಾಗೃತಿಯನ್ನು ಮೂಡಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ನಿರ್ಗತಿಕರಿಗೆ ಹಿರಿಯರಿಗೆ ನಮ್ಮ ಸಂಸ್ಥೆ ನೆರವಾಗುತ್ತಿದೆ ಎಂದು ಶ್ರೀಮತಿ ಗೀತಾ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‍ನ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ರೂಪ ಜನಾರ್ಧನ್ ಮಾತನಾಡಿ, ಮನೆಯಲ್ಲಿ ಪೋಷಕರು ತಮ್ಮ ಮಕ್ಕಳ ಬಗ್ಗೆ ನಿಗಾವಹಿಸಬೇಕಿದೆ ಅವರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಗಮನವನ್ನು ನೀಡುವುದರ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವ ಹೊಣೆಗಾರಿಕೆ ನಿಮ್ಮಗಳ ಮೇಲಿದೆ. ಸಾಧ್ಯವಾದಷ್ಟು ನಾವುಗಳು ಹಿಂದಿನ ಕಾಲದ ಪದ್ದತಿಯಂತೆ ನಮ್ಮ ಜೀವನವನ್ನು ಅಳವಡಿಸಿಕೊಳ್ಳಬೇಕಿದೆ. ಇದರಿಂದ ನಮ್ಮ ಬದಕು ಸುಂದರವಾಗಲಿದೆ. ಮಕ್ಕಳಿಗೆ ಭಯವನ್ನು ಇಡಿ ಸುಖಕ್ಕಿಂತ ಕಷ್ಟದ ಬದುಕನ್ನು ಅವರಿಗೆ ತೋರಿಸಿ ಇದರಿಂದ ಮುಂದೆ ಅವರಿಗೆ ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆ, ಪುಷ್ಪಗುಚ್ಚ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾಣವನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಜ್ಞಾನವಿಕಾಸ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಚಂದ್ರಹಾಸ, ಶಿವಕುಮಾರ್ ಭಾಗವಹಿಸಿದ್ದರು.

Views: 165

Leave a Reply

Your email address will not be published. Required fields are marked *