Dr. K.Nandini : ಭಾರತೀಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ಮೂರನೇ ಬಾರಿಗೆ ಉಡಾವಣೆ ಮಾಡಿದ ಚಂದ್ರಯಾನಾ-3 ವಿಜ್ಞಾನಿಗಳ ತಂಡದಲ್ಲಿ ಬಾಳೆಹೊನ್ನೂರು ಪಟ್ಟಣದ ಡಾ. ಕೆ.ನಂದಿನಿ ತಮ್ಮ ಸೇವೆಯನ್ನು ಸಲ್ಲಿಸಿ ನಾಡಿಗೆ ಕೀರ್ತಿ ತಂದಿದ್ದಾರೆ.

Chandrayana-3 : ನಿನ್ನೆ (ಜುಲೈ 14) ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಲ್ಲಿ ಚಂದ್ರಯಾನಾ-3 ರಾಕೆಟ್‌ನ್ನು ಉಡಾವಣೆ ಮಾಡಲಾಯಿತು. ಸುಮಾರು 43 ದಿನಗಳ ಬಳಿಕ ರಾಕೆಟ್ ಚಂದ್ರನ ಅಂಗಳಕ್ಕೆ ಕಾಲಿಡಲಿದೆ ಎನ್ನಲಾಗಿದೆ.
ಇನ್ನು ಈ ನಡುವೆ ಕನ್ನಡಿಗರಿಗೆ ಮತ್ತೊಂದು ಹೆಮ್ಮೆ ಪಡುವ ಸುದ್ದಿ ಸಿಕ್ಕಿದೆ. ಹೌದು ಉಡಾವಣೆ ಮಾಡಲಾದ ಚಂದ್ರಯಾನಾ-3 ವಿಜ್ಞಾನಿಗಳ ತಂಡದಲ್ಲಿ ಕೆಲಸ ಮಾಡಿ ಕನ್ನಡಿಗರೊಬ್ಬರು ಯಶಸ್ವಿ ಉಡಾವಣೆಯಲ್ಲಿ ಪಾಲು ಪಡೆದಿದ್ದಾರೆ.
ಭಾರತೀಯ ಬಹುಕನಸಿನ ಚಂದ್ರಯಾನಾ-3 ಯೋಜನೆಯ ವಿಜ್ಞಾನಿಗಳ ತಂಡದಲ್ಲಿದ್ದ ಕರ್ನಾಟಕ ಮೂಲದ ಬಾಳೆಹೊನ್ನೂರು ಪಟ್ಟಣದಲ್ಲಿ ಕಾಫಿ ಉದ್ಯಮ ನಡೆಸುತ್ತಿರುವ ಕೇಶವ ಮೂರ್ತಿ ಮತ್ತು ಮಂಗಳ ದಂಪತಿಗಳ ಪುತ್ರಿ ಡಾ. ಕೆ. ನಂದಿನಿ. ಇವರು ಕಳೆದ 8 ವರ್ಷದಿಂದ ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಡಾ. ಕೆ. ನಂದಿನಿ 2019ರ ಚಂದ್ರಯಾನಾ-2 ತಂಡದಲ್ಲಿಯೂ ಭಾಗವಹಿಸಿದ್ದರು. ಇದೀಗ ಚಂದ್ರಯಾನಾ-3 ತಂಡದಲ್ಲಿಯೂ ಕಾರ್ಯ ನಿರ್ವಹಿಸಿ ಕನ್ನಡಿಗರ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಾಳೆಹೊನ್ನೂರಿನ ನಿರ್ಮಲಾ ಕಾನ್ವೆಂಟ್‌ನಲ್ಲಿ ಮುಗಿಸಿ ನಂತರ 12ನೇ ತರಗತಿಯವರೆಗೆ ಸೀಗೋಡು ನವೋದಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ, ಮುಂದೆ ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಬಿಎಸ್ಸಿ, ಎಂಎಸ್ಸಿ, ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು 5 ವರ್ಷಗಳ ಪಿಎಚ್‌ಡಿಯನ್ನು ಸುರತ್ಕಲ್‌ನಲ್ಲಿ ಪೊರೈಸಿ, ಇದೀಗ ಬೆಂಗಳೂರಿನ ಇಸ್ರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನು ಈ ಚಂದ್ರಯಾನಾ-3 ಯಶಸ್ವಿ ಉಡಾವಣೆಯಲ್ಲಿ ಡಾ. ಕೆ. ನಂದಿನಿ ಪಾಲ್ಗೊಂಡಿರುವುದು ಅವರ ಕುಟುಂಬದವರಿಗೂ ಹಾಗೂ ಸ್ಥಳೀಯರಿಗೂ ಹರ್ಷ ತಂದಿದೆ. ಇಷ್ಟೇ ಅಲ್ಲದೇ ಕನ್ನಡ ವಿಜ್ಞಾನಿಗಳಾದ ಮಂಗಳೂರಿನ ಸುಮಾ, ಬೆಳಗಾವಿಯ ಪ್ರಕಾಶ್ ಪಡ್ನೇಕರ್ ಸಹ ಚಂದ್ರಯಾನಾ-3 ಉಡಾವಣೆ ಕಾರ್ಯದಲ್ಲಿ ಭಾಗಿಯಾಗಿರುವುದು ಹೆಮ್ಮೆ ಮೂಡಿಸಿದೆ.