ಫೆ.17–18ರಂದು ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಅಧ್ಯಕ್ಷರಾಗಿ ಡಾ. ಕೆ.ಆರ್. ಸಂಧ್ಯಾರೆಡ್ಡಿ ಆಯ್ಕೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 27

ನಗರದಲ್ಲಿ ಫೆ.17-18ರಂದು ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ.ಕೆ.ಆರ್. ಸಂಧ್ಯಾರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸಾಮಾಜಿಕ ಸಾಂಸ್ಕೃತಿಕ ಹೋರಾಟಗಳಲ್ಲಿ ಸಂಧ್ಯಾರೆಡ್ಡಿಯವರು ಚಿತ್ರದುರ್ಗದ ಸ್ವಾತಂತ್ರ್ಯ ಹೋರಾಟಗಾರರ ಮನೆತನದಿಂದ ಬಂದವರು. ಅವರ ಇಬ್ಬರು ತಾತಂದಿರೂ (ಎಂ.ರಾಮರೆಡ್ಡಿ ಹಾಗೂ ಎಂ.ಗೋವಿಂದರೆಡ್ಡಿ) ಅರಣ್ಯ ಸತ್ಯಾಗ್ರಹದಲ್ಲಿ ಭಾಗವಹಿಸಿ ಜೈಲುಶಿಕ್ಷೆ ಅನುಭವಿಸಿದವರು. ಈ ಮನೆತನದ ಮಹಿಳೆಯರೂ ಸಹ ಖಾದಿ ಉಡುಗೆಯನ್ನು ಧರಿಸಿ ಸರಳ ಜೀವನ ನಡೆಸುತ್ತ ಸ್ವಾತಂತ್ರ್ಯ ಹೋರಾಟಗಾರರ ಕಷ್ಟ ಸುಖಗಳಿಗೆ ಸ್ಪಂದಿಸಿದವರು. ಜಾತಿ ಅಂತಸ್ತುಗಳ ಭೇದಭಾವವಿಲ್ಲದೆ, ಮೂಢನಂಬಿಕೆ ಕಂದಾಚಾರಗಳಿಂದ ದೂರವಾಗಿ, ಸ್ವತಂತ್ರವಾದ ಮುಕ್ತವಾದ ಆರೋಗ್ಯಕರವಾದ ವಾತಾವರಣದಲ್ಲಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಬೆಳೆದಿರುವ’ ಸಂಧ್ಯಾರೆಡ್ಡಿಯವರ ಬರಹಗಳಲ್ಲಿಯೂ ಈ ಅಂಶ ಎದ್ದು ಕಾಣುತ್ತದೆ. ಇಂದಿಗೂ ಸಾಮಾಜಿಕ ಸಾಂಸ್ಕೃತಿಕ ರಂಗಗಳಲ್ಲಿ ಕ್ರಿಯಶೀಲರಾಗಿರುವ ಇವರ ಕೆಲವು ಮುಖ್ಯ ಚಟುವಟಿಕೆಗಳು ಹೀಗಿವೆ: ಮಹಿಳಾ ಮೀಸಲಾತಿ ಕುರಿತಂತೆ ಪಕ್ಷಭೇದವಿಲ್ಲದೆ ರಾಷ್ಟ್ರಪತಿ, ಪ್ರಧಾನಮಂತ್ರಿ, ವಿರೋಧಪಕ್ಷಗಳ ನಾಯಕರನ್ನು ಭೇಟಿಮಾಡಿ ಮನವಿ ಸಲ್ಲಿಸಲು ದೆಹಲಿಗೆ ತೆರಳಿದ ಕರ್ನಾಟಕದ ಮಹಿಳಾ ನಿಯೋಗದಲ್ಲಿ ಲೇಖಕಿಯರ ಸಂಘದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.

ಸಾಹಿತ್ಯ ವಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಇದುವರೆಗೂ ಒಮ್ಮೆಯೂ ಸಹ ಮಹಿಳಾ ಅಧ್ಯಕ್ಷರನ್ನು ನೇಮಕವಾಗಿರಲಿಲ್ಲ. ಹಾಗಾಗಿ ಈ ಬಾರಿಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಡಾ.ಕೆ.ಆರ್.ಸಂಧ್ಯಾರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿದ್ದು ಇವರು ಶಿಕ್ಷಣ ತಜ್ಞರಾಗಿದ್ದಾರೆ 12ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದು, ಸಾಹಿತ್ಯ ಸಾಧನೆಗೆ, ಬೆಂಗಳೂರಿನ ನಗರ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು, ರಾಜ್ಯದಲ್ಲಿ ವಿವಿಧ ರೀತಿಯ ಹುದ್ದೆಗಳನ್ನು ಅಲಂಕಾರ ಮಾಡಿದ್ದಾರೆ. 6 ಕಾವ್ಯ, ಒಂದು ಕಥಾ ಸಂಕಲನ, ಒಂದು ಆಂಕಣ ಬರಹ, 8 ಜನರ ಜೀವನ ಚರಿತೆ, ಒಂದು ಜನಾಂಗೀಯ ಅಧ್ಯಯನ, 11 ಜಾನಪದ ಕೃತಿಗಳು, 10 ಸಂಪಾದಿತ ಜಾನಪದ ಕೃತಿಗಳು, ಎರಡು ಅನುವಾದಿತ ಜಾನಪದ ಕೃತಿಗಳು 12 ಮಹಿಳಾ ಸಾಹಿತ್ಯ ಮತ್ತು ಮಹಿಳಾ ಅಧ್ಯಯನ ಸಂಪಾದಿತ ಕೃತಿಗಳು. 13 ಭಾಷಾಂತರ ಕೃತಿಗಳು ರಚನೆ ಮಾಡಿದ್ದಾರೆ ಎಂದು ತಿಳಿಸಿದರು.

ಲೇಖಕಿಯರ ಸಂಘದ ಅಧ್ಯಕ್ಷರಾಗಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ 2005 ರಿಂದ 2011ರವರೆಗೆ ಆರು ವರ್ಷ ಕಾರ್ಯ ನಿರ್ವಹಿಸಿ ಅನೇಕ ವಿಶಿಷ್ಟ ಸಾಧನೆಗಳನ್ನು ಮಾಡಿದ್ದಾರೆ. ಲೇಖಕಿಯರ ಸಂಘವು ಮಹಿಳಾ ಸಾಹಿತ್ಯ ಕುರಿತಂತೆ ಒಂದು ಉತ್ತಮ ಮಾಹಿತಿ ಕೇಂದ್ರವಾಗಬೇಕು ಎಂಬ ನಿಟ್ಟಿನಲ್ಲಿ ಹಿರಿಯ ಲೇಖಕಿಯರ ಮತ್ತು ಸರ್ಕಾರ ಹಾಗೂ ಅಕಾಡಮಿಗಳ ಗೌರವ ಪುರಸ್ಕೃತ ಲೇಖಕಿಯರ ಭಾವಚಿತ್ರಗಳನ್ನು ಸಂಗ್ರಹಿಸಿ ಸಂಘದಲ್ಲಿ ಪ್ರದರ್ಶಿಸಿದ್ದು, ಮೊತ್ತ ಮೊದಲ ಬಾರಿಗೆ ಲೇಖಕಿಯರಿಗಾಗಿ ರಾಜ್ಯಮಟ್ಟದ ಹವ್ಯಾಸಿ ಪತ್ರಿಕೋದ್ಯಮ ಶಿಬಿರ, ನಾಟಕ ಹಾಗೂ ರೂಪಕ ರಚನೆಗಳಲ್ಲಿ ಹೆಚ್ಚು ತೊಡಗಿಕೊಳ್ಳುವಂತೆ ನಾಟಕ ಶಿಬಿರಗಳು, ಬಿಳಿಗಿರಿ ರಂಗನ ಬೆಟ್ಟದಲ್ಲಿ ಪ್ರವಾಸಸಾಹಿತ್ಯ ಶಿಬಿರ, ರಾಜ್ಯ ಮಟ್ಟದ ರಂಗೋಲಿಕಮ್ಮಟ, ಪಾಂಡಿಚೆರಿಯ ಕರ್ನಾಟಕ ಸಂಘದ ಸಹಯೋಗದೊಂದಿಗೆ ವಿವಿಧ ಭಾಷಾ ಲೇಖಕಿಯರ ಸಮಾವೇಶ, ಗ್ರಾಮಾಂತರ ಪ್ರದೇಶದ ಮಹಿಳೆಯರು ಹಾಗೂ ಲೇಖಕಿಯರಿಗಾಗಿ ಕಥಾಕಮ್ಮಟ, ಕಾವ್ಯಕಮ್ಮಟ, ಆರೋಗ್ಯ ಸಾಹಿತ್ಯ ಶಿಬಿರಗಳು ಉಲ್ಲೇಖನೀಯ. ಲೇಖಕಿಯರ ಸಮ್ಮೇಳನದಲ್ಲಿ ಗ್ರಾಮಾಂತರ ಮಹಿಳೆಯರೂ ಪಾಲ್ಗೊಳ್ಳುವಂತಾಗಬೇಕು ಎಂಬ ನಿಟ್ಟಿನಲ್ಲಿ ಮಂಡ್ಯದಲ್ಲಿ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ ನಡೆಸಲಾಯಿತು. ಹೀಗೆ ಎಲ್ಲ ವರ್ಗಗಳ ಎಲ್ಲ ಸ್ಥರಗಳ ಹಾಗೂ ಬೇರೆ ಬೇರೆ ಪ್ರದೇಶಗಳ ಮಹಿಳೆಯರನ್ನು, ಲೇಖಕಿಯರನ್ನು ಒಳಗೊಳ್ಳುವಂತೆ ವೈವಿಧ್ಯಪೂರ್ಣವಾದ ಹಾಗೂ ಉಪಯುಕ್ತವಾದ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಲೇಖಕಿಯರ ಬೆಳವಣಿಗೆಗೆ ಮತ್ತು ಸಂಘದ ಚಟುವಟಿಕೆಗಳಿಗೆ ಹೊಸ ಆಯಾಮಗಳನ್ನು ನೀಡಿದ ಹೆಗ್ಗಳಿಕೆ ಇದೆ.

ತಾಲೂಕು ಅಧ್ಯಕ್ಷ ಪ್ರಶಾಂತ್ ಮಾತನಾಡಿ ಡಾ.ಕೆ.ಆರ್. ಸಂಧ್ಯಾರೆಡ್ಡಿರವರು ಕಾವೇರಿ ನ್ಯಾಯ ಮಂಡಳಿಯ ತೀರ್ಪು ವಿರೋಧಿಸಿ ಕರ್ನಾಟಕದಾದ್ಯಂತ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಲೇಖಕಿಯರ ಸಂಘವು ಇವರ ಮುಂದಾಳತ್ವದಲ್ಲಿ ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದು. ಮಹಿಳಾ ಮೀಸಲಾತಿ ಕುರಿತು ಸಂವಾದ ಕಾರ್ಯಕ್ರಮಗಳು, ಬಿಸಿ ಊಟದ ಸಂಬಂಧವಾಗಿ ನಡೆದ ಚರ್ಚೆ ಹೋರಾಟಗಳು, ಜಯಮಾಲಾರ ಅಯ್ಯಪ್ಪಸ್ವಾಮಿ ಪಾದಸ್ಪರ್ಶ ಪ್ರಕರಣ ಮೊದಲಾದ ವಿಷಯಗಳಲ್ಲದೆ ಮಹಿಳಾ ದಿನಾಚರಣೆ ಹಾಗೂ ರಾಜ್ಯೋತ್ಸವ ಸಂದರ್ಭಗಳಲ್ಲಿ ಸಾಂದರ್ಭಿಕವಾದ ಉಪನ್ಯಾಸಗಳನ್ನು ನೀಡುತ್ತ, ಗ್ರಾಮೀಣ ಮಹಿಳೆಯರಿಗೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಾಹಿತ್ಯ, ಸಂಸ್ಕೃತಿ, ಭಾಷೆಗಳ ಬಗ್ಗೆ ಅರಿವು ಮೂಡಿಸುವಂಥ ಉಪನ್ಯಾಸಗಳನ್ನು ನೀಡುತ್ತಾ ನಿರಂತರವಾಗಿ ಕ್ರಿಯಾಶೀಲ ರಾಗಿದ್ದಾರೆ. ಹೆಣ್ಣು ಮಕ್ಕಳನ್ನು ಯಾರು ಸಹ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರಲಿಲ್ಲ ಎಂಬ ಕೊರಗು ಸಹ ನಮಗಿತ್ತು. ಆದರೆ ಈ ಬಾರಿ ಒಬ್ಬ ಮಹಿಳೆಯನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಎಲ್ಲಾ ಸಾರ್ವಜನಿಕರು ಕನ್ನಡ ಸಾಹಿತ್ಯ ಪರಿಷತ್‍ಗೆ ಬೆಂಬಲವನ್ನು ಕೋರುತ್ತೇವೆ ಎಂದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಇದ್ದರು.

Views: 13

Leave a Reply

Your email address will not be published. Required fields are marked *