ದಾವಣಗೆರೆಯಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಕೋಮುಗಲಭೆ: ಕಲ್ಲುತೂರಾಟದವರೆಗೆ ಮುಂದುವರಿಯಿತೇ ಧ್ವಜ ಗಲಾಟೆ?

ದಾವಣಗೆರೆ: ಗಣಪತಿ ವಿಸರ್ಜನೆ ವೇಳೆ ಎರಡು ಕೋಮುಗಳ ನಡುವೆ ಗಲಾಟೆ ನಡೆದಿದ್ದು, ಕ್ಷಣಾರ್ಧದಲ್ಲಿ ಎಸ್ಪಿ ಉಮಪ್ರಶಾಂತ್ ಪರಿಸ್ಥಿತಿ ಶಾಂತಗೊಳಿಸಿದ್ದಾರೆ. ಆದರೆ ಈ ವೇಳೆ ನಡೆದ ಕಲ್ಲುತೂರಾಟದಲ್ಲಿ ಮಹಿಳಾ ಕಾನ್ ಸ್ಟೇಬರ್ ಸೇರಿದಂತೆ ಒಟ್ಟು ನಾಲ್ಕು ಮಂದಿಗೆ ಗಾಯಗಳಾಗಿವೆ.

ನಗರದ ವೆಂಕಟೇಶ್ವರ ವೃತ್ತದಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಐದು ದಿನದ ಹಿಂದೆ ಮೊಹರಂ ಧ್ವಜ ಕಟ್ಟುವ ವಿಚಾರದಲ್ಲಿ ನಡೆದ ಗಲಾಟೆಯ ಮುಂದುವರಿದ ಭಾಗ ಇದು ಎಂದು ಹೇಳಲಾಗಿದೆ.

ಮೆರವಣಿಗೆಯುದ್ದಕ್ಕೂ ಕಲ್ಲುತೂರಾಟ

ಬೇತೂರು ರಸ್ತೆ ಕ್ರಾಸ್ ಬಳಿಯ ಗಣೇಶ ವಿಸರ್ಜನೆ ಮೆರವಣಿಗೆ ಹೊರಟ್ಟಿತ್ತು, ಈ ವೇಳೆ ವೆಂಕಟೇಶ್ವರ ವೃತ್ತಕ್ಕೆ ಮೆರವಣಿಗೆ ಬಂದಾಗ ಅನ್ಯ ಕೋಮಿನ ಜನರು ಘೋಷಣೆ ಕೂಗಿದ್ದಾರೆ. ಇದಕ್ಕೆ ಪ್ರತಿಯಾಗಿ ಮತ್ತೊಂದು ಕೋಮಿನ ಜನರು ಘೋಷಣೆ ಕೂಗಿದ್ದಾರೆ. ಈ ವೇಳೆ ವಾಗ್ವಾದ ಉಂಟಾದ ಹಿನ್ನಲೆ ಅನ್ಯ ಕೋಮಿನವರು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದ್ದು, ಇಬ್ಬರು ಪೊಲೀಸ್ ಪೇದೆಗಳು ಸೇರಿದಂತೆ ನಾಲ್ಕೈದು ಮಂದಿ ಗಾಯಗೊಂಡಿದ್ದಾರೆ, ಪೊಲೀಸ್ ಪೇದೆಗಳಾದ ರಘು, ಅನ್ನಪೂರ್ಣಗೆ ತಲೆಗೆ ಪೆಟ್ಟಾಗಿದ್ದು, ಗಾಯಗೊಂಡು ಆಸ್ಪತ್ರೆಗೆ ತೆರಳಿದ್ದಾರೆ.

ಇನ್ನೂ ಮೆರವಣಿಗೆ ಉದ್ದಕ್ಕೂ ಕ್ರಾಸ್ ಬಳಿ ನಿಂತು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದ್ದು, ಈ ಹಿನ್ನಲೆ ಉದ್ವಿಗ್ನ ವಾತಾವರಣ ನಿರ್ಮಾಣ ಆಗಿದೆ. ಸ್ವತಃ ಎಸ್ಪಿ ಉಮಾ ಪ್ರಶಾಂತ್ ಲಾಠಿ ಹಿಡಿದು ಜನರನ್ನೂ ಚದುರಿಸಿಲು ಮುಂದಾದರು. ಪರಿಸ್ಥಿತಿ ಈಗ ಶಾಂತವಾಗಿದೆ. ಕಲ್ಲು ತೂರಿದ ಕಿಡಿಗೇಡಿಗಳನ್ನೂ ಬಂಧಿಸಿ ಎಂದು ಹಿಂದೂ ಪರ ಕಾರ್ಯಕರ್ತರು ಪಟ್ಟು ಹಿಡಿದು ಕೂತಿದ್ದಾರೆ.

ಧ್ವಜ ವಿಚಾರದಲ್ಲಿ ಶುರುವಾದ ಗಲಾಟೆ

ಐದು ದಿನ ಹಿಂದಷ್ಟೇ ಮೊಹರಂ ಹಬ್ಬದ ವೇಳೆ ಧ್ವಜ ಕಟ್ಟುವ ವಿಚಾರದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಯುವಕರ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಸಂಬಂಧ ಹಿಂದೂ ಪರ ಸಂಘಟನೆ ಮುಖಂಡ ಸತೀಶ್ ಪೂಜಾರಿ ಪ್ರಚೋದನೆಕಾರಿ ಹೇಳಿಕೆ ನೀಡಿದ್ದರು. ಈ ವೇಳೆ ಬೇತೂರು ರಸ್ತೆಗೆ ಬರುವಂತೆ ಮುಸ್ಲಿಂ ಸಮುದಾಯದವರು ಸವಾಲು ಹಾಕಿದ್ದರು. ಅದರಂತೆ ಗುರುವಾರ ಸಂಜೆ ಸತೀಶ್ ಪೂಜಾರಿ ಬೇತೂರು ರಸ್ತೆಗೆ ಬಂದಿದ್ದಾರೆ. ಈ ವಿಷಯ ತಿಳಿದು ಮುಸ್ಲಿಂ ಸಮುದಾಯದ ಸಾವಿರಾರು ಜನ ಬೇತೂರು ರಸ್ತೆಯಲ್ಲಿ ಸೇರಿದ್ದಾರೆ. ಇದೆ ವೇಳೆ ಹಿಂದೂ ಸಮುದಾಯದವರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಇದೇ ಸಮಯಕ್ಕೆ ಬೇತೂರು ರಸ್ತೆಯ ವೆಂಕಟೇಶ್ವರ ವೃತ್ತದಿಂದ ಗಣೇಶೋತ್ಸವ ಮೆರವಣಿಗೆ ಬಂದಿದೆ.

ಧ್ವಜ ಕಟ್ಟುವ ವಿಚಾರದಲ್ಲಿ ಮಾತಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಬಂದೋಬಸ್ತ್ ನಡುವೆಯೂ ಕೆಲ ಕಿಡಿಗೇಡಿಗಳು ಗಣೇಶೋತ್ಸವ ಮೆರವಣಿಗೆ ಮೇಲೆ ಕಲ್ಲುತೂರಿದ್ದಾರೆ. ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದಂತೆ ಮೆರವಣಿಗೆ ಮುಂದೆ ಸಾಗಿದ್ದು, ಅರಳಿ ಮರ ತಲುಪುತ್ತಿದ್ದಂತೆ ಮತ್ತೊಮ್ಮೆ ಕಲ್ಲುತೂರಾಟ ನಡೆದಿದೆ. ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ.

Source : https://vijaykarnataka.com/news/davanagere/communal-violence-in-davanagere-ganeshotsava-visarjan-procession/articleshow/113500331.cms

Leave a Reply

Your email address will not be published. Required fields are marked *