ಎಸ್‌ಎಸ್‌ಎಲ್‌ಸಿ (SSLC) ಮುಗಿದ ಬಳಿಕ ಊರಿನಲ್ಲಿ ಕಾಲೇಜು ಇಲ್ಲ, ದೂರದ ಊರಿಗೆ ಹೋಗಲು ಕಷ್ಟ ಎಂದು ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸುವ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯದ ಆಯ್ದ 50 ಸರ್ಕಾರಿ ಪ್ರೌಢಶಾಲೆಗಳನ್ನು ಪದವಿಪೂರ್ವ (ಪಿಯು) ಕಾಲೇಜುಗಳಾಗಿ ಮೇಲ್ದರ್ಜೆಗೇರಿಸಲು ಶಿಕ್ಷಣ ಇಲಾಖೆಗೆ ಸರ್ಕಾರ ಹಸಿರು ನಿಶಾನೆ ತೋರಿದೆ.
ಇತ್ತೀಚೆಗಷ್ಟೇ 100 ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸಿದ್ದ ಸರ್ಕಾರ, ಇದೀಗ 2025-26ನೇ ಸಾಲಿನ ಬಜೆಟ್ ಘೋಷಣೆಯಂತೆ ಪ್ರೌಢಶಾಲೆಗಳನ್ನು ಪಿಯು ಕಾಲೇಜುಗಳನ್ನಾಗಿ ಪರಿವರ್ತಿಸುತ್ತಿದೆ. ಮೊದಲ ಹಂತದಲ್ಲಿ ಒಂದೆರಡು ಸಂಯೋಜನೆಗಳ (Combinations) ಜೊತೆ ತರಗತಿಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ.
ಯೋಜನೆಯ ಪ್ರಮುಖ ನಿಯಮಗಳು ಹಾಗೂ ಸೌಲಭ್ಯಗಳು:
- ಆದ್ಯತೆ ಯಾರಿಗೆ?: 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಪಿಯು ಕಾಲೇಜು ಇಲ್ಲದ ಪ್ರದೇಶಗಳನ್ನು ಗುರುತಿಸಿ, ಅಲ್ಲಿನ ಪ್ರೌಢಶಾಲೆಗಳನ್ನು ಕಾಲೇಜುಗಳಾಗಿ ಪರಿವರ್ತಿಸಲಾಗುತ್ತಿದೆ.
- ವಿದ್ಯಾರ್ಥಿಗಳ ಸಂಖ್ಯೆ: ಮೇಲ್ದರ್ಜೆಗೇರಿಸಲಾಗುವ ಶಾಲೆಯಲ್ಲಿ ಕನಿಷ್ಠ 40 ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಒಂದೊಮ್ಮೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರೆ ಈ ನಿಯಮ ಅನ್ವಯಿಸುವುದಿಲ್ಲ.
- ಅನುದಾನ ಎಲ್ಲಿಂದ?: ಹೊಸ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDB) ಹಾಗೂ ಸಿಎಸ್‌ಆರ್ (CSR) ನಿಧಿಯನ್ನು ಬಳಸಿಕೊಳ್ಳಲಾಗುತ್ತದೆ. ಈ ನಿಧಿಯಿಂದ ಮುಂದಿನ 3 ವರ್ಷಗಳ ಕಾಲ ಮೂಲಸೌಕರ್ಯಕ್ಕೆ ಅನುದಾನ ಸಿಗಲಿದೆ.
- ಉಪನ್ಯಾಸಕರ ನೇಮಕ: ಆರಂಭಿಕ ಹಂತದಲ್ಲಿ ಇತರ ಪಿಯು ಕಾಲೇಜುಗಳಲ್ಲಿರುವ ಹೆಚ್ಚುವರಿ ಉಪನ್ಯಾಸಕರನ್ನು ಈ ಹೊಸ ಕಾಲೇಜುಗಳಿಗೆ ನಿಯೋಜಿಸಲು ಇಲಾಖೆ ಚಿಂತಿಸಿದೆ. ಕೊರತೆ ಉಂಟಾದರೆ ಹೊಸ ಹುದ್ದೆಗಳ ಸೃಷ್ಟಿಗೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಯಾವ ಜಿಲ್ಲೆಗಳಿಗೆ ಎಷ್ಟು ಕಾಲೇಜು? ದಕ್ಷಿಣ ಕನ್ನಡ, ಮೈಸೂರು, ಶಿವಮೊಗ್ಗ, ಚಿಕ್ಕಬಳ್ಳಾಪುರ, ಬಾಗಲಕೋಟೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ತಲಾ 2 ಕಾಲೇಜುಗಳು ಮಂಜೂರಾಗಿವೆ. ಚಿತ್ರದುರ್ಗ, ಬೆಳಗಾವಿ, ಕೋಲಾರ, ವಿಜಯಪುರ, ಚಿಕ್ಕೋಡಿ, ಉತ್ತರ ಕನ್ನಡ ಮತ್ತು ಗದಗ ಜಿಲ್ಲೆಗಳಿಗೆ ತಲಾ 1 ಕಾಲೇಜು ಲಭ್ಯವಾಗಿದೆ. ಬೆಂಗಳೂರು ನಗರದ ಉತ್ತರ ಮತ್ತು ದಕ್ಷಿಣ ಭಾಗಗಳಿಗೆ ಸಿಎಸ್‌ಆರ್ ನಿಧಿಯಡಿ ತಲಾ 1 ಕಾಲೇಜು ಸ್ಥಾಪನೆಯಾಗಲಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆಕೆಆರ್ ಡಿಬಿ ಅನುದಾನ ಬಳಸಿ ಅತಿ ಹೆಚ್ಚು, ಅಂದರೆ 14 ಪ್ರೌಢಶಾಲೆಗಳು ಮೇಲ್ದರ್ಜೆಗೇರುತ್ತಿವೆ.
ವರದಿಗೆ ಸೂಚನೆ: “ಆಯ್ದ ಶಾಲೆಗಳಲ್ಲಿನ ದಾಖಲಾತಿ, ಲಭ್ಯವಿರುವ ಜಾಗ ಮತ್ತು ಮೂಲಸೌಕರ್ಯಗಳನ್ನು ಪರಿಶೀಲಿಸಿ ಒಂದು ವಾರದೊಳಗೆ ವರದಿ ನೀಡುವಂತೆ ಎಲ್ಲಾ ಜಿಲ್ಲೆಗಳ ಪಿಯು ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಶಾಲಾ ಶಿಕ್ಷಣ ಇಲಾಖೆಯ (ಪದವಿಪೂರ್ವ) ನಿರ್ದೇಶಕ ಭರತ್ ತಿಳಿಸಿದ್ದಾರೆ.
