ಮಹಾರಾಷ್ಟ್ರದ ಸಿಎಂ ರೇಸ್​ನಿಂದ ಹಿಂದೆ ಸರಿದ ಏಕನಾಥ್ ಶಿಂಧೆ; ದೇವೇಂದ್ರ ಫಡ್ನವಿಸ್ ಹಾದಿ ಸುಗಮ.

Maharashtra CM:ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ, ಎನ್​ಸಿಪಿ ಒಕ್ಕೂಟವಾದ ಮಹಾಯುತಿ ಜಯ ಸಾಧಿಸಿದೆ. ಬಿಜೆಪಿ ಮಹಾರಾಷ್ಟ್ರದಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುದ್ದಿಗಳು ಕೆಲವು ದಿನಗಳಿಂದ ಹರಿದಾಡಿದ್ದವು. ಇದೀಗ ಇಂದು ಈ ಸುದ್ದಿಗೆ ಇನ್ನಷ್ಟು ಪುಷ್ಟಿ ಸಿಕ್ಕಿದೆ. ಹಂಗಾಮಿ ಸಿಎಂ ಏಕನಾಥ್ ಶಿಂಧೆ ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಯಾವುದೇ ಆಸೆಯಿಲ್ಲ ಎಂದು ಹೇಳುವ ಮೂಲಕ ದೇವೇಂದ್ರ ಫಡ್ನವಿಸ್ ಹಾದಿಯನ್ನು ಸುಗಮಗೊಳಿಸಿದ್ದಾರೆ.

ಮುಂಬೈ: ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ಶೀಘ್ರದಲ್ಲೇ ತೆರೆ ಬೀಳುವ ಸಾಧ್ಯತೆಗಳು ಹೆಚ್ಚಾಗಿವೆ. ಮೂಲಗಳ ಪ್ರಕಾರ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವುದು ಖಚಿತವಾಗಿದೆ. ಕಳೆದ ಬಾರಿ ಏಕನಾಥ್ ಶಿಂಧೆ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವಿಸ್ ಈ ಬಾರಿ ಸಿಎಂ ಆಗುವುದು ಖಚಿತ ಎನ್ನಲಾಗುತ್ತಿದೆ. ಈ ಬಾರಿ ಮಹಾರಾಷ್ಟ್ರದಲ್ಲಿ ಮಿತ್ರಪಕ್ಷಗಳಿಗಿಂತ ಬಿಜೆಪಿಗೆ ಹೆಚ್ಚು ಸ್ಥಾನಗಳು ಸಿಕ್ಕಿರುವುದರಿಂದ ದೇವೇಂದ್ರ ಫಡ್ನವಿಸ್​ ಸಿಎಂ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯು ಮಹಾರಾಷ್ಟ್ರದಲ್ಲಿ ಸಿಎಂ ಅಭ್ಯರ್ಥಿಯ ಆಯ್ಕೆಯ ಕುರಿತು ಬಿಜೆಪಿ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಹೇಳಿದೆ. ಈ ಮೂಲಕ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದು ಬಹುತೇಕ ಖಚಿತವಾಗಿದೆ. ಆದರೆ, ಏಕನಾಥ್ ಶಿಂಧೆ ತಾವು ಸಿಎಂ ರೇಸ್​ನಿಂದ ಹಿಂದೆ ಸರಿಯಲು ಬೇರೊಂದು ಬೇಡಿಕೆಯಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಹಾರಾಷ್ಟ್ರ ಸರ್ಕಾರದಲ್ಲಿ ತಮ್ಮ ಮಗ ಶ್ರೀಕಾಂತ್ ಶಿಂಧೆಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಬೇಡಿಕೆಯನ್ನು ಏಕನಾಥ್ ಶಿಂಧೆ ಬಿಜೆಪಿ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಬಿಜೆಪಿ ಮೂಲಗಳ ಪ್ರಕಾರ, ಶಿವಸೇನೆ ಮತ್ತು ಎನ್‌ಸಿಪಿ ತಲಾ ಒಂದು ಉಪಮುಖ್ಯಮಂತ್ರಿ ಸ್ಥಾನವನ್ನು ಪಡೆಯಲಿವೆ. ಉಪಮುಖ್ಯಮಂತ್ರಿ ಪಾತ್ರವನ್ನು ಒಪ್ಪಿಕೊಳ್ಳುವ ಅಥವಾ ಕೇಂದ್ರ ಸಚಿವ ಸಂಪುಟಕ್ಕೆ ಸೇರುವ ಆಯ್ಕೆಯನ್ನು ಏಕನಾಥ್ ಶಿಂಧೆ ಅವರಿಗೆ ನೀಡಲಾಗಿದೆ ಎನ್ನಲಾಗಿದೆ. ಹೀಗಾಗಿ, ತನ್ನ ಬದಲು ತನ್ನ ಮಗನಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಬೇಡಿಕೆಯನ್ನು ಏಕನಾಥ್ ಶಿಂಧೆ ಇಟ್ಟಿದ್ದಾರೆ ಎನ್ನಲಾಗಿದೆ.

ಶಿವಸೇನೆ ನಾಯಕ ಏಕನಾಥ್ ಶಿಂಧೆ ಅವರು ದೇವೇಂದ್ರ ಫಡ್ನವಿಸ್ ನೇತೃತ್ವದ ಸಂಪುಟದಲ್ಲಿ ತಮ್ಮ ಪುತ್ರ ಶ್ರೀಕಾಂತ್ ಶಿಂಧೆ ಅವರನ್ನು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ನೇಮಕ ಮಾಡಬೇಕೆಂದು ಬಯಸಿದ್ದಾರೆ. ಮೂಲಗಳ ಪ್ರಕಾರ, ಈ ಬೇಡಿಕೆಯನ್ನು ಈಡೇರಿಸಿದರೆ ಸ್ವತಃ ಸರ್ಕಾರದಿಂದ ಹೊರಗುಳಿಯಲು ಸಿದ್ಧ ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ ಎನ್ನಲಾಗಿದೆ.

ಆದರೆ, ಈ ಪ್ರಸ್ತಾವಕ್ಕೆ ಅವರ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ. ಶಿವಸೇನೆಯ ಪ್ರಮುಖ ಗುಂಪಿನ ನಾಯಕರು ಶ್ರೀಕಾಂತ್ ಶಿಂಧೆ ಅವರನ್ನು ಉಪಮುಖ್ಯಮಂತ್ರಿ ಪಾತ್ರಕ್ಕೆ ಬಡ್ತಿ ನೀಡುವುದು ಪಕ್ಷದ ಇಮೇಜ್‌ಗೆ ಹಾನಿ ಮಾಡುತ್ತದೆ ಎಂದು ವಾದಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿರುವುದರಿಂದ ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. ನವೆಂಬರ್ 25 ರಂದು ರಾಷ್ಟ್ರ ರಾಜಧಾನಿಯ ಹಿರಿಯ ಬಿಜೆಪಿ ನಾಯಕರೊಬ್ಬರು ಏಕನಾಥ್ ಶಿಂಧೆ ಅವರಿಗೆ ಫೋನ್ ಮೂಲಕ ದೇವೇಂದ್ರ ಫಡ್ನವಿಸ್ ಮುಂದಿನ ಸಿಎಂ ಎಂದು ಹೇಳಿದರು. ಅದಾದ ನಂತರ ಏಕನಾಥ್ ಶಿಂಧೆ ನವೆಂಬರ್ 26ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇನ್ನೆರಡು ದಿನಗಳಲ್ಲಿ ಬಿಜೆಪಿ ವೀಕ್ಷಣಾ ತಂಡ ಮುಂಬೈಗೆ ಭೇಟಿ ನೀಡಲಿದೆ. ದೇವೇಂದ್ರ ಫಡ್ನವೀಸ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡುವ ವಿಧಿವಿಧಾನಗಳು ಪೂರ್ಣಗೊಳ್ಳಲಿವೆ ಎನ್ನಲಾಗಿದೆ.

ಮಹಾರಾಷ್ಟ್ರದಲ್ಲಿ ಸಂಪುಟ ರಚನೆಯ ಮೊದಲ ಹಂತದಲ್ಲಿ ಮುಖ್ಯಮಂತ್ರಿ, ಇಬ್ಬರು ಉಪಮುಖ್ಯಮಂತ್ರಿಗಳು ಹಾಗೂ 17ರಿಂದ 20 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಒಂದು ತಿಂಗಳೊಳಗೆ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಡಿಸೆಂಬರ್ 2ರಂದು ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಹೆಚ್ಚಾಗಿದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯತಿ ಮೈತ್ರಿಕೂಟವು 288 ಸ್ಥಾನಗಳಲ್ಲಿ 235 ಸ್ಥಾನಗಳನ್ನು ಗೆದ್ದು ಅದ್ಭುತ ಯಶಸ್ಸನ್ನು ದಾಖಲಿಸಿದೆ. ಬಿಜೆಪಿ 132 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಶಿವಸೇನೆ (ಏಕನಾಥ್ ಶಿಂಧೆ ಬಣ) 57 ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್​ಸಿಪಿ ಅಜಿತ್ ಪವಾರ್ ಬಣ) 41 ಸ್ಥಾನಗಳನ್ನು ಪಡೆದಿದೆ.

Source : https://tv9kannada.com/national/eknath-shinde-withdraws-from-maharashtra-cm-race-clears-way-for-bjp-devendra-fadnavis-kannada-news-sct-941524.html

Leave a Reply

Your email address will not be published. Required fields are marked *