Election Results 2024 : ತಲೆಕೆಳಗಾದ ”Exit poll” ಸಮೀಕ್ಷೆ, LIVEನಲ್ಲೇ ಕಣ್ಣೀರಿಟ್ಟ Axis My India ಮುಖ್ಯಸ್ಥ!

ಹೌದು.. ಹಾಲಿ ಲೋಕಸಭಾ ಚುನಾವಣಾ ಫಲಿತಾಂಶ ಬಹುತೇಕ ಎಲ್ಲ ಎಕ್ಸಿಟ್ ಪೋಲ್ ಸಮೀಕ್ಷೆಗಳ ವರದಿಗಳನ್ನು ತಲೆಕೆಳಗಾಗುವಂತೆ ಮಾಡಿದ್ದು, ಎನ್ ಡಿಎ ಮೈತ್ರಿಕೂಟಕ್ಕೆ ಭರ್ಜರಿ ಬಹುಮತ ನೀಡಿದ್ದ ಸಮೀಕ್ಷಾ ಸಂಸ್ಥೆಗಳು ಇದೀಗ ತಲೆ ಮೇಲೆ ಕೈಹೊತ್ತು ಕುಳಿತಿವೆ. ಇದೇ ವಿಚಾರವಾಗಿ ಇದೀಗ Axis My India ಮುಖ್ಯಸ್ಥ ಪ್ರದೀಪ್ ಗುಪ್ತಾ ಲೈವ್ ನಲ್ಲೇ ಕಣ್ಣೀರು ಹಾಕಿದ್ದಾರೆ.

ತಮ್ಮ ಸಂಸ್ಥೆ ನೀಡಿದ್ದ ಎಕ್ಸಿಟ್ ಪೋಲ್ ಸಮೀಕ್ಷಾ ವರದಿಗೂ ಹಾಲಿ ಚುನಾವಣಾ ಫಲಿತಾಂಶಕ್ಕೂ ಅಜಗಜಾಂತರ ವ್ಯತ್ಯಾಸ ತೋರಿಸುತ್ತಿದ್ದು, ಇದರಿಂದ ಭಾವೋದ್ವೇಗಕ್ಕೆ ಒಳಗಾದ ಪ್ರದೀಪ್ ಗುಪ್ತಾ ಟಿವಿ ಚಾನೆಲ್ ಲೈವ್ ನಲ್ಲೇ ಕಣ್ಣೀರು ಹಾಕಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ತರೇಹವಾರಿ ಸಾಲುಗಳೊಂದಿಗೆ ವೈರಲ್ ಆಗುತ್ತಿದೆ.

ಸಮೀಕ್ಷೆ ಏನು ಹೇಳಿತ್ತು?

ಆಕ್ಸಿಸ್ ಮೈ ಇಂಡಿಯಾ ತನ್ನ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿತ್ತು. ಎನ್‌ಡಿಎ 361-401 ಸ್ಥಾನ ಮತ್ತು ಇಂಡಿಯಾ ಬ್ಲಾಕ್ 131-166 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಇತರರು 8 ರಿಂದ 20 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಗಳಿವೆ ಎಂದು ಹೇಳಿತ್ತು. ಮಧ್ಯಾಹ್ನ ನಾಲ್ಕು ಗಂಟೆಯಾದ್ರೂ ಎನ್‌ಡಿಗೆ 300ರ ಗಡಿ ದಾಟಲು ಸಾಧ್ಯವಾಗುತ್ತಿಲ್ಲ. ಇನ್ನು ಎನ್‌ಡಿಐಎ ಒಕ್ಕೂಟ 230+ ನಲ್ಲಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್

ಇದೇ ಕಾರಣಕ್ಕೆ ಇದೀಗ ಆಕ್ಸಿಸ್ ಮೈ ಇಂಡಿಯಾ ಸೇರಿದಂತೆ ಎಲ್ಲ ಚುನಾವಣಾ ಸಮೀಕ್ಷಾ ಸಂಸ್ಥೆಗಳನ್ನು ನೆಟ್ಟಿಗರು ವ್ಯಾಪಕ ಟ್ರೋಲ್ ಮಾಡಲಾರಂಭಿಸಿದ್ದಾರೆ. ಅಲ್ಟ್ ನ್ಯೂಸ್ ಸ್ಥಾಪಕ ಮೊಹಮ್ಮದ್ ಜುಬೈರ್, ಎರಡು ಎಮೋಜಿಗಳ ಜೊತೆ ಪ್ರದೀಪ್ ಗುಪ್ತಾ ಅಳುತ್ತಿದ್ದಾರೆ ಎಂದು ಬರೆದುಕೊಂಡು ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ.

ಬಿಜೆಪಿಗೆ ಕೈಕೊಟ್ಟ ಉತ್ತರ ಪ್ರದೇಶ

ಈ ಬಾರಿ ಎಲ್ಲಾ ಎಕ್ಸಿಟ್‌ ಪೋಲ್‌ಗಳ ಲೆಕ್ಕಾಚಾರವನ್ನು ಉತ್ತರಪ್ರದೇಶ ರಾಜ್ಯ ಉಲ್ಟಾ ಮಾಡಿದೆ. ರಾಮ ಮಂದಿರ ವಿಚಾರದಿಂದ ದೊಡ್ಡ ಮಟ್ಟದ ಗೆಲುವಿನ ಅಲೆ ನಿರೀಕ್ಷೆ ಮಾಡಿದ್ದ ಬಿಜೆಪಿಗೆ ಅತಿದೊಡ್ಡ ಶಾಕ್‌ ಎದುರಾಗಿದೆ. ಪ್ರಸ್ತುತ ಮಾಹಿತಿಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ ಮುನ್ನಡೆಗಾಗಿ ಬಿಜೆಪಿ ಹಾಗೂ ಇಂಡಿ ಒಕ್ಕೂಟದ ನಡುವೆ ಥ್ರಿಲ್ಲಿಂಗ್‌ ಫೈಟ್‌ ನಡೆಯುತ್ತಿದೆ. ಉತ್ತರ ಪ್ರದೇಶ ರಾಜ್ಯದ ಫಲಿತಾಂಶ ಇಂಡಿಯಾ ಬ್ಲಾಕ್‌ ಪಾಲಿಗೂ ಅಚ್ಚರಿ ತಂದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಉತ್ತರ ಪ್ರದೇಶದಲ್ಲಿ ಇಂಡಿಯಾ ಒಕ್ಕೂಟ ನಿರೀಕ್ಷೆಗಿಂತ ಉತ್ತಮ ಪ್ರದರ್ಶನ ನೀಡುತ್ತಿದೆ.

Source : https://www.kannadaprabha.com/nation/2024/Jun/04/election-results-2024-axis-my-indias-pradeep-gupta-breaks-down-as-projections-for-lok-sabha-election-result-falls-short

 

Leave a Reply

Your email address will not be published. Required fields are marked *