IND vs ENG: ಮಿಂಚಿದ ಸಿರಾಜ್, ಪ್ರಸಿದ್ಧ್; 247 ರನ್​ಗಳಿಗೆ ಇಂಗ್ಲೆಂಡ್‌ ಆಲೌಟ್.

ಓವಲ್ ಟೆಸ್ಟ್ (Oval Test) ಪಂದ್ಯದ ಎರಡನೇ ದಿನದಾಟದ ಮೊದಲ ಸೆಷನ್​ನಲ್ಲಿ ಟೀಂ ಇಂಡಿಯಾವನ್ನು 224 ರನ್​ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್‌ ತಂಡ ಕೂಡ ಎರಡನೇ ದಿನದಾಟ ಮುಗಿಯುವುದಕ್ಕೂ ಮುನ್ನವೇ ತನ್ನ ಇನ್ನಿಂಗ್ಸ್ ಮುಗಿಸಿದೆ. ಎರಡನೇ ದಿನದಾಟದ ಕೊನೆಯ ಸೆಷನ್​ನಲ್ಲಿ ಹ್ಯಾರಿ ಬ್ರೂಕ್ (Harry Brook) ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಸಿರಾಜ್ ಇಂಗ್ಲೆಂಡ್‌ ಇನ್ನಿಂಗ್ಸ್​ಗೆ ಅಂತ್ಯ ಹಾಡಿದರು.

ಅಂತಿಮವಾಗಿ ಇಂಗ್ಲೆಂಡ್‌ 247 ರನ್ ಕಲೆಹಾಕಿದ್ದು, ಮೊದಲ ಇನ್ನಿಂಗ್ಸ್​ನಲ್ಲಿ 23 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಇಂಗ್ಲೆಂಡ್‌ ಪರ ಆರಂಭಿಕ ಕ್ರೌಲಿ ಅತ್ಯಧಿಕ 64 ರನ್​ಗಳ ಇನ್ನಿಂಗ್ಸ್ ಆಡಿದರೆ, ಹ್ಯಾರಿ ಬ್ರೂಕ್ ಕೂಡ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಇತ್ತ ಟೀಂ ಇಂಡಿಯಾ ಪರ ಮೊಹಮ್ಮದ್ ಸಿರಾಜ್ (Mohammed Siraj) 4 ವಿಕೆಟ್ ಪಡೆದರೆ, ಕನ್ನಡಿಗ ಪ್ರಸಿದ್ಧ್ ಕೃಷ್ಣ 3 ವಿಕೆಟ್ ಉರುಳಿಸಿದರು.

ಇಂಗ್ಲೆಂಡ್​ಗೆ ಸ್ಫೋಟಕ ಆರಂಭ

ಬೆನ್ ಡಕೆಟ್ ಮತ್ತು ಜ್ಯಾಕ್ ಕ್ರೌಲಿ ಜೋಡಿ ವೇಗವಾಗಿ ಬ್ಯಾಟಿಂಗ್ ಮಾಡುವ ಮೂಲಕ ಇಂಗ್ಲೆಂಡ್‌ಗೆ ಬಲವಾದ ಆರಂಭವನ್ನು ನೀಡಿತು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಇಂಗ್ಲೆಂಡ್‌ ಪೆವಿಲಿಯನ್ ಪರೇಡ್ ಶುರುವಾಯಿತು. ಆದಾಗ್ಯೂ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಮುನ್ನಡೆ ನೀಡುವಲ್ಲಿ ಯಶಸ್ವಿಯಾದರು. ಜ್ಯಾಕ್ ಕ್ರೌಲಿ ಇಂಗ್ಲೆಂಡ್ ಪರ ಅತಿ ಹೆಚ್ಚು ರನ್ 64 ರನ್‌ಗಳ ಇನ್ನಿಂಗ್ಸ್ ಆಡಿದರು. ಹ್ಯಾರಿ ಬ್ರೂಕ್ 53 ರನ್ ಗಳಿಸಿದರೆ, ಬೆನ್ ಡಕೆಟ್ 43 ರನ್ ಗಳಿಸಿದರು. ಡಕೆಟ್ ಮತ್ತು ಕ್ರೌಲಿ 12.5 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 92 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಭಾರತದ ಪರ ಮೊಹಮ್ಮದ್ ಸಿರಾಜ್ 16.2 ಓವರ್‌ಗಳಲ್ಲಿ 86 ರನ್‌ಗಳಿಗೆ 4 ವಿಕೆಟ್‌ಗಳನ್ನು ಮತ್ತು ಪ್ರಸಿದ್ಧ್ 16 ಓವರ್‌ಗಳಲ್ಲಿ 62 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆದರು.

ಭಾರತದ ಮೊದಲ ಇನ್ನಿಂಗ್ಸ್ ಹೀಗಿತ್ತು

ಇದಕ್ಕೂ ಮೊದಲು, ಎರಡನೇ ದಿನದ ಮೊದಲ ಸೆಷನ್​ನಲ್ಲಿ ಭಾರತ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 224 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ದಿನ ಕೇವಲ 20 ರನ್‌ ಕಲೆಹಾಕಿದ ಟೀಂ ಇಂಡಿಯಾಕ್ಕೆ ಕೆಳ ಕ್ರಮಾಂಕ ಕೈಹಿಡಿಯಲಿಲ್ಲ. ಎರಡನೇ ದಿನದಂದು, ಭಾರತದ ಇನ್ನಿಂಗ್ಸ್ ಕೇವಲ 34 ಎಸೆತಗಳಲ್ಲಿ ಕೊನೆಗೊಂಡಿತು. ಭಾರತವು ಕೊನೆಯ ನಾಲ್ಕು ವಿಕೆಟ್‌ಗಳನ್ನು ಕೇವಲ 6 ರನ್‌ಗಳ ಒಳಗೆ ಕಳೆದುಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಕರುಣ್ ನಾಯರ್ ಅತಿ ಹೆಚ್ಚು 57 ರನ್‌ ಗಳಿಸಿದರು. ಇಂಗ್ಲೆಂಡ್ ಪರ, ಗಸ್ ಅಟ್ಕಿನ್ಸನ್ 33 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆದರು.

Views: 10

Leave a Reply

Your email address will not be published. Required fields are marked *